ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ತೋಟಗಾರಿಕಾ ಬೆಳೆಗಳ ಕೃಷಿ ಚಟುವಟಿಕೆ ಚುರುಕು

ವೇದಾವತಿ ನದಿ ತೀರದ ಗ್ರಾಮಗಳಲ್ಲಿ ರೈತರ ಸಂಭ್ರಮ
Last Updated 8 ಸೆಪ್ಟೆಂಬರ್ 2020, 3:16 IST
ಅಕ್ಷರ ಗಾತ್ರ

ಚಳ್ಳಕೆರೆ: ವಾಣಿವಿಲಾಸ ಸಾಗರ ಜಲಾಶಯದ 0.25 ಟಿಎಂಸಿ ಅಡಿ ನೀರು ಚಳ್ಳಕೆರೆಯ ವೇದಾವತಿ ನದಿಯ ಮೂಲಕ ಹರಿದು ಬ್ಯಾರೇಜ್‍ಗಳಲ್ಲಿ ಸಂಗ್ರಹವಾಗಿದೆ. ಇದರಿಂದ ಅಂರ್ತಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಲಭ್ಯವಾಗಿದೆ. 20-30 ವರ್ಷಗಳಿಂದ ಸ್ಥಗಿತಗೊಂಡಿದ್ದ ನದಿ ತೀರದ ನೀರಾವರಿ ಕೃಷಿ ಚಟುವಟಿಕೆ ಈಗ ಚುರುಕುಗೊಂಡಿದೆ.

4-5 ತಿಂಗಳಿನಿಂದ ಬ್ಯಾರೇಜ್‍ಗಳಲ್ಲಿ ನದಿ ನೀರು ಸಂಗ್ರಹವಾಗಿರುವ ಕಾರಣ ತಾಲ್ಲೂಕಿನ ಜಾಲಿಗೊಲ್ಲರಹಟ್ಟಿ, ಕಲಮರಹಳ್ಳಿ, ಗೊರ್ಲತ್ತು, ತೊರೆಬೀರನಹಳ್ಳಿ, ಯಲಗಟ್ಟೆ, ನಾರಾಯಣಪುರ, ಕೋನಿಗರಹಳ್ಳಿ, ಗೋಸಿಕೆರೆ, ಸೂರನಹಳ್ಳಿ, ಚೌಳೂರು, ಕಾಮಸಮುದ್ರ, ನಾಗೊಂಡನಹಳ್ಳಿ, ಪರಶುರಾಂಪುರ, ಅಲ್ಲಾಪುರ, ಜಾಜೂರು, ರೇಣುಕಾಪುರ, ಗುಡಿಹಳ್ಳಿ, ಮೈಲನಹಳ್ಳಿ, ಬೊಂಬೇರಹಳ್ಳಿ, ಸಾಣಿಕೆರೆ, ಕಾಪರಹಳ್ಳಿ ಸೇರಿ 60ಕ್ಕೂ ಹೆಚ್ಚು ಗ್ರಾಮಗಳಿವೆ. ಎಲ್ಲಾ ಬಾವಿಗಳಲ್ಲಿಯೂ ಸಮೃದ್ಧ ನೀರು ದೊರೆಯುತ್ತಿದೆ. ಇದರಿಂದ ನದಿ ತೀರದ ಗ್ರಾಮದ ರೈತರ ಕೃಷಿಗೆ ಮರುಜೀವ ಬಂದಂತಾಗಿದೆ.

ತಾಲ್ಲೂಕಿನ 4 ಬ್ಯಾರೇಜ್‍ಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಕೂಲಿ ಕೆಲಸದಿಂದ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಹೋಗಿದ್ದವರು ಕೊರೊನಾದಿಂದ ಮರಳಿ ಬಂದು ಸ್ವಗ್ರಾಮದಲ್ಲಿ ತೋಟಗಾರಿಕಾ ಕೃಷಿಯನ್ನು ಆರಂಭಿಸಿದ್ದಾರೆ. ಕುರಿ, ಮೇಕೆ, ಹಸು ಮತ್ತು ಎಮ್ಮೆಗಳ ಸಾಕಾಣಿಕೆಯ ಮೂಲಕ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮಹಿಳೆಯರು ಸ್ವಾವಲಂಬನೆಯ ಬದುಕಿನ ದಾರಿಯನ್ನು ಕಂಡುಕೊಂಡಿದ್ದಾರೆ.

‘ಮಳೆ ಇಲ್ಲದೆ ಕೊಳವೆಬಾವಿಗಳು ಬತ್ತಿಹೋಗಿದ್ದವು. ನದಿಯಲ್ಲಿ ನೀರು ಹರಿಸಿದ್ದರಿಂದ ಅಂತರ್ಜಲ ಹೆಚ್ಚಳವಾಗಿದೆ. ಇದರಿಂದ ಹೂವು, ಹಣ್ಣು, ತರಕಾರಿ ಬೆಳೆಯನ್ನು ಬೆಳೆದು ಬದುಕನ್ನು ಕಟ್ಟಿಕೊಂಡಿದ್ದೇವೆ’ ಎನ್ನುತ್ತಾರೆ ಬೊಂಬೇರಹಳ್ಳಿ ಗ್ರಾಮದ ರೈತ ಶ್ರೀಕಂಠಪ್ಪ.

‘ಕೊರೊನಾದಿಂದ ಕೂಲಿ ಕೆಲಸವಿಲ್ಲದೆ ಜೀವನ ತುಂಬಾ ಕಷ್ಟವಾಗಿತ್ತು. ಒಳ್ಳೆ ಸಮಯಕ್ಕೆ ನದಿಯಲ್ಲಿ ನೀರು ಹರಿಸುವ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಶಾಸಕ ಟಿ.ರಘುಮೂರ್ತಿ ಅವರು ಅನುಕೂಲ ಕಲ್ಪಿಸಿದ್ದಾರೆ’ ಎಂದು ಚಿಕ್ಕೇನಹಳ್ಳಿ ಗ್ರಾಮದ ರೈತ ದಿವಾಕರಪ್ಪ ಹೇಳಿದರು.

‘ನದಿ ತೀರದ ಭಾಗದಲ್ಲಿ 200 ಹೆಕ್ಟೇರ್ ಅಡಿಕೆ, 60 ಬಾಳೆ, 30 ದಾಳಿಂಬೆ ಮತ್ತು 80 ಹೆಕ್ಟೇರ್ ಪಪ್ಪಾಯಿ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ. ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಲಭ್ಯ ಇರುವ ಕಾರಣ, ಭತ್ತ, ಅಡಿಕೆ ಬದಲಿಗೆ ನರೇಗಾ ಯೋಜನೆಯ ಸೌಲಭ್ಯವನ್ನು ಬಳಕೆ ಮಾಡಿಕೊಂಡು ಹೆಚ್ಚು ಆದಾಯ ದೊರೆಯುವ ವೀಳ್ಯೆದೆಲೆ, ಕಾಳುಮೆಣಸು, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯಬೇಕು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ರೈತರಲ್ಲಿ ಮನವಿ ಮಾಡಿದ್ದಾರೆ.

ಅಂಕಿಅಂಶ

80 ಸಾವಿರ - 60ಕ್ಕೂ ಹೆಚ್ಚು ಗ್ರಾಮಗಳಲ್ಲಿರುವ ಜನಸಂಖ್ಯೆ

6 ಸಾವಿರ - ಗ್ರಾಮಗಳಲ್ಲಿರುವ ಕೊಳವೆಬಾವಿಗಳು

370 ಹೆಕ್ಟೇರ್ - ತೋಟಗಾರಿಕಾ ಬೆಳೆಗಳಿರುವ ಪ್ರದೇಶ

ನರೇಗಾ ಯೋಜನೆಯಡಿಯಲ್ಲಿ ಆಸಕ್ತ ರೈತರಿಗೆ ಹೊಸದಾಗಿ ಗುಲಾಬಿ, ಮಲ್ಲಿಗೆ ಹಾಗೂ ಸುಗಂಧರಾಜ ತೋಟಗಳನ್ನು ನಿರ್ಮಾಣ ಮಾಡಿಕೊಡಲಾಗುವುದು.
–ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT