ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೇ ನಡೆಯಲಿದೆ 'ಗುಡ್ ಫ್ರೈಡೆ' ಪ್ರಾರ್ಥನೆ

ಲಾಕ್ ಡೌನ್ ಬೆಂಬಲಿಸಿ ಅತ್ಯಂತ ಸರಳ ಆಚರಣೆಗೆ ನಿರ್ಧಾರ
Last Updated 9 ಏಪ್ರಿಲ್ 2020, 12:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಕ್ರೈಸ್ತ ಧರ್ಮೀಯರಿಗೆ ಅತ್ಯಂತ ಪವಿತ್ರ ದಿನವಾದ ಶುಭ ಶುಕ್ರವಾರದ (ಗುಡ್ ಫ್ರೈಡೆ) ಆಚರಣೆ ಈ ಬಾರಿ ಸರಳವಾಗಿ ನಡೆಯಲಿದೆ. ಚರ್ಚ್‌ಗೆ ತೆರಳಿ ಪ್ರಾರ್ಥನೆ ಮಾಡುವ ಬದಲು ಆನ್‌ಲೈನ್ ಮೂಲಕ ಕೈಂಕರ್ಯಗಳನ್ನು ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊರೊನಾ ವೈರಸ್ ಧರ್ಮಾತೀತವಾಗಿ ಎಲ್ಲ‌ ಧರ್ಮೀಯರ ಆಚರಣೆಗಳಿಗೂಅಡ್ಡಿ ಉಂಟು ಮಾಡಿದೆ. ಅದು ಗುಡ್ ಫ್ರೈಡೆ ಆಚರಣೆಗೂ ಹೊರತಾಗಿಲ್ಲ. ಲಾಕ್‌ಡೌನ್‌ ನಡುವೆ ಹಬ್ಬದ ಆಚರಣೆಗೆ ಅಂತರ್ಜಾಲದ ನೆರವು ಪಡೆಯಲಾಗಿದೆ.

ವ್ಯಾಪಕವಾಗಿ ಹರಡುವ ಕೊರೊನಾ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟವನ್ನು ಚರ್ಚ್‌ ಮುಖ್ಯಸ್ಥರು ಬೆಂಬಲಿಸಿದ್ದಾರೆ. ಅದಕ್ಕಾಗಿ ಈ ಬಾರಿಯ ಗುಡ್ ಫ್ರೈಡೆಯಂದು ಚರ್ಚ್‌ಗಳ ಬಾಗಿಲು ತೆರೆಯುವುದಿಲ್ಲ. ಕ್ರೈಸ್ತ ಧರ್ಮೀಯರು ಮನೆಗಳಲ್ಲೇ ಶ್ರದ್ಧಾ-ಭಕ್ತಿಯಿಂದ ಆಚರಿಸಬೇಕು ಎಂದು ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೇಂಟ್ ಚರ್ಚ್ ಮನವಿ ಮಾಡಿವೆ.

ಚಿತ್ರದುರ್ಗ ಜಿಲ್ಲೆಯ ಕ್ರೈಸ್ತ ಧರ್ಮೀಯರು ಧಾರಾವಾಡ ಉತ್ತರಸಭಾ ಪ್ರಾಂತ್ಯದ ಮೂಲಕ‌ ಪ್ರಸಾರವಾಗುವ ಆಚರಣೆಗಳ ವಿಡಿಯೊಗಳನ್ನು ಯೂಟ್ಯೂಬ್ ಮೂಲಕ ನೋಡುತ್ತ ಪ್ರಾರ್ಥನೆ ನೆರವೇರಿಸಲು ನಿರ್ಧರಿಸಿದ್ದಾರೆ.

ಮನೆಯಲ್ಲೇ ಆಚರಣೆ ಹೇಗೆ?
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ನಗರದ ಡಾನ್ ಬಾಸ್ಕೊ ವಿದ್ಯಾಸಂಸ್ಥೆಯ ಮುಖ್ಯ ಪ್ರಾಂಶುಪಾಲ ಫಾದರ್ ಸರ್ಜಿ, ‘ಗುಡ್‌ ಫ್ರೈಡೆ ಆಚರಣೆ ಬಗ್ಗೆ ಇಲ್ಲಿನ ಕ್ಯಾಥೋಲಿಕ್ ಚರ್ಚ್ ಫಾದರ್ ಜತೆ ಚರ್ಚಿಸಿದ್ದೇವೆ. ಈ ಬಾರಿ ಸರಳವಾಗಿ ಆಚರಿಸಲು ಸೂಚಿಸಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಆನ್‌ಲೈನ್ ಮೂಲಕ ನೆರವೇರಿಸಲಾಗುತ್ತದೆ. ಇದರಲ್ಲಿ ಭಾಗವಹಿಸುವವರು ಚರ್ಚ್‌ನಲ್ಲಿರುವಷ್ಟೇ ಗಂಭೀರವಾಗಿ ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಮನೆಯಲ್ಲಿ ಇದ್ದರೂ ಗುಡ್ ಫ್ರೈಡೆ ಆಚರಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಸಂಪ್ರದಾಯದ ಉಡುಪು ಧರಿಸಬಹುದು. ಟಿ.ವಿ, ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ಆಚರಣೆಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು.

‘ಏಸುಕ್ರಿಸ್ತನ ಕೊನೆಯ ದಿನಗಳು ಮತ್ತು ಪುನರ್ ಅವತರಣದ ಸಂದರ್ಭಗಳನ್ನು ಶುಕ್ರವಾರ ಬೆಳಿಗ್ಗೆ 12ರಿಂದ ಮಧ್ಯಾಹ್ನ 3ರ ವರೆಗೆ ಸರಳವಾಗಿ ಆರಾಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನೆಗಳಲ್ಲೇ ಕ್ರಿಸ್ತನ ಸಪ್ತ ವಾಕ್ಯಗಳನ್ನು ಪಠಿಸುವ ಹಾಗೂ ಮನನ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಬಹುದು’ ಎಂದು ಫಿಲ್ಟರ್ ಹೌಸ್ ರಸ್ತೆ ಮಾರ್ಗದ ಪ್ರೊಟೆಸ್ಟೆಂಟ್ ಚರ್ಚ್‌ನ ಮೃತ್ಯುಂಜಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT