ಬುಡಕಟ್ಟು ಸಂಸ್ಕೃತಿಯ ತೊಟ್ಟಿಲಾಗಿರುವ ಚಿತ್ರದುರ್ಗ ಆಹಾರ ಸಂಸ್ಕೃತಿ ವಿಚಾರದಲ್ಲಿ ಬಹಳಷ್ಟು ವಿಶೇಷತೆ ಒಳಗೊಂಡಿದೆ. ಜಿಲ್ಲೆಯಲ್ಲಿ ಸಸ್ಯಹಾರಕ್ಕಿಂತ ಮಾಂಸಹಾರ ಪ್ರಿಯರ ಸಂಖ್ಯೆ ಕೊಂಚ ಹೆಚ್ಚಾಗಿದೆ. ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ಭಾಗದಲ್ಲಿ ನಡೆಯುವ ಹಬ್ಬ– ಹರಿದಿನಗಳಲ್ಲಿ ಮಾಂಸ ಖಾದ್ಯವೇ ಮುಖ್ಯವಾಗಿದೆ.
ಜಿಲ್ಲೆಯಲ್ಲಿ ಎತ್ತ ಸಾಗಿದರೂ ಒಂದೊಂದು ರುಚಿ ಸವಿಯುವ ಭಾಗ್ಯ ಸಿಗುವುದಂತು ಖಚಿತ. ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು ಇಲ್ಲಿ ಸಿಗುವ ಮಂಡಕ್ಕಿ– ಮಿರ್ಚಿ ಸವಿದು ಆಹ್ಲಾದಿಸುತ್ತಾರೆ. ಮುಂಜಾನೆ ಕೋಟೆಯಲ್ಲಿ ಒಂದು ಸುತ್ತು ವಾಯುವಿಹಾರ ನಡೆಸಿ ಹಾಗೇ ಚಿಕ್ಕಪೇಟೆ, ದೊಡ್ಡಪೇಟೆ ಕಡೆ ಹೆಜ್ಜೆ ಹಾಕಿದರೆ ಸಾಕು ಕೊಂಚ ನವೀಕೃತಗೊಂಡಿರುವ ಹಳೆ ಹೋಟೆಲ್‌ಗಳಲ್ಲಿ ಇಡ್ಲಿ ಸೂಪ್, ಮಿನಿ ಮಸಾಲೆ ದೋಸೆ, ತುಪ್ಪದ ಮಸಾಲೆ ದೋಸೆ ಬಾಯಲ್ಲಿ ನೀರೂರಿಸುತ್ತವೆ.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಮನೆ ಶೈಲಿಯ ತಿಂಡಿಗಳನ್ನೇ ಇಲ್ಲಿ ಮಾಡಲಾಗುತ್ತದೆ. ಪಾಲಕ್ ರೈಸ್‌ಬಾತ್, ಟೊಮೆಟೊ ರೈಸ್‌ಬಾತ್, ಪಲಾವ್, ರೈಸ್‌ಬಾತ್, ಅವಲಕ್ಕಿ, ಚೌಚೌ ಬಾತ್, ಶಾವಿಗೆ ಬಾತ್, ಮಿನಿ ಕಾಫಿ, ಇಡ್ಲಿ ಸೂಪ್ ಹಾಗೂ ಪೇಪರ್ ಬೆಣ್ಣೆ ದೋಸೆಗೆ ಅನೇಕರು ಮನಸೋತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಕೆಲ ಸಮಯ ಕಳೆಯಲು ಬರುವವರಿಗಾಗಿ ಮಂಡಕ್ಕಿ ಮಿರ್ಚಿ, ಮೊಸರು ವಡೆ, ಈರುಳ್ಳಿ ಪಕೋಡಾ ಸೇರಿ ಇತರ ತಿನಿಸುಗಳು ಸಿಗುತ್ತವೆ. ಜೀರಿಗೆ, ಕಾಳು ಮೆಣಸು, ಶುಂಠಿ ಮಿಶ್ರಿತ ಸೂಪ್ ಹಾಗೂ ಚಟ್ನಿಯೊಂದಿಗೆ ಬಿಸಿಬಿಸಿಯಾದ ಇಡ್ಲಿ ಫೇಮಸ್. ಸೂಪ್‌ನಿಂದಾಗಿ ಹೋಟೆಲ್‌ನಲ್ಲಿ ಇಡ್ಲಿ ಬಹು ಜನಪ್ರಿಯ.
ದಾವಣಗೆರೆ ಅಷ್ಟೇ ಅಲ್ಲದೆ ಚಿತ್ರದುರ್ಗವೂ ಬೆಣ್ಣೆ ದೋಸೆಯಿಂದ ಜನಪ್ರಿಯತೆ ಗಳಿಸಿದೆ. ತುಪ್ಪದಿಂದಲೇ ತಯಾರುಗುವ ಬೆಣ್ಣೆ ಮಸಾಲೆ ದೋಸೆ ಗ್ರಾಹಕರನ್ನು ಸೆಳೆಯುತ್ತದೆ. ಓಪನ್ ದೋಸೆ, ಖಾಲಿ ದೋಸೆ, ಆನಿಯನ್ ದೋಸೆ, ಸೆಟ್‌ದೋಸೆ ಹೀಗೆ ವೈವಿಧ್ಯಮಯ ದೋಸೆ ರುಚಿಗೆ ಇಲ್ಲಿನ ಸಂತೆಹೊಂಡ ಹಾಗೂ ಆನೆಬಾಗಿಲು ಸಮೀಪದ ಹೋಟೆಲ್‌ಗಳು ಜನಜನಿತವಾಗಿವೆ. ಜೋಗಿಮಟ್ಟಿ, ಆಡುಮಲ್ಲೇಶ್ವರದಲ್ಲಿ ಹಸಿರಿನ ಸೌಂದರ್ಯ ಸವಿದು ನಗರದತ್ತ ಮುಖ ಮಾಡುತ್ತಿದ್ದಂತೆ ಎಡತಾಕುವ ಚಿಕ್ಕ ಹೋಟೆಲ್‌ನಲ್ಲಿ ರಾಗಿ ಕಿಲ್ಸ, ಮಂಡಕ್ಕಿ ಮಿರ್ಚಿ, ಹಸಿ ಕಾಳಿನ ಕೋಸುಂಬರಿ ಸವಿಯುವುದೇ ಆನಂದ.
ಇನ್ನೂ ಜೆಸಿಆರ್ ಮುಖ್ಯ ರಸ್ತೆಗೆ ಕಾಲಿಟ್ಟರೆ ಸಾಕು ತಟ್ಟೆ ಇಡ್ಲಿಗಳು ಖಾದ್ಯಪ್ರಿಯರನ್ನು ಸ್ವಾಗತಿಸುತ್ತವೆ. ಮೃದುವಾದ, ಬಿಸಿ ಬಿಸಿಯಾದ ತಟ್ಟೆ ಇಡ್ಲಿಯನ್ನು ಖಾರದ ಚಟ್ನಿ, ಸಾಂಬಾರಿನೊಂದಿಗೆ ಸೇವಿಸುವ ಖುಷಿಯೇ ಚೆಂದ. ಜೆಸಿಆರ್ ರಸ್ತೆ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ತರಹೇವಾರಿ ತಿಂಡಿ, ತಿನಿಸುಗಳಿಗೆ ಬೇಡಿಕೆ ಇದೆ. ಅದರಲ್ಲಿ ತಟ್ಟೆ ಇಡ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ತಟ್ಟೆ ಇಡ್ಲಿ ಹೋಟೆಲ್‌ಗಳಿಂದ ಹೊರಸೂಸುವ ಪರಿಮಳ ಗ್ರಾಹಕರನ್ನು ಆಕರ್ಷಿಸುತ್ತದೆ. ಭುವನೇಶ್ವರಿ ದೇವಿ ವೃತ್ತದ ಮೂಲೆಯ ಚಿಕ್ಕ ಹೋಟೆಲ್‌ನ ‘ಪಡ್ಡು’ ಆಹಾರ ಪ್ರಿಯರ ಆಕರ್ಷಣೆಯಾಗಿದೆ. ಸಂಜೆ ವೇಳೆಗೆ ನಾಲಿಗೆಗೆ ಹಿತವೆನಿಸುವಂತೆ ಚೌಚೌ ಬಾತ್, ಉಪ್ಪಿಟ್ಟು, ಕೇಸರಿಬಾತ್, ರೈಸ್‌ಬಾತ್, ಪಲಾವ್, ಪೂರಿ, ಉದ್ದಿನ ವಡೆ, ರವಾ ದೋಸೆ ಇಲ್ಲಿ ಲಭ್ಯ.
ಮುಂಜಾನೆ ಹೊಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಒಂದೆರಡು ಹೆಜ್ಜೆ ಹಾಕಿದರೆ ಸಾಕು ತಟ್ಟೆ ಇಡ್ಲಿ, ಪೂರಿ ಸಾಗು, ಮಂಡಕ್ಕಿ ಮಿರ್ಚಿಯ ಘಮ ಸೆಳೆಯುತ್ತದೆ. ಕೊಂಚ ತಡವಾದರೆ ಖಾಲಿ ಎಂಬಷ್ಟು ರುಚಿಯಾದ ತಿಂಡಿ ಇಲ್ಲಿ ಲಭ್ಯವಿದೆ. ಜಿಲ್ಲಾ ಆಸ್ಪತ್ರೆ ವೃತ್ತ, ಜೆಸಿಆರ್, ದೊಡ್ಡಪೇಟೆ, ಚಿಕ್ಕಪೇಟೆ, ಗಾರೇಹಟ್ಟಿ, ಕನಕ ವೃತ್ತದ ಮಂಡಕ್ಕಿ ಮಿರ್ಚಿ ಇಳಿ ಸಂಜೆಗೆ ಸಾಥ್ ನೀಡುತ್ತವೆ. ಇನ್ನೂ ರೊಟ್ಟಿ, ಮುದ್ದೆ, ಚಪಾತಿ, ಈರುಳ್ಳಿ, ಕಾಳು ಪಲ್ಯದ ಸಂಪ್ರದಾಯಿಕ ಖಾನಾವಳಿಗಳು ಭೋಜನ ಪ್ರಿಯರ ನೆಚ್ಚಿನ ತಾಣಗಳಾಗಿವೆ.
ನಾಟಿ ಚಿಕನ್ ಮಟನ್ ಸಾಂಬಾರ್ ಜಿಲ್ಲೆಯಲ್ಲಿ ಸಸ್ಯಹಾರದಷ್ಟೇ ಮಾಂಸಾಹಾರ ಖಾದ್ಯಗಳಲ್ಲೂ ವಿಶೇಷತೆಯಿದೆ. ನಾಟಿ ಚಿಕನ್ ಮಟನ್ ಸಂಬಾರ್ ಬಿರಿಯಾನಿಯ ಘಮ ಒಮ್ಮೆ ರುಚಿ ನೋಡಬೇಕು ಎನ್ನುವಂತಿದೆ. ಸಂಪ್ರದಾಯಿಕ ಶೈಲಿಯಲ್ಲಿ ಮಾಂಸಾಹಾರ ಸಿದ್ಧಗೊಳಿಸುವುದು ಇಲ್ಲಿನ ವಿಶೇಷ. ಉರುವಲು ಕಟ್ಟಿಗೆಯ ಒಲೆಯಲ್ಲಿ ಚಿಕನ್ ಇಲ್ಲವೇ ಮಟನ್ ಬೇಯಿಸಿ ಹದವಾಗಿ ಮಸಾಲೆ ಮಿಶ್ರಣ ಮಾಡಿ ಧಮ್ ಕಟ್ಟುವ ಬಿರಿಯಾನಿ ಎಂಥವರನ್ನು ತನ್ನತ್ತ ಸೆಳೆಯುತ್ತದೆ. ಚಿಕನ್ ಸೂಪ್ ಬೋಟಿ ನೀರರು ದೋಸೆ ಕೂಡ ಕೆಲವು ಸ್ಥಳಗಳಲ್ಲಿ ಲಭ್ಯವಿದ್ದು ಜಿಹ್ವಾ ಚಪಲ ತಣಿಸುತ್ತದೆ. ಇಲ್ಲಿ ದೊರೆಯುವ ರಾಗಿ ದೋಸೆ ಬಂಜಾರ ಚಿಕನ್ ಘೀ ರೋಸ್ಟ್ ಅಣಬೆ (ಮಶ್ರೂಮ್) ಟಿಕ್ಕಾ ಪದಾರ್ಥಗಳು ಕಣ್ಮನ ಸೆಳೆಯುವುದಷ್ಟೇ ಅಲ್ಲ ಬಾಯಲ್ಲಿ ನೀರೂರಿಸುತ್ತವೆ. ಮಟನ್ ಕೈಮಾ ಮಡಿಕೆ ಮಟನ್ ಮಟನ್ ಚಾಪ್ಸ್ ರುಚಿ ಸವಿಯುವುದೇ ಆನಂದ. ಮಲೆನಾಡು ಕರಾವಳಿ ಶೈಲಿಯ ಮೀನಿನ ಖಾದ್ಯಗಳನ್ನು ತಯಾರಿಸುವ ಕಲೆ ಇಲ್ಲಿನವರಿಗೆ ಕರಗತವಾಗಿದೆ. ರಸ್ತೆ ಬದಿಯ ಎಗ್‌ರೈಸ್ ಸೆಂಟರ್‌ಗಳು ತಮ್ಮ ರುಚಿಯಲ್ಲಿ ಹಿಂದೆ ಬಿದ್ದಿಲ್ಲ. ಎಗ್ ಬ್ರೆಡ್ ಬುರ್ಜಿ ಬಾಯಿಲ್ಡ್ ಎಗ್ ಫ್ರೈ ಎಗ್ ಬುರ್ಜಿ ಬ್ರೆಡ್ ಆಮ್ಲೆಟ್ ಎಗ್ ಬ್ರೆಡ್ ಟೋಸ್ಟ್ ಎಗ್ ಮಂಚೂರಿ ಎಗ್ ಬ್ರೆಡ್ ಮಂಚೂರಿ ಸ್ಪೆಷಲ್ ಎಗ್ ರೈಸ್ ಘೀ ರೈಸ್‌ನ ರುಚಿಗೆ ಮನಸೋಲದವರು ವಿರಳ.
ಚಳ್ಳಕೆರೆಯ ಚೌಚೌ ಮಂಡಕ್ಕಿ ಸವಿ ವಾಣಿಜ್ಯ- ವ್ಯಾಪಾರದ ಜತೆಗೆ ವಿಜ್ಞಾನ ಕೇಂದ್ರವಾಗಿ ಮಾರ್ಪಟ್ಟಿರುವ ಚಳ್ಳಕೆರೆಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಚೌಚೌ ಮಂಡಕ್ಕಿ ಮಿರ್ಚಿ ಸವಿಯಬಹುದಾಗಿದೆ. ಜತೆಗೆ ನಾನ್‌ವೆಜ್ ಪ್ರಿಯರು ಬಯಸಿದಂತಹ ಖಾದ್ಯಗಳು ಸಿಗುತ್ತವೆ. ನಗರದಲ್ಲಿ ಎಲ್ಲ ತರಹದ ಹೋಟೆಲ್‌ಗಳಿದ್ದು ಒಂದೊಂದು ರುಚಿಗೆ ಹೆಸರಾಗಿವೆ. ಸ್ವಾದದ ಕಾಫಿ ಟೀ ಘಮಘಮ ವಾಸನೆಯ ಉಪ್ಪಿಟ್ಟು ಕೇಸರಿಬಾತ್ ದೋಸೆ ಶಾವಿಗೆ ಬಾತ್ ಪುಳಿಯೊಗರೆ ಪೂರಿ ರೈಸ್ ಬಾತ್ ಶೇಂಗಾ ಚಟ್ನಿ ಇಡ್ಲಿ ವಡೆ ಬಾಯಿಯಲ್ಲಿ ನೀರೂರಿಸುತ್ತವೆ. ಮಧ್ಯಾಹ್ನ ಊಟಕ್ಕೆ ಮುದ್ದೆ ಸೊಪ್ಪಿನ ಉದಕ ಸಹ ಈ ಊರಲ್ಲಿ ಸಿಗುತ್ತದೆ. ಅಡುಗೆಗೆ ತಾಜಾ ತರಕಾರಿ ಶುದ್ಧ ಕುಡಿಯುವ ನೀರು ಶುದ್ಧ ಶೇಂಗಾ ಎಣ್ಣೆ ಬಳಕೆ ಮಾಡುವುದು ಇಲ್ಲಿನ ವಿಶೇಷ. ಅಷ್ಟೇ ಅಲ್ಲದೆ ಮೀನಿನ ಖಾದ್ಯ ಸಹ ಇಲ್ಲಿನ ಹೋಟೆಲ್ ಮತ್ತು ಡಾಬಾಗಳಲ್ಲಿ ದೊರೆಯುತ್ತದೆ. ನಗರದ ನೆಹರೂ ವೃತ್ತ ವಾಲ್ಮೀಕಿ ವೃತ್ತ ತ್ಯಾಗರಾಜ ನಗರ ಬೆಂಗಳೂರು ರಸ್ತೆಯ ಮಂಡಕ್ಕಿ- ಮಿರ್ಚಿ ಅಂಗಡಿಗಳು ಅನೇಕ ವರ್ಷಗಳಿಂದ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಶುದ್ಧ ಕಡಲೆ ಹಿಟ್ಟು ತಾಜಾ ಶೇಂಗಾ ಎಣ್ಣೆಯಿಂದ ಕರಿದ ಗರಿಗರಿ ಮಿರ್ಚಿ ಅರಿಶಿಣಪುಡಿ ಕರಿಬೇವಿನ ಸೊಪ್ಪು ಬೆಳ್ಳುಳ್ಳಿ ಮಿಶ್ರಣದ ಮಂಡಕ್ಕಿ ಹಸಿ ಮೆಣಸಿನಕಾಯಿ ಬೆಳ್ಳುಳ್ಳಿ ಮಸಾಲೆ ಚಟ್ನಿ ಕೊತ್ತಬರಿ ಸೊಪ್ಪು ಈರುಳ್ಳಿಯಿಂದ ಮಾಡಿದ ಪಕೋಡ ತುಂಬಾ ರುಚಿಕರ.
ಕಡಿಮೆ ದರಕ್ಕೆ ರುಚಿಕರ ಉಪಾಹಾರ ಸ್ವಾದಿಷ್ಟ ರುಚಿಯ ಕೈಗೆಟಕುವ ದರದ ಉಪಾಹಾರಕ್ಕೆ ಹೆಸರಾಗಿದೆ ಹಿರಿಯೂರಿನ ವಾಣಿವಿಲಾಸ ನಾಲೆ ದಡದ ಬೋರ್ಡ್ ಇಲ್ಲದ ಚಿಕ್ಕ ಹೋಟೆಲ್‌ಗಳು. ಇಲ್ಲಿ ಮನೆಯಲ್ಲಿ ತಯಾರಿಸಿದ ಉಪಹಾರದ ರುಚಿ ನಿಮ್ಮದಾಗಿಸುತ್ತದೆ. ತಟ್ಟೆ ಇಡ್ಲಿ ಇಡ್ಲಿಗೆ ಹಿರಿಯೂರು ಪ್ರಸಿದ್ಧಿ ಪಡೆದಿದೆ. ಬಹುತೇಕ ಹೋಟೆಲ್‌ಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಇಡ್ಲಿ ಪಲಾವ್ ವಡೆ ದೋಸೆ ಸಿದ್ಧವಾಗಿರುತ್ತದೆ. ಎಲ್ಲಿಯೂ ದರ ಹೆಚ್ಚಿಲ್ಲ. ದಾವಣಗೆರೆ ಬಳ್ಳಾರಿ ಕಡೆಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಉಪಾಹಾರ ದೊರೆಯುತ್ತದೆ. ಮಾಂಸಾಹಾರಿಗಳಿಗೆ ನಗರದ ಪ್ರವಾಸಿ ಮಂದಿರದ ರಸ್ತೆ ವೇದಾವತಿ ಸೇತುವೆ ಅಂಚಿಗೆ ಹೊಂದಿಕೊಂಡಿರುವ ಕೆಲ ಹೋಟೆಲ್‌ಗಳು ಖ್ಯಾತಿ ಪಡೆದಿವೆ. ವಾಣಿವಿಲಾಸ ಸಾಗರದ ಕಾರಣಕ್ಕೆ ಮೀನಿನ ಖಾದ್ಯ ಇಲ್ಲಿ ಫೇಮಸ್ ಆಗಿದೆ. ಮದ್ದೇರುಹಳ್ಳದ ಸಮೀಪದ ಹೋಟೆಲ್ ಇಡ್ಲಿ ವಡಾ ತುಪ್ಪದ ದೋಸೆ ಹಾಗೂ ರಸಮ್‌ಗೆ ಖ್ಯಾತಿ ಪಡೆದಿದೆ.
ಕೆಲ್ಲೋಡಿನ ಚುರುಮುರಿ ಹೊಸದುರ್ಗ ತಾಲ್ಲೂಕು ವಿಶಿಷ್ಟ ತಿನಿಸುಗಳಿಗೆ ಪ್ರಖ್ಯಾತಿ ಪಡೆದಿದೆ. ಕೆಲ್ಲೋಡಿನ ರಸ್ತೆ ಬದಿಯಲ್ಲಿರುವ ಚುರುಮುರಿ ಅಂಗಡಿ ಅಲ್ಲಿನ ಮೆಣಸಿನಕಾಯಿ ಭಜಿ ಈ ಭಾಗದಲ್ಲಿ ಫೇಮಸ್. ಬೆಣ್ಣೆ ದೋಸೆ ಸಂಜೆ ಬಳಿಕ ಬಂಗಾರು ಪೇಟೆ ಚಾಟ್ಸ್ ಪಾನಿಪುರಿ ಮಸಾಲಾ ಪುರಿ ಹಾಗೂ ದಹಿ (ಮೊಸರು) ಪುರಿಯ ವಿಶೇಷ ರುಚಿಯನ್ನು ಇಲ್ಲಿ ಭೇಟಿ ನೀಡುವವರು ಸವಿಯಬಹುದಾಗಿದೆ.
ಘಮ ಘಮ ಒಗ್ಗರಣೆ ಮಂಡಕ್ಕಿ ರೈಲ್ವೆ ಜಂಕ್ಷನ್‌ನಿಂದ ನಾಡಿನ ಗಮನ ಸೆಳೆದಿರುವ ಚಿಕ್ಕಜಾಜೂರು ಮಂಡಕ್ಕಿ ಉಸುಲಿಗೆ (ಒಗ್ಗರಣೆ ಮಂಡಕ್ಕಿ) ಖ್ಯಾತಿ ಪಡೆದಿದೆ. ಹೆಸರಿಲ್ಲದ ಚಿಕ್ಕ ಹೋಟೆಲ್‌ಗಳಲ್ಲಿ ದೊರೆಯುವ ಉಪಾಹಾರ ರುಚಿಯ ಕಾರಣಕ್ಕೆ ಜನರನ್ನು ಆಕರ್ಷಿಸುತ್ತಿವೆ. ಬೆಳಿಗ್ಗೆ 6 ಗಂಟೆಯಿಂದ ಇಲ್ಲಿ ಮಂಡಕ್ಕಿ ಉಸುಲಿ (ಒಗ್ಗರಣೆ ಮಂಡಕ್ಕಿ) ಮೆಣಸಿನಕಾಯಿ ಬೋಂಡಾ ಪಕೋಡ ಇಡ್ಲಿ ವಡೆ ಚಿತ್ರಾನ್ನ ಖಾಲಿ ದೋಸೆ ಮಸಾಲೆ ದೋಸೆ ಮಧ್ಯಾಹ್ನ ಅನ್ನ ಸಾರು ವಡೆ ಸಂಜೆ ಖಾರದ ಮಂಡಕ್ಕಿ ಮಸಾಲಾ ಮಂಡಕ್ಕಿ ನಾಲಿಗೆಗೆ ತಕ್ಕ ರುಚಿ ಒದಗಿಸುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.