ಶುಕ್ರವಾರ, ಮೇ 27, 2022
21 °C
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಸಂಭ್ರಮದ ಈದ್‌–ಉಲ್‌–ಫಿತ್ರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಂಜಾನ್‌ ಮಾಸದ ಕೊನೆಯ ದಿನವಾದ ಮಂಗಳವಾರ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಜಿಲ್ಲಾದ್ಯಂತ ಸಡಗರ–ಸಂಭ್ರಮದಿಂದ ಆಚರಿಸಿದರು. ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಿದರು.

ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸರಳವಾಗಿ ಹಬ್ಬವನ್ನು ಆಚರಿಸಲಾಗಿತ್ತು. ಸೋಂಕು ಇಳಿಮುಖವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಕಳಿಸಿದ್ದರಿಂದ ಹಬ್ಬದ ಸಂಭ್ರಮ ಜೋರಾಗಿತ್ತು.

ಒಂದು ತಿಂಗಳು ಕಠಿಣ ಉಪವಾಸ ಆಚರಿಸಿದ್ದ ಮುಸ್ಲಿಮರಿಗೆ ಸೋಮವಾರ ಸಂಜೆ ಚಂದ್ರ ದರ್ಶನವಾಗಿತ್ತು. ಶಾಂತಿ–ಸಹನೆ ಹಾಗೂ ಹಸಿವಿನ ಮಹತ್ವ ಸಾರುವ ಹಬ್ಬವು ನಗರದ ಮುಸ್ಲಿಂ ಬಡಾವಣೆಗಳಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು.

ಮಂಗಳವಾರ ಬೆಳಿಗ್ಗೆ ಮನೆಗಳಲ್ಲಿ ಹಬ್ಬದ ಸಿದ್ಧತೆ ನಡೆಸಿದರು. ಶುಭ್ರ ಬಿಳಿ ಬಟ್ಟೆ ಧರಿಸಿ, ಸುಗಂಧ ದ್ರವ್ಯದ ಪರಿಮಳವನ್ನು ಪುರುಷರು ಪಸರಿಸಿದರು. ಬಳಿಕ ಪ್ರಾರ್ಥನೆ ಸಲ್ಲಿಸಲು ಅಗತ್ಯವಿರುವ ಚಾಪೆ, ಚಾದಾರವನ್ನು ಕೈಯಲ್ಲಿ ಹಿಡಿದು ಈದ್ಗಾ ಮೈದಾನದತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 9 ಗಂಟೆಯಿಂದಲೇ ಈದ್ಗಾ ಮೈದಾನಕ್ಕೆ ಧಾವಿಸುವವರ ಸಂಖ್ಯೆ ಹೆಚ್ಚಾಗಿತ್ತು. ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆ ಸ್ಥಳಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು. ಮೈದಾನಕ್ಕೆ ಸಾಗಲು ತೊಂದರೆಯಾಗದಂತೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು.

ಚಂದ್ರವಳ್ಳಿ, ಅಗಸನಕಲ್ಲು, ಚೇಳುಗುಡ್ಡ, ಎಪಿಎಂಸಿಯ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಧರ್ಮ ಗುರುಗಳು ಕುರಾನ್‌ ಪಠಿಸಿ, ಸಂದೇಶ ಬೋಧಿಸಿದರು. ಮೈದಾನದಲ್ಲಿ ಸಾವಿರಾರು ಮಂದಿ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 

ಮೈದಾನದ ಹೊರಭಾಗದಲ್ಲಿ ಕುಳಿತಿದ್ದ ಬಡವರು, ನಿರ್ಗತಿಕರಿಗೆ ಕೈಲಾದಷ್ಟು ಆರ್ಥಿಕ ನೆರವು ನೀಡಿದರು. ಮಕ್ಕಳ ಕೈಯಿಂದ ಹಣ ಕೊಡಿಸಿ ಧನ್ಯತೆ ಮೆರೆದರು. ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಕಾಂಗ್ರೆಸ್‌ ಮುಖಂಡ ಎಚ್‌.ಎ. ಷಣ್ಮುಖಪ್ಪ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.