ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ
Last Updated 1 ಡಿಸೆಂಬರ್ 2020, 12:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣ ನೀತಿಗಳ ಫಲವಾಗಿ ದೇಶದ ಕೃಷಿ ಬಿಕ್ಕಟ್ಟು ತೀವ್ರಗೊಂಡಿದೆ. ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಕೃಷಿ ಕ್ಷೇತ್ರದ ಬಿಕ್ಕಷ್ಟು ಇನ್ನಷ್ಟು ಉಲ್ಬಣಿಸಿದೆ. ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಕೂಲಿ ಕಾರ್ಮಿಕರು, ಬಡವರಿಗೆ ನೆರವು ನೀಡುವ ಬದಲು ರೈತರನ್ನು ಸರ್ವನಾಶ ಮಾಡುವ ಕೃಷಿ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಕೃಷಿ, ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಹಾಗೂ ವಿದ್ಯುತ್‌ ಕ್ಷೇತ್ರಗಳನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ. ಲಾಕ್‌ಡೌನ್‌ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೃಷಿ ಸಂಬಂಧಿತ ಮೂರು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ದೇಶದ ಬಹುಸಂಖ್ಯಾತರಿಗೆ ಸಂಬಂಧಿಸಿದಂತೆ ಸಂಸತ್ತು ಹಾಗೂ ಸಾರ್ವಜನಿಕ ಚರ್ಚೆ ಇಲ್ಲದೇ ಸಂವಿಧಾನ ಬಾಹಿರವಾಗಿ ಸರ್ಕಾರ ನಡೆದುಕೊಂಡಿದೆ ಎಂದು ದೂರಿದರು.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ಆರಂಭಿಸಲಾಗಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದು ಹೋರಾಟದ ಉದ್ದೇಶವಾಗಿತ್ತು. ಆದರೆ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ದಮನ ಮಾಡುವ ಹುನ್ನಾರಕ್ಕೆ ಕೈಹಾಕಿದೆ. ದೆಹಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸದೇ, ಗಡಿಯಲ್ಲಿಯೇ ತಡೆಯಲಾಗಿದೆ. ಲಾಠಿಚಾರ್ಜ್‌ ಹಾಗೂ ಜಲಫಿರಂಗಿ ಬಳಸಿ ಹಿಂಸೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶಬಾಬು, ಎಐಟಿಯುಸಿ ಮುಖಂಡ ಸುರೇಶ ಬಾಬು, ಎಐಯುಟಿಯುಸಿ ಮುಖಂಡ ಎಚ್‌.ರವಿಕುಮಾರ್, ಜನಶಕ್ತಿ ಸಂಘಟನೆಯ ಟಿ.ಷಫಿವುಲ್ಲಾ, ಧನಂಜಯ್‌, ಗೀತಾ ರಂಗನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT