ಮಂಗಳವಾರ, ಮಾರ್ಚ್ 21, 2023
20 °C
ಆಹಾರ ಕಿಟ್‌ ವಿತರಣೆಯಲ್ಲಿ ಶಿವಮೂರ್ತಿ ಮುರುಘಾ ಶರಣರು

ಪಾರಂಪರಿಕ ಕಲೆಗಳು ಸಂಸ್ಕೃತಿಯ ಭೂಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಪಾರಂಪರಿಕ ಕಲೆಗಳು ಸಂಸ್ಕೃತಿಗೆ ಭೂಷಣ ಇದ್ದಂತೆ. ಅವುಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಶ್ರೀಮಠವೂ ಸಹಕಾರ ನೀಡುತ್ತಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿಯ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ರಾಜ್ಯ ಜಾನಪದ ಪರಿಷತ್ತು ಜಿಲ್ಲಾ ಘಟಕದಿಂದ ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಜನಪದ ಕಲಾವಿದರಿಗಾಗಿ ಶನಿವಾರ ಆಯೋಜಿಸಿದ್ದ ‘ಆಹಾರ ಸಾಮಗ್ರಿ ಕಿಟ್‌ ವಿತರಣೆ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಜಾಗತೀಕರಣದ ಸಂದರ್ಭದಲ್ಲಿ ಬದುಕು ತುಂಬಾ ವೇಗವಾಗಿ ಸಾಗುತ್ತಿದೆ. ಇದರಿಂದಾಗಿ ಬದಲಾವಣೆಗಳು ಆಗುತ್ತಿವೆ. ಅದೇ ರೀತಿ ಜನಪದ ಕಲೆಗಳು ಆಧುನೀಕರಣಗೊಂಡಿವೆ. ಇಂಥ ಕಲೆಗಳನ್ನು ಕಾಯಕವಾಗಿ ಕೆಲ ಶರಣರು ಮಾಡಿಕೊಂಡಿದ್ದರು’ ಎಂದ ಅವರು, ‘ಸರ್ಕಾರ, ಸಂಘ–ಸಂಸ್ಥೆಗಳು, ಮಠಮಾನ್ಯಗಳು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಕಾಯಕವನ್ನಾಗಿ ಆರಿಸಿಕೊಂಡರು: ಪ್ರಾಧ್ಯಾಪಕ ಜೆ. ಕರಿಯಪ್ಪ ಮಾಳಿಗೆ, ‘ವೀಣೆಯ ಸಕಲೇಶ ಮಾದರಸ, ಕಿನ್ನರಿ ಬೊಮ್ಮಯ್ಯ, ರಾಗದ ಸಂಕಣ್ಣ, ಕಂಕರಿ ಕಕ್ಕಯ್ಯ, ಬಹುರೂಪಿ ಚೌಡಯ್ಯ, ತತ್ವಪದದ ವೀರದೇವಮ್ಮ, ಜನಪದ ನಾಟ್ಯಪ್ರವೀಣೆ ಸಿದ್ದದೇವಮ್ಮ ಸೇರಿ 12ನೇ ಶತಮಾನದ ಅನೇಕ ಶರಣ–ಶರಣೆಯರು ಜನಪದ ಕಲೆಗಳನ್ನು ಸ್ವೀಕರಿಸಿ ಕಾಯಕವನ್ನಾಗಿ ಆರಿಸಿಕೊಂಡರು. ಇದರಿಂದಾಗಿ ಈ ಕಲೆಯನ್ನು ಕೀಳಾಗಿ ಕಾಣುತ್ತಿದ್ದ ಮನೋಭಾವ ದೂರವಾಯಿತು’ ಎಂದು ತಿಳಿಸಿದರು.

‘ಶರಣ ಪರಂಪರೆಯಿಂದಾಗಿ ಕಲೆಗಳಿಗೆ ಹೊಸ ರೂಪ, ಹೊಸ ಜೀವಕಳೆ ಬಂತು. ಜನಪದ ಹಾಡು, ಕುಣಿತ, ವೇಷಗಾರಿಕೆ ಮೊದಲಾದ ಕ್ಷೇತ್ರಗಳ ಕಲಾವಿದರು ಕಲ್ಯಾಣಕ್ಕೆ ಬಂದು ಶರಣರ ಒಡನಾಟದಲ್ಲಿ ಸೇರಿದರು. ಜನಪದ ಕಲೆಗಳು ಜನಾಂಗದ ಪ್ರತಿಬಿಂಬ ಆಗಿದೆ. ಇದಿಲ್ಲದೆ ಕಲೆ ಎಂದಿಗೂ ಉಳಿಯಲಾರದು’ ಎಂದು ಅಭಿಪ್ರಾಯಪಟ್ಟರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎ.ಎಸ್. ಸಿದ್ಧರಾಮೇಶ್, ರಘುರಾಮ ರೆಡ್ಡಿ, ಜೆ.ಎಸ್. ಬಕ್ಕೇಶ್, ಡಿ.ಒ. ಮೊರಾರ್ಜಿ, ನಿರಂಜನ ದೇವರಮನೆ, ಕೆ.ಸಿ. ರುದ್ರೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು