ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಡ್ರ್ಯಾಗನ್‌ ಫ್ರೂಟ್‌ ಕೃಷಿ, ಆದಿವಾಲದ ಅಮೃತ್‌ಗೆ ಭರಪೂರ ಆದಾಯ

Published 30 ಆಗಸ್ಟ್ 2023, 6:52 IST
Last Updated 30 ಆಗಸ್ಟ್ 2023, 6:52 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದ ನಿವಾಸಿ, ಬಿ.ಕಾಂ ಪದವೀಧರ ಎಚ್‌.ವಿ. ಅಮೃತ್‌ ಅವರು 5 ಎಕರೆ ಭೂಮಿ ಪೈಕಿ 3 ಎಕರೆಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆದಿದ್ದಾರೆ. 2 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.


‘ಹಣ್ಣಿನ ಒಳಗಡೆ ಪಿಂಕ್ ಬಣ್ಣ ಇರುವ 4,000, ಬಿಳಿ ಬಣ್ಣ ಇರುವ 1,500 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ತುಮಕೂರು ಸಮೀಪದ ಹಿರೇಹಳ್ಳಿ ಹಾಗೂ ಹೊಸಪೇಟೆಯಿಂದ ತಂದು ನಾಟಿ ಮಾಡಿದ್ದೆ. ಡ್ರ್ಯಾಗನ್ ಬಳ್ಳಿ ಹಬ್ಬಿಸಲು ಸಿಮೆಂಟ್ ಅಥವಾ ಕಲ್ಲಿನ ಕಂಬಗಳನ್ನು ನಿಲ್ಲಿಸಬೇಕು. ನಾಟಿ ಮಾಡಿದ 16 ತಿಂಗಳಿಗೆ ಹೂವು ಬಿಡಲು ಆರಂಭವಾಗುತ್ತದೆ. 45–50 ದಿನಗಳಲ್ಲಿ ಹಣ್ಣು ಬರುತ್ತದೆ. ಆರಂಭದಲ್ಲಿ ಹೆಚ್ಚು ಹಣ ತೊಡಗಿಸಬೇಕಾಗುತ್ತದೆ’ ಎಂದು ಅಮೃತ್ ಮಾಹಿತಿ ನೀಡಿದರು.

‘ಜುಲೈನಿಂದ ಹಣ್ಣು ಬಿಡುತ್ತಿದ್ದು, ನವಂಬರ್‌ವರೆಗೆ ಹಣ್ಣು ಸಿಗುತ್ತದೆ. ಇದು ಮೊದಲ ವರ್ಷವಾದ್ದರಿಂದ ಇಳುವರಿ ಕಡಿಮೆ. ಇಲ್ಲಿಯವರೆಗೆ 2.50 ಟನ್ ಹಣ್ಣು ದೊರೆತಿದೆ. ಇನ್ನೂ ಮೂರು ತಿಂಗಳು ಹಣ್ಣು ಸಿಗಲಿದ್ದು, ನಿರೀಕ್ಷೆಯಂತೆ ಬೆಳೆ ಕೈಗೆ ಬರಲಿದೆ. ಡ್ರ್ಯಾಗನ್ ಫ್ರೂಟ್ ನೋಡಲು ಒರಟಾಗಿ ಕಂಡರೂ ಬಿಸಿಲು ಹೆಚ್ಚಾದರೆ ಸನ್ ಬರ್ನ್ ಸಮಸ್ಯೆ, ಮಳೆ ಹೆಚ್ಚಾದರೆ ಕೊಳೆ ರೋಗದ ಸಮಸ್ಯೆ ಇದೆ. ಈ ಗಿಡಗಳನ್ನು ಚಿಕ್ಕಮಕ್ಕಳಂತೆ ಜೋಪಾನ ಮಾಡಬೇಕು’ ಎಂದು ಹೇಳಿದರು.

‘ಹಣ್ಣುಗಳನ್ನು ಬೆಳೆದರೂ ಮಾರುಕಟ್ಟೆ ಕಲ್ಪಿಸಿಕೊಳ್ಳುವುದು ಕಷ್ಟದ ಕೆಲಸ. ಉತ್ಕೃಷ್ಟ ಗುಣಮಟ್ಟದ ಹಣ್ಣು ಬೆಳೆದರೂ ವ್ಯಾಪಾರಿಗಳು ಬೇಕಾಬಿಟ್ಟಿ ದರಕ್ಕೆ ಕೇಳುತ್ತಾರೆ. ಬೆಂಗಳೂರಿನ ಹಾಪ್‌ಕಾಮ್ಸ್ ಮಳಿಗೆಗೆ ಕೊಟ್ಟರೆ ಹಣ ಪಡೆಯಲು ಎರಡು ತಿಂಗಳವರೆಗೆ ಕಾಯಬೇಕು. ಜೊತೆಗೆ ಕಾಟನ್ ಬಾಕ್ಸ್‌ನಲ್ಲಿ 12 ಕೆ.ಜಿ. ಹಣ್ಣು ತುಂಬಿದರೆ 10 ಕೆ.ಜಿ. ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸ್ನೇಹಿತರೊಂದಿಗೆ ಚರ್ಚಿಸಿ ಹಣ್ಣು ಮಾರಾಟಕ್ಕೆ ಪರ್ಯಾಯ ಮಾರ್ಗದ ‌ಹುಡುಕಾಟ ನಡೆಸಿದೆ. ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಗಳು, ಬಹು ಅಂತಸ್ತಿನ ಕಟ್ಟಡಗಳು ಹೆಚ್ಚಿರುವ ಕಡೆ ರಸ್ತೆಬದಿಯಲ್ಲಿ ಟೆಂಟ್ ಹಾಕಿ ಹಣ್ಣು ಮಾರಿದರೆ ಹೇಗಿರುತ್ತದೆ ಎಂಬ ಆಲೋಚನೆ ಬಂತು. ಮೊದಲ ಹಂತದಲ್ಲಿ ಮಾನ್ಯತಾ ಟೆಕ್‌ಪಾರ್ಕ್‌ ಸಮೀಪ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ಮಾರಾಟದಲ್ಲಿ ತೊಡಗಿದೆ. ಆರಂಭದಲ್ಲಿ 1–2 ಹಣ್ಣುಗಳನ್ನು ಒಯ್ಯುತ್ತಿದ್ದವರು, ಡ್ರ್ಯಾಗನ್ ಹಣ್ಣು ಔಷಧೀಯ ಗುಣ ಹೊಂದಿದೆ ಎಂಬುದನ್ನು ಅರಿತು ಕೆ.ಜಿ. ಲೆಕ್ಕದಲ್ಲಿ ಖರೀದಿಸತೊಡಗಿದರು. ಸ್ನೇಹಿತರಿಗೆ ಕೆಜಿಗೆ ₹ 10 ಕಮಿಷನ್ ಕೊಡುವುದಾಗಿ ತಿಳಿಸಿ ಅವರನ್ನೂ ಮಾರಾಟಕ್ಕೆ ತೊಡಗಿಸಿಕೊಂಡೆ. ವಿಜಯನಗರದ ಬೈ–ಟು ಕೆಫೆ ಹತ್ತಿರ ಶನಿವಾರ–ಭಾನುವಾರ, ಎಚ್.ಎಸ್.ಆರ್. ಬಡಾವಣೆ, ಕೋರಮಂಗಲದಲ್ಲೂ ಮಾರಾಟ ಆರಂಭಿಸಿದೆ. ವ್ಯಾಪಾರಿಗಳು ₹ 80ರಿಂದ ₹ 90ಕ್ಕೆ ಕೇಳಿದ್ದರು. ನಾನೇ ಮಾರುಕಟ್ಟೆ ಆರಂಭಿಸಿದ್ದರಿಂದ ಪ್ರತಿ ಕೆ.ಜಿ.ಗೆ ಸರಾಸರಿ ₹ 180ರಿಂದ ₹ 200 ದರ ಸಿಕ್ಕಿತು’ ಎಂದು ಅಮೃತ್ ಸಂತಸ ಹಂಚಿಕೊಂಡರು.

‘ಇಲ್ಲಿಯವರೆಗೆ ₹ 4 ಲಕ್ಷ ಆದಾಯ ಬಂದಿದೆ. ಕೂಲಿಯವರು ಇಲ್ಲದೆ ಹಣ್ಣು ಬೆಳೆಯುವುದು ಕಷ್ಟ. ಕೂಲಿಕಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಎಲ್ಲಾ ಸಲೀಸಾಗಿ ನಡೆಯುತ್ತದೆ’ ಎಂದು ಅವರು ಅನುಭವ ಹಂಚಿಕೊಂಡರು.

ಕೋವಿಡ್‌ನಿಂದ ಬದಲಾದ ಬದುಕು

ಪದವಿ ನಂತರ ಸ್ವಂತಕ್ಕೆ ಯಾವುದಾದರೂ ಉದ್ಯಮ ಆರಂಭಿಸಬೇಕು ಎಂಬ ತುಡಿತ ಇತ್ತು.  ಕೋವಿಡ್ ಸಮಯದಲ್ಲಿ ಜನರ ಆರೋಗ್ಯಕ್ಕೆ ಪೂರಕವಾದ ಡ್ರ್ಯಾಗನ್ ಫ್ರೂಟ್‌ ಬೆಳೆಯುವ ಆಲೋಚನೆ ಬಂದಿತು. ಹಿರೇಹಳ್ಳಿಯ ಕರುಣಾಕರನ್ ಅವರಿಂದ ಮಾಹಿತಿ ಪಡೆದು ಡ್ರ್ಯಾಗನ್ ಕೃಷಿಗೆ ಮುಂದಾದೆ. ಅಮ್ಮ ಲತಾ ವೆಂಕಟೇಶ್, ಸೋದರಮಾವ ಎಸ್.ವಿ. ಗಿರೀಶ್, ತಾತ ವಿಶ್ವೇಶ್ವರಯ್ಯ, ಅಜ್ಜಿ ಲೀಲಾವತಿ ನನ್ನ ಬೆನ್ನಿಗೆ ನಿಂತು ತೋಟಗಾರಿಕೆಯಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದ್ದರಿಂದ ಧೈರ್ಯ ಹೆಚ್ಚಿತು. ದಾಳಿಂಬೆ ಬೆಳೆಯುವ ಯೋಜನೆಯನ್ನೂ ಹಾಕಿಕೊಂಡಿದ್ದೇನೆ ಎಂದು ಅಮೃತ್ ತಿಳಿಸಿದರು.

ಅಮೃತ್ ಅವರ ಮೊಬೈಲ್ ನಂ: 9743478875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT