ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಾರ ಸಂಸ್ಕರಣೆ ಉದ್ಯಮಕ್ಕಿದೆ ಅವಕಾಶ

‘ನಬಾರ್ಡ್‌’ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಕವಿತಾ
Last Updated 13 ಫೆಬ್ರುವರಿ 2020, 13:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಹಾರ ಸಂಸ್ಕರಣೆ ಮತ್ತು ಮಾರಾಟ ಕ್ಷೇತ್ರದಲ್ಲಿ ಅವಕಾಶದ ಹೆಬ್ಬಾಗಿಲು ತೆರೆದಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸೇರಿ ಎಲ್ಲರೂ ಸ್ವಯಂ ಉದ್ಯೋಗಿಗಳಾಗಲು ಸಾಧ್ಯವಿದೆ ಎಂದು ‘ನಬಾರ್ಡ್‌’ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಕವಿತಾ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಜಿಲ್ಲಾ ಮರ್ಗದರ್ಶಿ ಬ್ಯಾಂಕ್‌, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ವತಿಯಿಂದ ಹಣಕಾಸು ಸಾಕ್ಷರತೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಈ ಕ್ಷೇತ್ರವನ್ನು ಆಕ್ರಮಿಸಿಕೊಂಡಿವೆ. ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಪದಾರ್ಥಗಳನ್ನು ಕೂಡ ಜಾಹೀರಾತು ಮೂಲಕ ಗ್ರಾಹಕರ ಮುಂದಿಟ್ಟು ಯಶಸ್ಸು ಕಾಣುತ್ತಿವೆ. ಜನಮನ್ನಣೆ ಸಿಗುವ ಆರೋಗ್ಯಕರ ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ಇದೆ’ ಎಂದು ಹೇಳಿದರು.

‘ಮಹಾರಾಷ್ಟ್ರದ ಪುನಾ ಸಮೀಪದ ಲೋನಾವಾಲ್ ಎಂಬ ಪುಟ್ಟ ಗ್ರಾಮದ ಚಿಕ್ಕಿ ದೇಶದಾದ್ಯಂತ ಖ್ಯಾತಿ ಗಳಿಸಿದೆ. ಶೇಂಗಾ ಮತ್ತು ಬೆಲ್ಲದಿಂದ ತಯಾರಿಸುವ ಈ ಚಿಕ್ಕಿ ಪೌಷ್ಟಿಕ ಆಹಾರ ಕೂಡ ಹೌದು. ಸಣ್ಣ ಗ್ರಾಮವೊಂದು ಚಿಕ್ಕಿ ತಯಾರಿಸುವ ಮೂಲಕ ದೇಶದಲ್ಲಿ ಛಾಪು ಮೂಡಿಸಿದೆ. ಶೇಂಗಾ ಹೆಚ್ಚಾಗಿ ಬೆಳೆಯುವ ಚಳ್ಳಕೆರೆ ತಾಲ್ಲೂಕಿನಲ್ಲಿ ಇಂಥ ಪದಾರ್ಥ ತಯಾರಿಸಲು ಸಾಧ್ಯವಿದೆ’ ಎಂದು ಸಲಹೆ ನೀಡಿದರು.

‘ಪ್ರಜೆಗಳ ಆರೋಗ್ಯವೇ ದೇಶದ ಸಂಪತ್ತು ಎಂಬುದನ್ನು ಕರೋನಾ ವೈರಸ್‌ ಚೀನಾಗೆ ಮನವರಿಕೆ ಮಾಡಿಕೊಟ್ಟಿದೆ. ಅನಾರೋಗ್ಯದ ಕಾರಣಕ್ಕೆ ಚೀನಾ ಪ್ರಜೆಗಳ ಜೀವಿತಾವಧಿ ಕುಂಠಿತವಾಗಿದೆ. ಅನಾರೋಗ್ಯಕರ ಆಹಾರ ಪದಾರ್ಥ ಇಡಿ ದೇಶವನ್ನು ನಾಶ ಮಾಡಬಲ್ಲದು. ಹೀಗಾಗಿ, ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗುತ್ತಿದೆ. ಆಹಾರ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದು ಕಿವಿಮಾತು ಹೇಳಿದರು.

ಕೆನರಾ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಎಸ್.ಡಿ.ಬಿರಾದರ್ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಕೃಷಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜಿಲ್ಲೆಯ ಶೇ 60ರಷ್ಟು ಜನರು ಕೃಷಿ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಒಣಬೇಸಾಯ ಪದ್ಧತಿ ಇರುವುದರಿಂದ ಮಳೆ ಸುರಿದಾಗಷ್ಟೇ ಕೆಲಸ ಇರುತ್ತದೆ. ಉಳಿದ ದಿನಗಳಲ್ಲಿ ರೈತರು ಕೂಡ ನಿರುದ್ಯೋಗಿಗಳ ರೀತಿಯಲ್ಲಿ ಇರುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆ ಆರಂಭಿಸಿ ವರ್ಷದ ಎಲ್ಲ ದಿನವೂ ಕೆಲಸ ಹುಡುಕಿಕೊಳ್ಳಬೇಕು’ ಎಂದರು.

‘ದೇಶದಲ್ಲಿ ಅತಿ ಸಣ್ಣ , ಸಣ್ಣ, ಮಧ್ಯಮ ಗ್ರಾತ್ರದ ಆರು ಕೋಟಿ ಉದ್ದಿಮೆಗಳಿವೆ. ಕನಿಷ್ಠ 12 ಕೋಟಿ ಜನರಿಗೆ ಇವು ಉದ್ಯೋಗ ನೀಡಿವೆ. ಸ್ವಯಂ ಉದ್ಯೋಗ ಮಾಡುವವರಿಗೆ ವ್ಯವಹಾರಿಕ ಜ್ಞಾನ, ಮನಸ್ಸು, ಗುರಿ ಇರಬೇಕು. ಅಗತ್ಯ ಸಾಲ ಸೌಲಭ್ಯ ಬ್ಯಾಂಕುಗಳಿಂದ ದೊರೆಯುತ್ತದೆ. ಯಾವುದೇ ಕಾರಣಕ್ಕೂ ಸಾಲವನ್ನು ದುರುಪಯೋಗ ಪಡಿಸಿಕೊಳ್ಳಬಾರದು’ ಎಂದು ಹೇಳಿದರು.

ಉದ್ದಿಮೆ ಆರಂಭಿಸಿ ಯಶಸ್ಸು ಕಂಡಿರುವ ಹೊಳಲ್ಕೆರೆಯ ಸೈಯದ್ ಮುಶಿರಾ, ಹಿರಿಯೂರಿನ ನವೀನ್, ಸಂತೋಷ್‌, ಚಿತ್ರದುರ್ಗದ ಪ್ರೇಮಾ ಅನುಭವ ಹಂಚಿಕೊಂಡರು.

ಆರ್‌ಬಿಐ ಮಾರ್ಗದರ್ಶಿ ಜಿಲ್ಲಾ ಅಧಿಕಾರಿ ಆನಂದ್ ನಿಮ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಹಾದೇವಯ್ಯ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಹೇಮಂತ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸುದರ್ಶನ್ ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT