ಮಂಗಳವಾರ, ಜೂನ್ 22, 2021
28 °C
ಪ್ಲೇಗ್‌ ರೋಗದಿಂದಲೂ ಏಕನಾಥೇಶ್ವರಿ ಜಾತ್ರೆ ನಡೆದಿರಲಿಲ್ಲ

ಶತಮಾನದ ಬಳಿಕ ಅಧಿದೇವತೆ ಜಾತ್ರೆ ಸ್ಥಗಿತ

ಕೆ.ಎಸ್‌.ಪ್ರಣವಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಬರಗೇರಮ್ಮ ಹಾಗೂ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ‌ ಜಾತ್ರೆ 1919ರಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ‌ ಪ್ಲೇಗ್ ರೋಗದಿಂದಲೂ ರದ್ದಾಗಿತ್ತು.

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕಾರಣದಿಂದ ಜಿಲ್ಲಾಡಳಿತದ ಆದೇಶದ ಮೇರೆಗೆ ಶತನಾಮದ ಬಳಿಕ ಜಾತ್ರೆ ರದ್ದಾಗಿದೆ. 1986ರಲ್ಲಿ ಸುಪ್ರಸಿದ್ಧ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ನಂತರ ಜಿಲ್ಲೆಯ ಕೆಲವೆಡೆ ಕಾಲರಾ ಸಾಂಕ್ರಾಮಿಕವಾಗಿ ವ್ಯಾಪಿಸಿತ್ತು. ಇದೇ ಕಾರಣಕ್ಕೆ ಅಂದಿನ ಜಿಲ್ಲಾಧಿಕಾರಿ ಏಕನಾಥೇಶ್ವರಿ ಜಾತ್ರೆ ರದ್ದುಗೊಳಿಸಲು ಆದೇಶಿಸಿದ್ದರು. ಆದರೆ, ಸಮಿತಿಯವರು ಜಿಲ್ಲಾಧಿಕಾರಿ ಮನವೊಲಿಸಿ ಆಗ ಜಾತ್ರೆ ನಡೆಸಿದ್ದರು. ಈ ಬಾರಿ ಅಂತಹ ಸಾಧ್ಯತೆ ಇಲ್ಲ.

ಒಂಬತ್ತು ಮಂದಿ ಅಕ್ಕ-ತಂಗಿಯರು ದುರ್ಗವನ್ನು ರಕ್ಷಿಸುವ ಶಕ್ತಿದೇವತೆಗಳು ಎಂಬ ನಂಬಿಕೆ ಪಾಳೆಗಾರರ ಕಾಲದಿಂದಲೂ ಇದೆ. ಹೀಗಾಗಿ ಇವರನ್ನು ನಗರದ ನವದುರ್ಗೆಯರು ಎಂದೇ ಗುರುತಿಸುತ್ತಾರೆ. ನೂರಾರು ವರ್ಷಗಳಿಂದಲೂ ಜಾತ್ರೆಯನ್ನು ಶ್ರದ್ಧಾಭಕ್ತಿಯಿಂದ ಭಕ್ತರು ಆಚರಿಸುತ್ತ ಬಂದಿದ್ದಾರೆ.

ಯುಗಾದಿ ಹಬ್ಬವಾದ‌ ಬಳಿಕ ಬರುವ ಮಂಗಳವಾರವೇ ಜಾತ್ರೆಗೆ ಸಾರು ಹಾಕುವ ಸಂಪ್ರದಾಯವಿದೆ. ಈ‌ ಪ್ರಕ್ರಿಯೆ ನಡೆದ ಹದಿನೈದು ದಿನದೊಳಗೆ ಜಾತ್ರೆ ನಡೆಯುವುದು ಪರಂಪರೆ. ಯುಗಾದಿ ಹಬ್ಬಕ್ಕೂ ಮೊದಲೇ ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ ಈ ಬಾರಿ ಜಾತ್ರೆಯ ಸಿದ್ಧತೆಗೆ ಅವಕಾಶವಿಲ್ಲ. ಸರಳ ಆಚರಣೆಗೆ ಸಮಿತಿ ಮಾಡಿದ ಮನವಿಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ.

‘ಮರಗಳಲ್ಲಿನ ಎಲೆಗಳೆಲ್ಲವೂ ಉದುರಿ, ಹೊಸದಾಗಿ ಚಿಗುರೊಡೆಯುವ ವಸಂತ ಋತುವಿನ ಶುಭ ಸಂದರ್ಭದಲ್ಲೇ ದೇವಿಯರ ಜಾತ್ರೆ ನಡೆಯಬೇಕು. ಇದರಿಂದ ವರ್ಷವೀಡಿ ಮನುಷ್ಯರು ಹೊಸತನದೊಂದಿಗೆ ಸಹೋದರತ್ವದಿಂದ ಕೂಡಿ ಬಾಳುವ ಹಿನ್ನೆಲೆಯನ್ನು ಏಕನಾಥೇಶ್ವರಿ ದೇವಿ ಜಾತ್ರೆ ಹಾಗೂ ಅಕ್ಕ-ತಂಗಿಯರ ಭೇಟಿ ಮಹೋತ್ಸವ ಹೊಂದಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಕಾಲವೂ ಸೂಕ್ತವಲ್ಲ. ಏಪ್ರಿಲ್ ನಂತರ ಜಾತ್ರೆ ನಡೆಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಹಿರಿಯರು.

‘ಮುಂದಿನ ಯುಗಾದಿ ಹಬ್ಬದೊಳಗೆ ಜಾತ್ರೆ ನಡೆಸಬೇಕು. ಇಲ್ಲದಿದ್ದರೆ, ಮೂರು ವರ್ಷ ಜಾತ್ರೆ ನಡೆಸುವಂತಿಲ್ಲ’ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಸಮಿತಿ ತೀರ್ಮಾನದ ಮೇಲೆ ಇದು ಅವಲಂಬನೆಯಾಗಿದೆ.

ಏಕನಾಥೇಶ್ವರಿ ದೇವಿ ಜಾತ್ರೆ ಮುಗಿದ ನಂತರ ಬರುವ ಮಂಗಳವಾರ ಹಿರಿಯ ಅಕ್ಕನ ಅಣತಿಯಂತೆ ಅಕ್ಕ–ತಂಗಿಯರ ಭೇಟಿ ನಡೆಯುತ್ತದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಅಕ್ಕ-ತಂಗಿಯರು ಇಲ್ಲಿನ ರಾಜಬೀದಿ ದೊಡ್ಡಪೇಟೆಯಲ್ಲಿ ಭೇಟಿಯಾಗುವುದು ಸಂಪ್ರದಾಯ. ಹದಿನೈದು ದಿನಗಳ ಕಾಲ ಸಂಭ್ರಮದಿಂದ ನಡೆಯುವ ಜಾತ್ರೆ ರದ್ದಾಗಿರುವ ವಿಷಯ ತಿಳಿದ ಸಾವಿರಾರು ಭಕ್ತರ ಉತ್ಸಾಹ ಕುಗ್ಗಿದೆ. ‘ಇನ್ನೂ ಮೂರು ವರ್ಷ ಜಾತ್ರೆ ನಡೆಯದಿದ್ದರೆ ಹೇಗೆ’ ಎಂಬುದು ಅನೇಕ ಭಕ್ತರ ಪ್ರಶ್ನೆ.

ಆಚರಣೆಯ ವಿಶೇಷತೆಯೇನು?

ದೇವಿಯರ ದೇಗುಲಗಳನ್ನೇ ಗಂಡನ ಮನೆ, ಭಕ್ತರ ಮನೆಗಳನ್ನು ತವರು ಮನೆ ಎಂಬ ನಂಬಿಕೆ ಇದೆ. ತವರಿಗೆ ಹೆಣ್ಣು ಮಕ್ಕಳು ಬಂದಾಗ ಮಡಿಲಕ್ಕಿ ಹಾಕಿ ಕಳಿಸುವ ಪರಿಪಾಠವಿದೆ. ಅದೇ ರೀತಿ ಜಾತ್ರೆ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹತ್ತದಿನೈದು ದಿನ ಊರಾಡುವ ದೇವಿಯರನ್ನು ಮನೆ ಮಕ್ಕಳಂತೆ, ತಾಯಿಗಿಂತಲೂ ಮಿಗಿಲಾದ ದೇವರಂತೆ ಕಾಣುತ್ತಿರುವ ಭಕ್ತರು ಮಡಿಲಕ್ಕಿ ಸಮರ್ಪಿಸಿ, ಪೂಜೆ ಸಲ್ಲಿಸಲಾಗುತ್ತದೆ.

ಮನೆಗಳಲ್ಲಿನ ಚಿಣ್ಣರಿಂದ ಹಿರಿಯರವರೆಗೂ ಎಲ್ಲರ ಆರೋಗ್ಯ ಕಾಪಾಡಲಿ. ಯಾರಿಗೂ ಅಮ್ಮಾ, ದಢಾರ, ಕಾಲರಾ ಇತರೆ ಸಾಂಕ್ರಾಮಿಕ ರೋಗ ಬರಬಾರದು ಎಂಬ ಕಾರಣಕ್ಕೂ ಮಡಿಲಕ್ಕಿ ಸಮರ್ಪಿಸುವ ಆಚರಣೆ ಚಾಲ್ತಿಯಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು