ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರಿಗೆ ಪಡಿತರ: ಕೇಂದ್ರಕ್ಕೆ ಪತ್ರ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ
Last Updated 3 ಆಗಸ್ಟ್ 2020, 11:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನವೆಂಬರ್‌ ಅಂತ್ಯದವರೆಗೆ ಪಡಿತರ ವಿತರಿಸಲು ಅವಕಾಶ ಕಲ್ಪಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸಚಿವರು ಚಿತ್ರದುರ್ಗದಲ್ಲಿ ಸಭೆ ನಡೆಸಿದರು. ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ತುಮಕೂರು, ಸೇರಿ ಹಲವು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಆತ್ಮನಿರ್ಭರ ಭಾರತ ಯೋಜನೆಯಡಿ ವಲಸೆ ಕಾರ್ಮಿಕರ ಕುಟುಂಬಕ್ಕೆ ಮೇ ಮತ್ತು ಜೂನ್‌ ತಿಂಗಳಲ್ಲಿ ಪಡಿತರ ನೀಡಲಾಗಿದೆ. ಐದು ಕೆ.ಜಿ. ಅಕ್ಕಿ ಹಾಗೂ ಕಡಲೆಕಾಳು ವಿತರಿಸಲಾಗಿದೆ. ಜನಜೀವನ ಸಹಜಸ್ಥಿತಿಗೆ ಮರಳದ ಪರಿಣಾಮ ಪಡಿತರಕ್ಕೆ ಕಾರ್ಮಿಕರು ಕೋರಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ರಾಜ್ಯದಲ್ಲಿ ಸುಮಾರು 13.5 ಲಕ್ಷ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಪಡಿತರ ನೀಡಲಾಗಿದೆ. ಚೀಟಿ ಹೊಂದದೇ ಇರುವವರು ಇದರ ಪ್ರಯೋಜನ ಪಡೆದಿದ್ದಾರೆ. ಕೊರೊನಾ ಸೋಂಕು ಇನ್ನೂ ನಿವಾರಣೆಯಾಗದಿರುವುದರಿಂದ ವಲಸೆ ಕಾರ್ಮಿಕರಿಗೆ ಪಡಿತರ ನೀಡಿದರೆ ಅನುಕೂಲ. ಈ ಕುರಿತು ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇನೆ’ ಎಂದು ವಿವರಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ವಿತರಣೆ ಮಾಡುತ್ತಿರುವ ಪಡಿತರ ಸರಿಯಾದ ಸಮಯಕ್ಕೆ ಜನರಿಗೆ ತಲುಪಬೇಕು. ಏಪ್ರಿಲ್‌ನಿಂದ ಕೆಲಸ ಮಾಡುತ್ತಿರುವ ರೀತಿಯಲ್ಲೇ ನವೆಂಬರ್‌ ವರೆಗೂ ಕಾರ್ಯನಿರ್ವಹಿಸಬೇಕು. ಆ.11ರಿಂದ ಪಡಿತರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಗೋದಾಮುಗಳಲ್ಲಿ ಪಡಿತರ ದಾಸ್ತಾನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಲಾಗಿದೆ. ಬೆರಳಚ್ಚು ನೀಡಲು ಸಾಧ್ಯವಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಪರಿಸ್ಥಿತಿ ಬದಲಾದ ಬಳಿಕ ಅರ್ಜಿಯ ಹಿರಿತನದ ಆಧಾರದ ಮೇರೆಗೆ ಪಡಿತರ ಚೀಟಿ ವಿತರಿಸಲಾಗುವುದು. ತೂಕ ಮತ್ತು ಅಳತೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ’ ಎಂದರು.

ಪೋರ್ಟಿಬಿಲಿಟಿಗೆ ಒತ್ತು

‘ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಹಳ್ಳಿಗೆ ಮರಳಿದ್ದಾರೆ. ಪೋರ್ಟಿಬಿಲಿಟಿ ಪ್ರಕಾರ ಇವರಿಗೆ ಪಡಿತರ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಸಕಾಲಕ್ಕೆ ಪಡಿತರ ಸಿಗುತ್ತಿಲ್ಲ ಎಂಬ ಬಗ್ಗೆ ಜನರಿಂದ ದೂರು ಬರುತ್ತಿವೆ. ಪೋರ್ಟಿಬಿಲಿಟಿಯಲ್ಲಿ ಪಡಿತರ ಪಡೆಯುವವರಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇನೆ’ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

‘ಪಡಿತರ ವಿತರಣೆಯಲ್ಲಿ ಲೋಪ ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ಮಾಡಿದ ಸೇವೆಯಿಂದ ಸರ್ಕಾರದ ಗೌರವ ಹೆಚ್ಚಬೇಕು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT