ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆ ಬೆಳೆದು ಹಿಗ್ಗಿದ ಯುವ ರೈತ

ಕೃಷಿ ಮಾತು; ನಾಲ್ಕು ಎಕರೆಯಲ್ಲಿ 2 ಸಾವಿರ ಗಿಡ; ಕೃಷಿಗೆ ಮರಳಿದ ಅತಿಥಿ ಉಪನ್ಯಾಸಕ
Published 5 ಜುಲೈ 2023, 5:42 IST
Last Updated 5 ಜುಲೈ 2023, 5:42 IST
ಅಕ್ಷರ ಗಾತ್ರ

-ಜಿ.ಬಿ.ನಾಗರಾಜ್‌

ಚಿತ್ರದುರ್ಗ: ‘ಕೃಷಿಯ ಮೇಲಿನ ವ್ಯಾಮೋಹ ಮತ್ತೆ ಹಳ್ಳಿ ಬದುಕಿಗೆ ಕರೆತಂದಿತು. ಕಡಿಮೆ ಅವಧಿ, ಅಲ್ಪ ಖರ್ಚಿನಲ್ಲಿ ಉತ್ತಮ ಆಧಾಯ ತರುವ ನುಗ್ಗೆಯನ್ನು ಬೆಳೆಯಲು ಪ್ರೇರಣೆ ಸಿಕ್ಕಿತು. ಆರಂಭದಲ್ಲಿ ಎಲ್ಲರೂ ನಿರುತ್ಸಾಹದ ಮಾತು ಆಡಿದ್ದರು. ನುಗ್ಗೆ ಗಿಡ ನೋಡಿದ ಪ್ರತಿಯೊಬ್ಬರು ಈಗ ಬೆನ್ನು ತಟ್ಟುತ್ತಿದ್ದಾರೆ...’ ಎನ್ನುವಾಗ ಜೆ.ಸಿ. ಶಶಿಕುಮಾರ್‌ ಮೊಗದಲ್ಲಿ ಮಂದಹಾಸ ಮೂಡಿತ್ತು.

ಚಳ್ಳಕೆರೆ ತಾಲ್ಲೂಕಿನ ಜಡೆಕುಂಟೆಯ ಶಶಿಕುಮಾರ್‌ ಸಮಾಜ ಕಾರ್ಯ ವಿಭಾಗದಲ್ಲಿ (ಎಂಎಸ್‌ಡಬ್ಲ್ಯು) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪರಶುರಾಂಪುರ ಕಾಲೇಜಿನಲ್ಲಿ ಕೆಲ ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿಯ ಮೇಲಿನ ಸೆಳೆತ ಅವರನ್ನು ರೈತಾಪಿ ಬದುಕಿಗೆ ಮರಳುವಂತೆ ಮಾಡಿದೆ. ನಾಲ್ಕು ಎಕರೆಯಲ್ಲಿ ನುಗ್ಗೆ ಬೆಳೆದು ಯಶಸ್ಸು ಕಂಡಿದ್ದಾರೆ.

ಅಡಿಕೆ ಸಸಿಗಳ ನಡುವೆ ನುಗ್ಗೆ ಗಿಡಗಳನ್ನು ಫೆಬ್ರುವರಿಯಲ್ಲಿ ನಾಟಿ ಮಾಡಿದ್ದರು. 8 ಅಡಿಗಳ ಅಂತರದಲ್ಲಿ ಹಾಕಿದ ಗಿಡಗಳು ಆರು ತಿಂಗಳಲ್ಲಿ ಕಾಯಿ ಕಟ್ಟಿವೆ. ಮೊದಲ ಹಂತದಲ್ಲಿ ಒಂದು ಕ್ವಿಂಟಲ್‌ಗೂ ಹೆಚ್ಚು ನುಗ್ಗೆ ಮಾರಾಟ ಮಾಡಿದ್ದಾರೆ. ಬಹುವಾರ್ಷಿಕ ತರಕಾರಿ ಬೆಳೆಯಾಗಿರುವ ನುಗ್ಗೆ ಇನ್ನೂ ಹಲವು ದಿನ ಫಸಲು ನೀಡಲಿದೆ. ನಾಲ್ಕು ದಿನಕ್ಕೊಮ್ಮೆ ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ.

‘ಪದವಿ ಪೂರ್ಣಗೊಳಿಸಿದ ಬಳಿಕ ಪರಶುರಾಂಪುರ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸುವಾಗ ನುಗ್ಗೆ ಬೆಳೆಯ ಬಗ್ಗೆ ಮಾಹಿತಿ ಸಿಕ್ಕಿತು. ನಾಲ್ಕು ಎಕರೆಗೆ ‘ರೋಣ’ ತಳಿಯ ಎರಡು ಸಾವಿರ ಸಸಿಗಳನ್ನು ನೆಟ್ಟಿದ್ದೆ. ತಂದೆ, ತಾಯಿ ಹಾಗೂ ಸಹೋದರನ ನೆರವಿನಿಂದ ಇದು ಸಾಧ್ಯವಾಗಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು ಶಶಿಕುಮಾರ್‌.

ಚಳ್ಳಕೆರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 40ರಂತೆ ನುಗ್ಗೆ ಮಾರಾಟ ಮಾಡಿದ್ದಾರೆ. ಹೆಚ್ಚು ಫಸಲು ಬಂದಾಗ ಚಿತ್ರದುರ್ಗ, ದಾವಣಗೆರೆ, ಮೈಸೂರು ಸೇರಿ ಇತರ ಮಾರುಕಟ್ಟೆಗೆ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನುಗ್ಗೆ ಸೊಪ್ಪು, ನುಗ್ಗೆ ಬೀಜ ಮಾರಾಟದ ಬಗ್ಗೆಯೂ ಅವರು ಆಸಕ್ತಿ ಹೊಂದಿದ್ದಾರೆ.

‘ನುಗ್ಗೆ ಬೀಜಕ್ಕೆ ಮಾತ್ರ ಹಣ ಖರ್ಚು ಮಾಡಿದೆ. ಉಳಿದ ಯಾವುದಕ್ಕೂ ಹಣ ವೆಚ್ಚ ಮಾಡುವ ಅಗತ್ಯ ಬೀಳಲಿಲ್ಲ. ರಸಗೊಬ್ಬರದ ಬದಲಿಗೆ ಜೀವಾಮೃತ ನೀಡುತ್ತೇನೆ. ಕೀಟನಾಶಕ ಬಳಕೆ ಮಾಡುತ್ತಿಲ್ಲ. ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದು, ನೈಸರ್ಗಿಕವಾಗಿ ನುಗ್ಗೆ ಬೆಳೆಯುತ್ತಿದ್ದೇನೆ. ನಿರೀಕ್ಷೆ ಮೀರಿದ ಪ್ರತಿಫಲ ಲಭ್ಯವಾಗುತ್ತಿದೆ. ಕೂಲಿ ಕಾರ್ಮಿಕರನ್ನು ಬಳಸದೇ ಕುಟುಂಬದ ಸದಸ್ಯರೇ ಕೆಲಸ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ನುಗ್ಗೆ ಕಾಯಿ ಮಾತ್ರವಲ್ಲ, ಸೊಪ್ಪು ಹಾಗೂ ಬೀಜಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಸೊಪ್ಪು ಒಣಗಿಸಿ ಹದ ಮಾಡಿದರೆ ಉತ್ತಮ ಬೆಲೆ ಸಿಗುತ್ತದೆ. ನುಗ್ಗೆ ಕಾಯಿಗೆ ನಿರೀಕ್ಷಿತ ಬೆಲೆ ಸಿಗದೇ ಇದ್ದರೆ ಬೀಜವಾಗುವವರೆಗೆ ಬಿಟ್ಟು ಮಾರಾಟ ಮಾಡಬಹುದಾಗಿದೆ.

ಚಳ್ಳಕೆರೆ ತಾಲ್ಲೂಕಿನ ಜಡೆಕುಂಟೆಯ ಶಶಿಕುಮಾರ್‌ ಬೆಳೆದ ನುಗ್ಗೆ
ಚಳ್ಳಕೆರೆ ತಾಲ್ಲೂಕಿನ ಜಡೆಕುಂಟೆಯ ಶಶಿಕುಮಾರ್‌ ಬೆಳೆದ ನುಗ್ಗೆ
ಅಡಿಕೆಯಲ್ಲಿ ನುಗ್ಗೆಯನ್ನು ಅಂತರ ಬೆಳೆಯಾಗಿ ಬೆಳೆಯುತ್ತಿದ್ದೇನೆ. ಇದರಿಂದ ಅಡಿಕೆ ಗಿಡಗಳಿಗೂ ನೆರಳು ಸಿಗುತ್ತದೆ. ನುಗ್ಗೆಯಿಂದ ಉತ್ತಮ ಆದಾಯವೂ ಲಭ್ಯವಾಗುತ್ತಿದೆ.
-ಜೆ.ಸಿ.ಶಶಿಕುಮಾರ್‌, ಯುವ ರೈತ ಜಡೆಕುಂಟೆ ಚಳ್ಳಕೆರೆ ತಾಲ್ಲೂಕು

ಸಾವಯವ ನುಗ್ಗೆ 

ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಶಶಿಕುಮಾರ್‌ ನುಗ್ಗೆಗೆ ಜೀವಾಮೃತ ನೀಡುತ್ತಿದ್ದಾರೆ. ರಸಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡದೇ ನೈಸರ್ಗಿಕವಾಗಿ ನುಗ್ಗೆ ಬೆಳೆಯುತ್ತಿದ್ದಾರೆ. ‘ಗೋಮೂತ್ರ ಸಗಣಿ ಬೆಲ್ಲ ಹಾಗೂ ಮಣ್ಣು ಮಿಶ್ರಣ ಮಾಡಿ ತೊಟ್ಟಿಯಲ್ಲಿಯೇ ಬಿಡುತ್ತೇವೆ. ವಾರದ ಬಳಿಕ ತೆಗೆದು ಅದನ್ನು ಸಸಿಗಳಿಗೆ ನೀಡುತ್ತಿದ್ದೇವೆ. ಇದರಿಂದ ನುಗ್ಗೆ ಕಾಯಿ ಮೊಣಕೈಯಷ್ಟು ಉದ್ದ ಬೆಳೆದಿವೆ. ನುಗ್ಗೆ ಗಾತ್ರ ನೋಡಿಯೇ ಖರೀದಿಗೆ ಹಲವರು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಶಶಿಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT