ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ವೀರಗಾಸೆ; ಆಕರ್ಷಿಸಿದ ಭಜನೆ

ಜಾನಪದ ಕಲೆಗಳ ಸ್ಪರ್ಧೆಯಲ್ಲಿ ಪೈಪೋಟಿಗೆ ಇಳಿದ ಸ್ಪರ್ಧಾಳುಗಳು
Last Updated 22 ಅಕ್ಟೋಬರ್ 2020, 14:36 IST
ಅಕ್ಷರ ಗಾತ್ರ

ಚಿತ್ರದುರ್ಗ: ವೇದಿಕೆ ಏರಿದ ವೀರಗಾಸೆ ಕಲಾವಿದರು ವಿಶಿಷ್ಟ ಹಾವಾಭಾವದ ಮೂಲಕ ಮೈನವಿರೇಳಿಸುವಂತೆ ನಡೆಯುತ್ತ, ವಾದ್ಯಕ್ಕೆ ತಕ್ಕಂತೆ ಕುಣಿಯುತ್ತ ನೃತ್ಯ ಪ್ರದರ್ಶಿಸಿದರು. ವಚನ ಸೇರಿ ಇತರೆ ಹಾಡುಗಳ ಮೂಲಕ ಭಜನಾ ತಂಡದವರು ಆಕರ್ಷಿಸಿದರು. ಜನಪದ ಗೀತೆಗಳೂ ಮೇಳೈಸಿದವು.

ಬಸವಕೇಂದ್ರ ಮುರುಘಾಮಠದ ಮುರುಘಿ ಶಾಂತವೀರ ಸ್ವಾಮೀಜಿ ವೇದಿಕೆಯಲ್ಲಿ ಶರಣ ಸಂಸ್ಕೃತಿ ಉತ್ಸವ 2020ರ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾನಪದ ಕಲೆಗಳ ಸ್ಪರ್ಧೆಯಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಕಲಾವಿದರು ಪೈಪೋಟಿಗೆ ಇಳಿದರು.

ಕೋವಿಡ್‌ನಿಂದಾಗಿ ನಗರದಲ್ಲಿ ಆರೇಳು ತಿಂಗಳಿನಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ನೋಡುವ ಭಾಗ್ಯವೂ ಪ್ರೇಕ್ಷಕರಿಗೆ ದೊರಕಿರಲಿಲ್ಲ. ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣವಾಗಿದ್ದು, ನೆರೆದಿದ್ದವರಲ್ಲೂ ಸಂತಸ ಮೂಡಿಸಿತ್ತು.

ನೇತೃತ್ವ ವಹಿಸಿದ್ದ ಭೃಂಗೇಶ್ವರ ಸ್ವಾಮೀಜಿ ಐದು ನಿಮಿಷ ತಮಟೆ ಭಾರಿಸುವ ಮೂಲಕ ನೆರೆದಿದ್ದ ಎಲ್ಲರ ಗಮನ ಸೆಳೆದರು. ಸ್ವಾಮೀಜಿಯೊಬ್ಬರು ವಾದ್ಯಕ್ಕೆ ತಕ್ಕಂತೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ದೇವರು ಯಾರು? ದೇವರು ಯಾರು ಎಂದು ಸಭಿಕರನ್ನು ಪ್ರಶ್ನಿಸುವ ಮೂಲಕ ಚನ್ನಗಿರಿ ತಾಲ್ಲೂಕು ಎಕ್ಕೆಗುಂದಿಯ ಶ್ರೀಮರುಳಸಿದ್ಧೇಶ್ವರ ವೀರಗಾಸೆ ತಂಡ ಮೊದಲು ವೇದಿಕೆ ಪ್ರವೇಶಿಸಿತು.

‘ಕಲ್ಲು ದೇವರು ದೇವರಲ್ಲ. ಮಣ್ಣು ದೇವರು ದೇವರಲ್ಲ. ಮರ ದೇವರು ದೇವರಲ್ಲ. ನನ್ನನ್ನು ನಾ ಅರಿತು, ನಾನು ಯಾರೆಂದು ತಿಳಿದೊಡೆ, ನಾನೇ ದೇವ ನೋಡ. ಹೆತ್ತ ತಾಯಿ ದೇವರು, ಸಾಕಿ ಸಲಹಿದ ತಂದೆ ದೇವರು. ಶಿಕ್ಷಣ ನೀಡಿ ಜ್ಞಾನ ಮಾರ್ಗದೊಡೆ ಕೊಂಡೊಯ್ದ ಗುರು ದೇವರು. ದೇಶದ ಜನತೆಗೆ ಅನ್ನ ನೀಡುವ ರೈತ ದೇವರು’ ಎಂದು ಹಾಡುತ್ತ ಸಭಿಕರ ಗಮನ ಸೆಳೆದರು.

ಹಾಡಿನುದ್ದಕ್ಕೂ ‘ಬಲರೇ ದೇವ. ಬಲ್‌ ಬಲರೇ, ಬಲ್‌ ಬಲರೇ ರುದ್ರಾ. ಹೇ ದೇವಾ ಹೇ ಶಂಭುವೇ. ಬಪ್ಪರೇ ರುದ್ರಾ ಮಹಾದೇವ’ ಎಂದು ಶಿವನನ್ನು ಸ್ಮರಿಸಿದರು.

ಡೊಳ್ಳು, ನಗಾರಿ, ತಮಟೆ ಭಾರಿಸುತ್ತ ‘ವೀರಸಾರ, ಪರಮಗಂಭೀರ, ದಕ್ಷಸಂಹಾರ, ಪರಶಿವನ ಮೋಹನ ಕುಮಾರ, ಕಿಡಿಗಣ್ಣು ನೋಟದ ರುದ್ರದೇವ ವೀರೇಶನೆ ಬಹು ಪರಾಕ್’ ಎಂದು ವೀರಗಾಸೆ ನೃತ್ಯ ಕಲಾವಿದರು ಹೇಳುತ್ತಾ ಆಕರ್ಷಿಸಿದರು.

ಕಡೂರು ತಾಲ್ಲೂಕು ಅರೇಹಳ್ಳಿ ಶ್ರೀಆಂಜನೇಯ ವೀರಗಾಸೆ ಕಲಾತಂಡ ಚೆನ್ನಮಲ್ಲಿಕಾರ್ಜುನ, ಬಸವಾದಿ ಶರಣರು ಹಾಗೂ ಮುರುಘಾ ಶರಣರಿಗೆ ನಮಿಸಿ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT