ಬುಧವಾರ, ಜನವರಿ 19, 2022
25 °C
ರೈಲ್ವೆ ಇಲಾಖೆಗೆ ದೂರು ಸಲ್ಲಿಸಿದರೂ ಸಿಗದ ಪರಿಹಾರ

ಚಿತ್ರದುರ್ಗ: ಮಳೆ ಸುರಿದರೆ ಹಳ್ಳಿ ರಸ್ತೆಯೇ ಆಸರೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲಾ ಕೇಂದ್ರದಿಂದ ನಾಯಕನಹಟ್ಟಿ, ತುರುವನೂರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸಣ್ಣ ಮಳೆಗೂ ಸಂಪರ್ಕ ಕಡಿತಗೊಳ್ಳುತ್ತದೆ. ಮಳೆ ಸುರಿದರೆ ವಾಹನ ಸವಾರರಿಗೆ ಹಳ್ಳಿ ರಸ್ತೆಯೇ ಆಸರೆಯಾಗಿದೆ. ಹತ್ತಾರು ಕಿ.ಮೀ ಸುತ್ತಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.

ಸೇತುವೆ ಕೆಳಭಾಗದಲ್ಲಿ ಮಳೆ ನೀರು ಹರಿದುಹೋಗಲು ನಿರ್ಮಿಸಿದ ಚರಂಡಿಯೇ ಕಂಟಕವಾಗಿದೆ. ಮಳೆ ನಿಂತು ಹಲವು ದಿನ ಕಳೆದರೂ ಇಲ್ಲಿರುವ ನೀರು ಮಾತ್ರ ಕರಗುವುದಿಲ್ಲ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಒತ್ತಡ ಹೆಚ್ಚಾದಾಗ ಮೋಟರ್ ಇಟ್ಟು ನೀರು ಹೊರತೆಗೆಯಲಾಗುತ್ತದೆ. ಶಾಶ್ವತ ಪರಿಹಾರಕ್ಕೆ ಈವರೆಗೆ ಪ್ರಯತ್ನ ನಡೆದಿಲ್ಲ.

ಚಿತ್ರದುರ್ಗ–ಚಳ್ಳಕೆರೆ– ಹೊಸಪೇಟೆ–ಗುಂತ್ಕಲ್‌ ರೈಲು ಮಾರ್ಗಕ್ಕೆ ತುರುವನೂರು ರಸ್ತೆ ಬಳಿ ಗೇಟು ಇತ್ತು. ರೈಲು ಸಂಚರಿಸುವ ಸಂದರ್ಭದಲ್ಲಿ ವಾಹನಗಳು ಕಿ.ಮೀ ದೂರದವರೆಗೆ ನಿಲುಗಡೆ ಆಗುತ್ತಿದ್ದವು. ಸಂಚಾರ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ ಐದು ವರ್ಷಗಳ ಹಿಂದೆ ಇಲ್ಲಿ ಸೇತುವೆ ನಿರ್ಮಿಸಲಾಯಿತು. ಚಿತ್ರದುರ್ಗ–ತುರುವನೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಇದು ಅನುಕೂಲವಾಗುತ್ತದೆ ಎಂಬ ಭಾವನೆ ಇತ್ತು. ಆದರೆ, ಸೇತುವೆಯೇ ಸಂಚಾರಕ್ಕೆ ತೊಡಕಾಗಿದೆ.

ತುರುವನೂರು ರಸ್ತೆ ಮಾರ್ಗವಾಗಿ ಗೋನೂರು, ಹೋ.ಚಿ. ಬೋರಯ್ಯ ಬಡಾವಣೆ, ಬಚ್ಚಬೋರಹನಟ್ಟಿ, ಬೊಮ್ಮೆನಹಳ್ಳಿ, ಹಂಪಯ್ಯನಮಾಳಿಗೆ, ಹಾಯ್ಕಲ್, ಬೆಳಗಟ್ಟ, ತುರುವನೂರು, ನಾಯಕನಹಟ್ಟಿ ಸೇರಿ ಹಲವು ಗ್ರಾಮಗಳಿಗೆ ತೆರಳಬಹುದಾಗಿದೆ. ನಿತ್ಯ ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ನಗರದ ಸಮೀಪದ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಬರುತ್ತಾರೆ. ಈ ಭಾಗದ ರೈತರು ಹೂವು, ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆ ಅವಲಂಬಿಸಿದ್ದಾರೆ.

ಸೇತುವೆ ಆಚೆಗೂ ನಗರ ವಿಸ್ತರಿಸಿದೆ. ಹಲವು ಬಡಾವಣೆಗಳು ನಿರ್ಮಾಣವಾಗಿವೆ. ಸಣ್ಣ ಮಳೆ ಸುರಿದರೂ ಇಲ್ಲಿನ ನಿವಾಸಿಗಳಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ. ನಗರಕ್ಕೆ ಬಂದವರು ಮನೆಗೆ ಮರಳಲು ಹತ್ತಾರು ಕಿ.ಮೀ ಸುತ್ತಬೇಕು. ನಗರಕ್ಕೆ ಬರುವವರೂ ಇದೇ ಸಮಸ್ಯೆ ಎದುರಿಸಬೇಕು. ಸೇತುವೆ ನಿರ್ಮಾಣವಾದರೂ ಮಳೆಗಾಲದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಅಳಲು ಈ ಮಾರ್ಗದ ಪ್ರಯಾಣಿಕರದ್ದು.

ರಸ್ತೆಗೆ ತಿರುವು ಇರುವ ಪ್ರದೇಶದಲ್ಲಿ ಕೆಳಸೇತುವೆ ನಿರ್ಮಾಣ ಮಾಡಿದ್ದು ಅವೈಜ್ಞಾನಿಕ ಎಂಬುದು ಪ್ರಯಾಣಿಕರ ಅಭಿಪ್ರಾಯ. ಎದುರಿಗೆ ಬರುವ ವಾಹನಗಳು ಮತ್ತೊಂದು ಬದಿಯಿಂದ ಸಾಗುವವರಿಗೆ ಕಾಣುವುದೇ ಇಲ್ಲ. ಇಳಿಜಾರಿನಲ್ಲಿ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದಿರುವ ಹಾಗೂ ಅಪಘಾತ ಮಾಡಿಕೊಂಡ ನಿದರ್ಶನಗಳು ಹೆಚ್ಚಾಗಿವೆ. ಕೆಳಸೇತುವೆ ಸಮೀಪದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ.

ಮಳೆ ಸುರಿಯುತ್ತಿದ್ದಂತೆ ಸಮೀಪದ ಬಡಾವಣೆಯ ನೀರು ಸೇತುವೆಯ ಕೆಳಭಾಗವನ್ನು ಸೇರುತ್ತದೆ. ನೀರು ಹರಿದುಹೋಗಲು ನಿರ್ಮಿಸಿದ ಚರಂಡಿಗಳು ಕಟ್ಟಿಕೊಂಡು ಹಲವು ತಿಂಗಳು ಕಳೆದಿವೆ. ಕಾಲಕಾಲಕ್ಕೆ ಇವನ್ನು ಶುಚಿಗೊಳಿಸದೇ ಇರುವುದರಿಂದ ಮಳೆ ನೀರು ಹರಿದುಹೋಗುತ್ತಿಲ್ಲ. ಮೂರು ತಿಂಗಳಿಂದ ಈ ಸೇತುವೆಯಲ್ಲಿ ನೀರು ಖಾಲಿಯಾಗಿಲ್ಲ. ಈ ಬಗ್ಗೆ ಅನೇಕರು ರೈಲ್ವೆ ಇಲಾಖೆಗೆ ದೂರು ನೀಡಿದ್ದಾರೆ.

ರೈಲ್ವೆ ಕೆಳಸೇತುವೆ ದಾಟಿ ನಗರಕ್ಕೆ ಹೋಗಬೇಕು. ಸಣ್ಣ ಮಳೆ ಸುರಿದರೂ ಸೇತುವೆ ಹಳ್ಳದ ಸ್ವರೂಪ ಪಡೆಯುತ್ತದೆ. ನಗರದ ಜೊತೆಗಿನ ಸಂಪರ್ಕಕ್ಕೆ ಹತ್ತಾರು ಕಿ.ಮೀ ಸುತ್ತಬೇಕಾಗುತ್ತದೆ. ತುರುವನೂರು ರಸ್ತೆ ನಿವಾಸಿ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು