ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು | ಸಹಜ ಕೃಷಿಯಲ್ಲಿ ಎಂಜಿನಿಯರ್‌ ಕೈಚಳಕ

ತೆಂಗು, ಅಡಿಕೆ ತೋಟದಲ್ಲಿ ವಿವಿಧ ಜಾತಿಯ ಹಣ್ಣುಗಳ ಬೆಳೆ, ಇಳುವರಿ, ಆದಾಯ ಹೆಚ್ಚಳ
Published 10 ಜುಲೈ 2024, 7:14 IST
Last Updated 10 ಜುಲೈ 2024, 7:14 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಎಂಜಿನಿಯರಿಂಗ್‌ ಓದಿಯೂ ಕೃಷಿಯಲ್ಲಿ ತೊಡಗಿರುವ ಯುವ ರೈತರೊಬ್ಬರು ಯಶಸ್ಸನ್ನು ಸಾಧರ್ಇಸಿ ಇತರರಿಗೆ ಮಾದರಿಯಾಗಿದ್ದಾರೆ.

ಚಿಕ್ಕಜಾಜೂರು ಗ್ರಾಮದ ಎಚ್‌.ಎಂ.ದಯಾನಂದ ಅವರ ಪುತ್ರ ಎಚ್‌.ಡಿ. ವೀರೇಶ್‌ ಬಿ.ಟೆಕ್‌ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 2019–20ರಲ್ಲಿ ಲಾಕ್‌ಡೌನ್‌ ಆದಾಗ, ಗ್ರಾಮಕ್ಕೆ ಬಂದು ಮನೆಯಿಂದಲೇ ಕೆಲಸ ಮುಂದುವರಿಸಿದ್ದಾರೆ. ಜೊತೆಗೆ ಸಹಜ ಕೃಷಿಯಲ್ಲಿ ಸಂತೃಪ್ತಿಯ ನೆಲೆ ಕಂಡುಕೊಂಡಿದ್ದಾರೆ. 

ಬಿಡುವಿನ ವೇಳೆಯಲ್ಲಿ ತೋಟಕ್ಕೆ ಹೋಗಿ ಕೃಷಿ ಮಾಡಲಾರಂಭಿಸಿದರು. ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ತಾತ ಹಾಗೂ ತಂದೆ ಬೆಳೆಸಿದ ತೆಂಗು ಹಾಗೂ ಅಡಿಕೆ ತೋಟದಲ್ಲಿ ಸುಧಾರಿತ ಕೃಷಿ ಮಾಡಲು, ಪ್ರಗತಿಪರ ರೈತರ ತೋಟಗಳಿಗೆ ಹೋಗಿ ಅವರ ಕೃಷಿ ಮಾದರಿಗಳನ್ನು ತಿಳಿದುಕೊಂಡು ಬಂದರು.

ತಮ್ಮ ತೋಟದಲ್ಲೂ ಅಂಥದ್ದೇ ತಂತ್ರಗಾರಿಕೆ ಅಳವಡಿಸಿಕೊಂಡು, ನಾಲ್ಕು ವರ್ಷಗಳಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಿ, ಹೊರ ಮಣ್ಣನ್ನು ಬಳಸದೇ ಕೃಷಿ ಮಾಡಿದ್ದಾರೆ. ಅಡಿಕೆ, ತೆಂಗಿನ ಗರಿಗಳು, ಗೆಡ್ಡೆ ಗೆಣಸು ಹಾಗೂ ಇತರೆ ಸಸಿಗಳ ತ್ಯಾಜ್ಯದಿಂದಲೇ ಉತ್ಕೃಷ್ಟವಾದ ಸಹಜ ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. ಇದರಿಂದ, ಕೂಲಿ ಕಾರ್ಮಿಕರ ಗೋಜಿಲ್ಲದೆ, ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಹಾಗೂ ಆದಾಯ ಗಳಿಸುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಇರುವುದು ಇವರ ಕೃಷಿಗೆ ಇಂಬು ನೀಡಿದಂತಾಗಿದೆ.

ಅಂತರಬೆಳೆಯೇ ಜೀವಾಳ: ತೆಂಗು ಹಾಗೂ ಅಡಿಕೆ ತೋಟಗಳಲ್ಲಿ ಅಂತರ ಬೆಳೆಯಾಗಿ ಬಾಳೆ, ಕಾಳುಮೆಣಸು, ಕೋಕೋ, ಏಲಕ್ಕಿ, ಜಾಕಾಯಿ, ಗೆಣಸು, ಅರಿಶಿನ, ಶುಂಠಿ, ಪಪ್ಪಾಯ ಬೆಳೆದಿದ್ದಾರೆ. ಅಡಿಕೆ ಹಾಗೂ ತೆಂಗಿನ ಮರಗಳ ನಡುವೆ ನಂಜನಗೂಡು ರಸಬಾಳೆ, ಜೇನುಮುದಗ, ಕರಿಬಾಳೆ, ಚಂದ್ರಬಾಳೆ, ರಾಜಬಾಳೆ, ಏಲಕ್ಕಿಬಾಳೆ, ಚಿಕ್ಕೋಡಿ ಜವಾರಿಬಾಳೆ, ಕಲ್ಲುಬಾಳೆ, ಪಚ್ಚಬಾಳೆ, ಬಿಳಿ ಹಾಗೂ ಬೂದು ಬಾಳೆಗಳ ತಳಿಗಳನ್ನು ನಾಟಿ ಮಾಡಿದ್ದಾರೆ.

ತೆಂಗಿನ ತೋಟದಲ್ಲಿ ಅಂಜೂರ, ವಾಟರ್‌ ಆ್ಯಪಲ್‌, ಕಾಶ್ಮೀರಿ ಆ್ಯಪಲ್‌, ರೋಜ್‌ ಆ್ಯಪಲ್‌, ಚೆರಿ, ಪೇರಲ, ನಿಂಬೆ, ಮೂಸಂಬಿ, ಕಿತ್ತಳೆ, ಪಪ್ಪಾಯ, ಹಲಸು, ಮಾವು, ಬಾರೆ, ಸಪೋಟ, ನೇರಳೆ, ದಾಳಿಂಬೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೆ  ಕಾಫಿ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಕಳೆದ ವರ್ಷ ಸುಮಾರು 75 ಕೆ.ಜಿ.ಯಷ್ಟು ಕಾಫಿ ಬೀಜ ತೆಗೆದಿದ್ದಾರೆ. ತೋಟದಲ್ಲಿ 100ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು, ಹಣ್ಣು, ಹೂವಿನ ಸಸಿಗಳನ್ನು ಬೆಳೆದಿದ್ದಾರೆ.

‘ಸಹಜ ಕೃಷಿ ಅಳವಡಿಸಿ ಕೊಂಡಿರುವುದರಿಂದ ಇಡೀ ತೋಟ ಹಚ್ಚ ಹಸಿರಿನಿಂದ ಇದೆ. ನಾಲ್ಕು ವರ್ಷಗಳಿಂದ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ, ಹೀಗಾಗಿ ಬೆಳೆಗೆ ಅನುಕೂಲವಾಗಿದೆ’ ಎನ್ನುತ್ತಾರೆ ವೀರೇಶ್‌.

ಚಿಕ್ಕಜಾಜೂರಿನ ರೈತ ವೀರೇಶ್ ಅವರ ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದಿರುವ ಬಾಳೆ.
ಚಿಕ್ಕಜಾಜೂರಿನ ರೈತ ವೀರೇಶ್ ಅವರ ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದಿರುವ ಬಾಳೆ.
ಚಿಕ್ಕಜಾಜೂರಿನ ರೈತ ವೀರೇಶ್ ಅವರ ತೋಟದಲ್ಲಿನ ಕೃಷಿ ಹೊಂಡ.
ಚಿಕ್ಕಜಾಜೂರಿನ ರೈತ ವೀರೇಶ್ ಅವರ ತೋಟದಲ್ಲಿನ ಕೃಷಿ ಹೊಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT