ಗುರುವಾರ , ಆಗಸ್ಟ್ 18, 2022
25 °C
500 ಎಂ.ಎಲ್. ನ್ಯಾನೊ ಯೂರಿಯಾ 45 ಕೆ.ಜಿ ಮಾಮೂಲಿ ಯೂರಿಯಾಕ್ಕೆ ಸಮ

ಕಾಲಗೆರೆ ಗ್ರಾಮಕ್ಕೆ ಬಂದ ಇಫ್ಕೊ ನ್ಯಾನೊ ಯೂರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಗುಜರಾತಿನ ಕಲೋಲ್‌ನಲ್ಲಿರುವ ಇಫ್ಕೊ ನ್ಯಾನೊ ಯೂರಿಯಾ ಕಾರ್ಖಾನೆಯಿಂದ 500 ಎಂ.ಎಲ್ ನ್ಯಾನೊ ಯೂರಿಯಾ ಬಾಟಲ್‌ಗಳನ್ನು ಹೊತ್ತ ಮೊದಲ ವಾಹನ ಕರ್ನಾಟಕಕ್ಕೆ ಬಂದ ನಂತರ ರಾಜ್ಯದಲ್ಲಿಯೇ ಪ್ರಥಮವಾಗಿ ಹೋಬಳಿಯ ಕಾಲಗೆರೆ ಗ್ರಾಮದ ತಿಮ್ಮಣ್ಣ ಅವರ ಜಮೀನಿನಲ್ಲಿ ಬುಧವಾರ ನ್ಯಾನೊ ದ್ರವರೂಪದ ಗೊಬ್ಬರವನ್ನು ಸಿಂಪಡಿಸಲಾಯಿತು.

ನ್ಯಾನೊ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. 500 ಎಂ.ಎಲ್. ನ್ಯಾನೊ ಯೂರಿಯಾ 45 ಕೆ.ಜಿ. ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಬೆಲೆ ಒಂದು ಬಾಟಲ್‌ಗೆ ₹ 240. ಇದು ಪರಿಸರ ಸ್ನೇಹಿಯಾಗಿದ್ದು, ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಲು ಸಹಾಯಕವಾಗಲಿದೆ ಎನ್ನಲಾಗಿದೆ.

‘ಒಂದೆಡೆ ಶೇ 8ರಿಂದ 15ರಷ್ಟು ಖರ್ಚು ಕಡಿಮೆಯಾಗಲಿದೆ. ಇನ್ನೊಂದೆಡೆ ಇಳುವರಿಯು 15ರಿಂದ 20 ಪ್ರತಿಶತ ಹೆಚ್ಚಲಿದೆ. ಸಾಂಪ್ರದಾಯಿಕ ಯೂರಿಯಾ 45 ಕೆ.ಜಿ. ಪ್ಯಾಕೆಟ್‌ ಬದಲು 500 ಎಂ.ಎಲ್ ಬಾಟಲ್ ಪರಿಣಾಮ ಬೀರುತ್ತದೆ. ಒಂದು ಎಕರೆಗೆ 150 ಎಂ.ಎಲ್ ಶಿಫಾರಸು ಮಾಡಲಾಗುತ್ತದೆ. ಒಂದು ಲೀಟರ್ ನೀರಿಗೆ 2ರಿಂದ 4 ಎಂ.ಎಲ್. ನ್ಯಾನೊ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಒಂದು ಬೆಳೆಗೆ 30 ದಿನಗಳಿಗೆ ಮೊದಲ ಬಾರಿ ಹಾಗೂ 45 ದಿನಗಳಿಗೆ ಎರಡನೇ ಬಾರಿ ಸಿಂಪರಣೆ ಮಾಡಬೇಕು. ಇದರಿಂದ ಶೇ 100ರಷ್ಟು ಪರಿಣಾಮ ಬೀರುತ್ತದೆ. ಗಿಡದ ಬೆಳವಣಿಗೆಗೆ ಬೇಕಾದ ಸಾರಜನಕವನ್ನು ನೀಡುತ್ತದೆ. ಈ ಗೊಬ್ಬರದ ಜೊತೆ ರಸಾವರಿ, ಕೀಟನಾಶಕ, ಶೀಲೀಂಧ್ರ ನಾಶಕವನ್ನೂ ಬಳಸಬಹುದು. ಯಾವುದೇ ತೊಂದರೆ ಇಲ್ಲ. ಅಡ್ಡಪರಿಣಾಮ ಇಲ್ಲ. ಜೂನ್ 25ರ ನಂತರ ಇಫ್ಕೊ ವಿತರಕರ ಬಳಿ ಈ ನ್ಯಾನೊ ದೊರೆಯಲಿದೆ’ ಎಂದು ಇಫ್ಕೊ ಜಿಲ್ಲಾ ಕ್ಷೇತ್ರ ವಿಸ್ತರಣಾಧಿಕಾರಿ ಲಕ್ಷ್ಮೀಶ್ ಮಾಹಿತಿ ನೀಡಿದರು.

ಇಫ್ಕೊ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆಗೆ ಮಂಗಳವಾರ ಚಾಲನೆ ನೀಡಿದ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಶಾಸಕ ಎಂ.ಚಂದ್ರಪ್ಪ ತಾವೇ ಸ್ವತಃ ಗೊಬ್ಬರವನ್ನು ಸಿಂಪಡಿಸಿದರು. ‘ಇಫ್ಕೊ ಕಂಪನಿ ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ನ್ಯಾನೊ ಯೂರಿಯಾವನ್ನು ಪರಿಚಯಿಸಿದೆ. ಕಡಿಮೆ ದರದಲ್ಲಿ ಅತಿ ಹೆಚ್ಚು ಇಳುವರಿಗೆ ಇದು ಸಹಕಾರಿಯಾಗಲಿದೆ. ಇನ್ನು ಮುಂದೆ ರೈತರು ಗೊಬ್ಬರದ ಚೀಲ ಹೊತ್ತು ಹೊಲಗಳಿಗೆ ಹೋಗುವ ಕಾಲ ಮುಗಿಯುತ್ತದೆ. ರೈತರ ಇದನ್ನು ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ಈ ಮೂಲಕ ಪರಿಸರವನ್ನು ಕಾಪಾಡಬೇಕು’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ‘ಭಾರತ ಸರ್ಕಾರ ಈ ಗೊಬ್ಬರವನ್ನು 11 ಸಾವಿರ ರೈತರ ಜಮೀನುಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಬಳಸಿ ಶಿಫಾರಸು ಮಾಡಿದೆ. ಪರಿಸರದ ಮೇಲೆ ಆಗುವ ದುಷ್ಪರಿಣಾಮವನ್ನು ಈ ನ್ಯಾನೊ ತಂತ್ರಜ್ಞಾನ ತಡೆಯುತ್ತದೆ’ ಎಂದರು.

‘ಇನ್ನು ರೈತರು ಯೂರಿಯಾ ಗೊಬ್ಬರಕ್ಕೆ ಸಾವಿರಾರು ರೂಪಾಯಿ ವೆಚ್ಚ ಮಾಡಿ, ಸರತಿ ಸಾಲಿನಲ್ಲಿ ನಿಂತು ಪಡೆಯುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಎಟುಕುವ ಈ ನ್ಯಾನೊ ಯೂರಿಯಾ ಹೊಸ ಆವಿಷ್ಕಾರವಾಗಿದೆ’ ಎಂದು ಇಫ್ಕೊ ನಿರ್ದೇಶಕ ಎಚ್.ಎಂ. ಮಂಜುನಾಥ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ.ಶರಣಪ್ಪ, ಕಾಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಶಾಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಇಒ ಹನುಮಂತಪ್ಪ, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಕುಮಾರ್, ಟಿಎಚ್‌ಒ ಗಿರೀಶ್, ಶೇಖರಪ್ಪ, ಕಲ್ಲೇಶ್, ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮದ ರೈತರು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.