ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗದಲ್ಲಿ ಉದ್ಯಾನ ನವೀಕರಣ; ಗಮನ ಸೆಳೆವ ಅಭಿವೃದ್ಧಿ ಕಾಮಗಾರಿ

ಪುರಸಭೆ ಕಾರ್ಯಕ್ಕೆ ಮೆಚ್ಚುಗೆ
Last Updated 4 ಫೆಬ್ರುವರಿ 2021, 6:28 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಎದುರಿಗೆ ಇರುವ ಮಧ್ಯಂತರ ನೀರು ಸರಬರಾಜು ಪಂಪ್‌ಹೌಸ್‌ ಬಳಿಯ ಉದ್ಯಾನ ನವೀಕರಣದ ಕಾಮಗಾರಿ ನಡೆಯುತ್ತಿರುವುದು ಗಮನ ಸೆಳೆಯುತ್ತಿದೆ.

ವಿದ್ಯಾನಗರದ ಅರಿಹಂತ ಬಡಾವಣೆಯಲ್ಲಿ ಹಿಂದಿನ ಪುರಸಭೆ ಸದಸ್ಯ ವೆಂಕಟೇಶ್‌ ದಳವಾಯಿ ಅವರು ಉದ್ಯಾನವನ್ನು ಅಭಿವೃದ್ಧಿ ಪಡಿಸಿದ್ದರು. ಉದ್ಯಾನದ ಮಧ್ಯದಲ್ಲೊಂದು ವಿನಾಯಕ ದೇಗುಲ ನಿರ್ಮಿಸಿದ್ದರು. ಈ ಅಭಿವೃದ್ಧಿ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿತ್ತು. ಈ ಉದ್ಯಾನ ಬಿಟ್ಟರೆ 23 ವಾರ್ಡ್‌, ಸುಮಾರು 7,000 ಮನೆ ಹಾಗೂ 30,000 ಜನಸಂಖ್ಯೆ ಹೊಂದಿರುವ ಪಟ್ಟಣದ ಯಾವುದೇ ಬಡಾವಣೆಯಲ್ಲಿ ಹೇಳಿಕೊಳ್ಳುವಂತಹ ಉದ್ಯಾನ ಇರಲಿಲ್ಲ.

ಹಲವು ಬಡಾವಣೆಗಳಲ್ಲಿ ಜನರು ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು, ಮಕ್ಕಳು ಆಟವಾಡಲು ಉದ್ಯಾನಕ್ಕೆ ಪರದಾಡುವಂತಾಗಿತ್ತು. ಪುರಸಭೆಯಲ್ಲಿ ನಡೆದ ಕೆಲವು ಸಾರ್ವಜನಿಕ ಸಭೆಯಲ್ಲಿ ನಾಗರಿಕರು ಕನಿಷ್ಠ ವಾರ್ಡಿಗೊಂದು ಆದರೂ ಉದ್ಯಾನ ನಿರ್ಮಿಸಬೇಕು ಎಂದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಪುರಸಭೆ ಆಡಳಿತ ₹ 7.50 ಲಕ್ಷ ವೆಚ್ಚದಲ್ಲಿ ಪಂಪ್‌ಹೌಸ್‌ ಬಳಿಯಿದ್ದ ಉದ್ಯಾನ ನವೀಕರಣ ಕಾಮಗಾರಿ ಆರಂಭಿಸಿದೆ. ಅಲ್ಲಿ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಕೆ, ಹುಲ್ಲು ಹಾಸಿಗೆ, ವಿಶ್ರಾಂತಿ ಬೆಂಚು, ವಾಕಿಂಗ್‌ ಮಾರ್ಗ ನಿರ್ಮಾಣ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

2018–19ನೇ ಸಾಲಿನಲ್ಲಿ ಮಧ್ಯಂತರ ಪಂಪ್‌ಹೌಸ್‌ ಹಾಗೂ ಪದ್ಮಾಂಬ ಲೇಔಟ್‌ನಲ್ಲಿ ಇರುವ ಉದ್ಯಾನ ನಿರ್ಮಾಣಕ್ಕೆ ತಲಾ
₹ 7.80 ಲಕ್ಷ ವೆಚ್ಚದಲ್ಲಿ ಟೆಂಡರ್‌ ಆಗಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಅಭಿವೃದ್ಧಿ ಕೆಲಸ ಆಗಿರಲಿಲ್ಲ. ಹಾಗಾಗಿ, ಅನುದಾನ ವ್ಯರ್ಥ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಈಗ ಅಗತ್ಯ ಕ್ರಮ ಕೈಗೊಂಡು ಪಂಪ್‌ಹೌಸ್‌ ಬಳಿಯ ಉದ್ಯಾನವನ ನವೀಕರಣ ಕೆಲಸ ಆರಂಭಿಸಲಾಗಿದೆ. ಇನ್ನು ಪದ್ಮಾಂಬ ಲೇಔಟ್‌ ಹಾಗೂ ಗಾಂಧಿವೃತ್ತದ ಬಳಿಯ ಉದ್ಯಾನದ ನವೀಕರಣ ಕಾಮಗಾರಿ ಪ್ರಾರಂಭಿಸಬೇಕಿದೆ. ಪಟ್ಟಣದಲ್ಲಿ ಇರುವ 62ಕ್ಕೂ ಹೆಚ್ಚು ಸಾರ್ವಜನಿಕ ಉಪಯೋಗಿ ನಿವೇಶನ, ಮುಖ್ಯರಸ್ತೆ ಮಾರ್ಗದಲ್ಲಿ ಸಸಿಗಳನ್ನು ನೆಡಲಾಗುವುದು. ಈ ಕಾರ್ಯಕ್ಕೆ ಈಗಾಗಲೇ 450 ಟ್ರೀಗಾರ್ಡ್‌ಗಳು ಸಿದ್ಧವಾಗಿವೆ.

‘ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರ ಅನುದಾನದಡಿ ತಲಾ ₹ 5 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ ಹಾಗೂ ಪುರಸಭೆ ಕಾರ್ಯಾಲಯ ನವೀಕರಣ ಮಾಡಲಾಗುವುದು. ಪಟ್ಟಣದ ಸೌಂದರ್ಯ ಹೆಚ್ಚಿಸಲು, ಸ್ವಚ್ಛತೆ ಕಾಪಾಡಲು, ಜನರ ನೆಮ್ಮದಿ ಜೀವನಕ್ಕೆ ಬೇಕಾದ ಮೂಲಸೌಕರ್ಯ ಸಮರ್ಪಕವಾಗಿ ಪೂರೈಸಲು ಶ್ರಮಿಸಲಾಗುತ್ತಿದೆ’ ಎಂದು ಪುರಸಭೆ ಅಧ್ಯಕ್ಷ ಎಂ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT