ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಶೇಂಗಾ ಬೆಳೆ ನಷ್ಟ- ಪರಿಹಾರಕ್ಕೆ ಆಗ್ರಹ

Last Updated 19 ನವೆಂಬರ್ 2021, 2:28 IST
ಅಕ್ಷರ ಗಾತ್ರ

ಚಳ್ಳಕೆರೆ: ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿದ್ದ ಶೇಂಗಾ ಬೆಳೆ ನಷ್ಟವಾಗಿರುವ ಕಾರಣ ಗುರುವಾರ ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ತಂಡ ರೈತ ಮುಖಂಡರೊಂದಿಗೆ ಹೊಲಗಳಿಗೆ ಭೇಟಿ ನೀಡಿ ಶೇಂಗಾ ಬೆಳೆ ಪರಿಶೀಲಿಸಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ‘ಕಳೆದ ವರ್ಷ ಅತಿವೃಷ್ಟಿಯಿಂದ ಶೇಂಗಾ ಹಾಗೂ ಈರುಳ್ಳಿ ಬೆಳೆ ನಷ್ಟವಾಗಿತ್ತು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತರೆ ಮಳೆ ಕೈಕೊಟ್ಟ ಕಾರಣ ಶೇಂಗಾ ಬೆಳೆ ಸಂಪೂರ್ಣವಾಗಿ ನಾಶವಾಗಿದೆ’ ಎಂದರು.

ಸಂಘದ ತಾಲ್ಲೂಕು ಅಧ್ಯಕ್ಷ ಕಾಪರಹಳ್ಳಿ ಹಂಪಣ್ಣ, ‘ಆಕಾಲಿಕ ಮಳೆಯಿಂದ ಶೇಂಗಾ ಬಳ್ಳಿ ಕೊಳೆತು, ಗಿಡದಲ್ಲಿನ ಕಾಯಿ ಮೊಳಕೆ ಒಡೆದಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಹಾಕಿದ ಬಂಡವಾಳದಲ್ಲಿ ಬಿಡಿಗಾಸು ರೈತರಿಗೆ ಸಿಗುತ್ತಿಲ್ಲ. ಹಾಗಾಗಿ ಶೇಂಗಾ ಬೆಳೆ ಪ್ರತಿ ಹೆಕ್ಟೇರ್‌ಗೆ ₹ 15 ಸಾವಿರ ಮತ್ತು ಈರುಳ್ಳಿ, ತರಕಾರಿ ಮತ್ತು ಹಣ್ಣಿನ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹ 25 ಸಾವಿರ ಬೆಳೆನಷ್ಟ ಪರಿಹಾರ ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕೃಷಿ ಸಹಾಯಕ ನಿರ್ದೇಶಕ ಅಶೋಕ್, ‘55 ಸಾವಿರ ಹೆಕ್ಟೇರ್‌ ಶೇಂಗಾ, 8 ಹೆಕ್ಟೇರ್‌ ಪ್ರದೇಶದ ಈರುಳ್ಳಿ ಬೆಳೆ ನಷ್ಟವಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದರು.

ತಹಶೀಲ್ದಾರ್ ಎನ್. ರಘುಮೂರ್ತಿ, ‘ಬೆಳೆಸಾಲ ಮರುಪಾವತಿಸಲು ರೈತರಿಗೆ ಒತ್ತಡ ಹೇರಬಾರದು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮುಖಂಡರಾದ ತಿಪ್ಪೇಸ್ವಾಮಿ, ರಾಜಣ್ಣ, ಗ್ರಾಮದ ಮುಖಂಡ ಜಿ.ಕೆ. ಈರಣ್ಣ, ಕ್ಯಾತಣ್ಣ, ದೊಡ್ಡಜ್ಜಪ್ಪರ ಚಂದ್ರಣ್ಣ, ನಾಗಣ್ಣ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT