ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಚಳವಳಿಗೆ ಚಿತ್ರದುರ್ಗ ಜಿಲ್ಲೆಯ ಕೊಡುಗೆ ಅಪಾರ

ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮೆಚ್ಚುಗೆ
Last Updated 11 ಆಗಸ್ಟ್ 2021, 15:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಬ್ರಿಟಿಷ್‌ ಆಳ್ವಿಕೆಯನ್ನು ಕೊನೆಗೊಳಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಲು ನಡೆದ ಹೋರಾಟದಲ್ಲಿ ಕೋಟೆನಾಡಿನ ಕೊಡುಗೆ ಅಪಾರ. ಈಚಲು ಮರ ಕಡಿಯುವ ಹೋರಾಟ ಅಚ್ಚಳಿಯದೇ ಉಳಿದಿದೆ ಎಂದು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಸ್ಮರಿಸಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಕೊಡುಗೆ ಹಾಗೂ ಮಾಧ್ಯಮಗಳ ಪಾತ್ರ’ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ಈಚಲು ಮರ ಕಡಿಯುವ ಹೋರಾಟಕ್ಕೆ ಎಸ್‌.ನಿಜಲಿಂಗಪ್ಪ ನೇತೃತ್ವ ನೀಡಲು ನಿರ್ಧಾರವಾಗಿತ್ತು. ಆದರೆ, ಚಳವಳಿ ಆರಂಭವಾಗುತ್ತಿದ್ದಂತೆ ಪ್ರಮುಖ ನಾಯಕರನ್ನು ಬಂಧಿಸಲಾಯಿತು. ಆದರೂ, ಚಳವಳಿ ಮುಂದುವರಿಯಿತು. ಅವರು ಹೋರಾಟ ಮಾಡದೇ ಇದ್ದಿದ್ದರೆ ಸ್ವಾತಂತ್ರ್ಯ ಪಡೆಯುವುದು ಕಷ್ಟವಾಗುತ್ತಿತ್ತು. ಸುಭಾಷ್ ಚಂದ್ರ ಬೋಸ್ ಹಾಗೂ ಅನೇಕ ಮಹನೀಯರ ತ್ಯಾಗದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಹೇಳಿದರು.

‘ಎಸ್‌.ರಂಗರಾವ್‌ ಹಾಗೂ ಭೀಮಪ್ಪ ನಾಯಕ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಇವರು ಆಯ್ಕೆಯಾಗಿದ್ದರು. ಇವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸಲಾಯಿತು. ನವ ಚಿತ್ರದುರ್ಗ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಭಾಜನರಾಗಿರುವ ಭೀಮಪ್ಪ 1958ರಲ್ಲಿಯೇ ಸಿಮೆಂಟ್‌ ರಸ್ತೆ ನಿರ್ಮಿಸಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲಕ್ಕೆ ದೇಶದ ಬಹುತೇಕ ಭಾಗ ಬ್ರಿಟಿಷರ ವಶಕ್ಕೆ ಹೋಗಿತ್ತು. ಬ್ರಿಟಿಷರು ಭ್ರಷ್ಟರಾಗಿದ್ದರು. ದೇಶವೊಂದನ್ನು ಕೊಳ್ಳೆ ಹೊಡೆಯುವ ಪರಿಯನ್ನು ವಿಶ್ವಕ್ಕೆ ಕಲಿಸಿಕೊಟ್ಟರು. ಎರಡು ಶತಮಾನಕ್ಕೂ ಹೆಚ್ಚು ಕಾಲ ದೇಶ ಆಳಿದರು. ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲು ಅಂಡಮಾನ್‌ ದ್ವೀಪದಲ್ಲಿ ಜೈಲು ನಿರ್ಮಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ಮೈಸೂರು ಅರಸರು ಉತ್ತಮ ಆಡಳಿತ ನೀಡಿದರು’ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ‘ಸ್ವಾತಂತ್ರ್ಯಕ್ಕೆ ನಡೆದ ಚಳವಳಿಯ ಇತಿಹಾಸ ಯುವ ಜನಾಂಗಕ್ಕೆ ತಿಳಿಯಬೇಕು. ದೇಶಾಭಿಮಾನ, ದೇಶದ ಏಕತೆಯ ಭಾವನೆ ಮೂಡಿಸಬೇಕು. ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರಿಗೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯ ಚಿತ್ರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಬೇಕು. ಹೋರಾಟಕ್ಕೆ ಸಂಬಂಧಿಸಿದ ಸ್ಮಾರಕಗಳನ್ನು ಉಳಿಸಬೇಕು’ ಎಂದು ಸಲಹೆ ನೀಡಿದರು.

‘ಘನತವೆತ್ತ ಜೀವನ ಸಿಗಬೇಕು’

ದೇಶದ ಶೇ 80ರಷ್ಟು ಸಂಪತ್ತು ಕೆಲವೇ ಜನರ ಕೈಯಲ್ಲಿದೆ. ಘನತವೆತ್ತ ಜೀವನ ಎಲ್ಲರಿಗೂ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಪಡೆದಿದ್ದು ಸಾರ್ಥಕವಾಗಲಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಚಿದಾನಂದ ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯ ಹೋರಾಟದ ಜೊತೆಗೆ ಸಮಾಜವಾದಿ ಚಳುವಳಿ ಕೂಡ ಬೆಳೆಯಿತು. ಗಾಂಧೀಜಿಯವರು ಆಧುನೀಕರಣ, ನಗರೀಕರಣ, ಯಾಂತ್ರೀಕರಣವನ್ನು ವಿರೋಧಿಸಿದರು. ಅವರ ಹಿಂದ್‌ ಸ್ವರಾಜ್‌ ಪರಿಕಲ್ಪನೆ ಅದ್ಭುತವಾಗಿತ್ತು. ಗಾಂಧೀಜಿ ಅವರ ಕನಸು ನನಸಾಗುವತ್ತ ಪ್ರಯತ್ನ ಮಾಡಬೇಕಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಧನಂಜಯ ಇದ್ದರು.

***

ಎಸ್‌.ನಿಜಲಿಂಗಪ್ಪ ಅವರ ಮನೆ ಸ್ಮಾರಕವಾಗಿ ರೂಪಿಸಲಾಗುತ್ತಿದೆ. ಸರ್ಕಾರ ₹ 2 ಕೋಟಿ ಅನುದಾನ ನೀಡಿದೆ. ಅವರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಸ್ಮಾರಕದ ರೂಪುರೇಷ ಸಿದ್ಧಪಡಿಸಲಾಗುವುದು.

ಕವಿತಾ ಎಸ್‌.ಮನ್ನಿಕೇರಿ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT