ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕನಸು ಭಗ್ನಗೊಳಿಸಿದ ಹೊಸ ನಿಯಮ, ಇದ್ದೂ ಇಲ್ಲದಂತಾದ ಆರ್‌ಟಿಇ!

Published 16 ಮೇ 2024, 7:13 IST
Last Updated 16 ಮೇ 2024, 7:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರವೇಶ ಪಡೆಯಬೇಕೆಂಬ  ಪಾಲಕರ ಆಸಕ್ತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಾರಂಭದಲ್ಲಿದ್ದ ಉತ್ಸಾಹ ಸರ್ಕಾರದ ನಿಯಮಗಳಿಂದ ಕುಂದಿದೆ.

ಜಿಲ್ಲೆಯ 57 ಅನುದಾನಿತ ಶಾಲೆಗಳಿಗೆ ಪ್ರವೇಶಾತಿಗೆ ಅವಕಾಶವಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 294 ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ, 161 ಅರ್ಜಿಗಳು ಮಾತ್ರ ಸ್ವೀಕೃತಗೊಂಡಿವೆ. ಈಗಾಗಲೇ ಮೊದಲ ಸುತ್ತಿನ ಪ್ರವೇಶಾತಿ ಪೂರ್ಣಗೊಂಡಿದೆ.

2018-19ರಲ್ಲಿ 29 ವಿದ್ಯಾರ್ಥಿಗಳು, 2020ರಲ್ಲಿ 16, 2021ರಲ್ಲಿ 10, 2022ರಲ್ಲಿ 9 ವಿದ್ಯಾರ್ಥಿಗಳು ಸೇರಿ ಒಟ್ಟು 64 ವಿದ್ಯಾರ್ಥಿಗಳು ಮಾತ್ರ ಇದರಡಿ ಓದುತ್ತಿದ್ದಾರೆ. ಈ ಅಂಕಿ– ಅಂಶವೇ ಪಾಲಕರ ನಿರಾಸಕ್ತಿ ಬಿಂಬಿಸುತ್ತಿದೆ.

ಕೇಂದ್ರ ಸರ್ಕಾರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು 2009ರಲ್ಲಿ ಜಾರಿ ಮಾಡಿತು. ಇದು 2012ರಿಂದ ಅನುಷ್ಠಾನಗೊಂಡಿತು. 2019 ರಲ್ಲಿ ಬದಲಾದ ನಿಯಮವೇ ಇಂದಿನ ಸ್ಥಿತಿಗೆ ಕಾರಣ ಎನ್ನಲಾಗಿದೆ. ಕಾಯ್ದೆ ಜಾರಿಯಾದ ವರ್ಷದಿಂದ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶ್ರೀಮಂತರ ಮಕ್ಕಳು ಓದುವ, ಸಮೀಪದ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿತ್ತು. ಬದಲಾದ ನಿಯಮದಿಂದ ಅಂಥ ಶಾಲೆಗಳು ಕಾಯ್ದೆ ವ್ಯಾಪ್ತಿಯಿಂದ ಹೊರಗುಳಿದಿವೆ. 2019ರಿಂದ 2022ರವರೆಗೆ 64 ವಿದ್ಯಾರ್ಥಿಗಳು ಮಾತ್ರ ಕಾಯ್ದೆ ಅಡಿ ಪ್ರವೇಶ ಪಡೆದಿದ್ದಾರೆ.

ಕಾಯ್ದೆ ಅಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಅಥವಾ 1ನೇ ತರಗತಿಯಿಂದ 10ನೇ ತರಗತಿವರೆಗೆ ಎಲ್ಲ ರೀತಿಯ ಖಾಸಗಿ ಶಾಲೆಗಳಲ್ಲಿ ಓದುವ ಅವಕಾಶ ಕಲ್ಪಿಸಲಾಗಿತ್ತು. ಆರಂಭದ ವರ್ಷಗಳಲ್ಲಿ ಆರ್‌ಟಿಇಗೆ ಇನ್ನಿಲ್ಲದ ಬೇಡಿಕೆಯಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರ ನಿಯಮ ಬದಲಿಸುತ್ತ ಬಂದಿತು.

ಕಾಯ್ದೆ ಪ್ರಕಾರ ಎಲ್ಲ ಖಾಸಗಿ ಶಾಲೆಗಳು ಶೇ 25ರಷ್ಟು ಸೀಟುಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಮೀಸಲಿ ಡಬೇಕು. ಈ ಶಾಲೆಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಭರಿಸುತ್ತದೆ. 2012ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 202 ಶಾಲೆಗಳು ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಿದ್ದವು. ಆಗ ಜಿಲ್ಲೆಯಾದ್ಯಂತ 8,839 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿದ್ದರು.

ಪ್ರಾರಂಭದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದ ಕಾರಣ ಲಾಟರಿ ಮೂಲಕ ಆಯ್ಕೆ ಮಾಡುವ ನಿಯಮ ಜಾರಿಗೊಳಿಸಲಾಯಿತು. ಆದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿರುವ ಕಾರಣ ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ 2019ರಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಇದ್ದರೆ ಆ ಭಾಗದ ಖಾಸಗಿ ಶಾಲೆಯನ್ನು ಆರ್‌ಟಿಇಯಿಂದ ಹೊರಗಿಟ್ಟಿತು.

ಎಲ್ಲ ಕಡೆಗಳಲ್ಲೂ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿರುವುದರಿಂದ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುಸಿಯಲು ಪ್ರಾರಂಭವಾಯಿತು.

‘ಬಡ ಹಾಗೂ ಮಧ್ಯಮ ವರ್ಗದವರಿಗೆ ಖಾಸಗಿ ಶಾಲೆಯ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸಲು ಆಗುವುದಿಲ್ಲ. ಆದ್ದರಿಂದ  ಪ್ರಾರಂಭದಲ್ಲಿದ್ದ ನಿಯಮ ಮರು ಜಾರಿಯಾದರೆ ಪಾಲಕರಿಗೆ ನೆರವಾಗುತ್ತದೆ. ಇಲ್ಲವಾದರೆ ಯೋಜನೆ ಇದ್ದೂ ಇಲ್ಲದಂತಾಗುತ್ತದೆ’ ಎಂದು ಪಾಲಕ ಜಗದೀಶ್‌ ಹೇಳುತ್ತಾರೆ.

2019ರಿಂದ ಒಂದು ಕಿಲೋ ಮೀಟರ್‌ ವ್ಯಾಪ್ತಿಯ ಪ್ರತಿಷ್ಠಿತ ಶಾಲೆಗಳು ಮ್ಯಾಪಿಂಗ್‌ ಆಗದಿರುವ ಕಾರಣ ಸಾಕಷ್ಟು ಶಾಲೆಗಳು ಯೋಜನೆ ವ್ಯಾಪ್ತಿಯಿಂದ ಹೊರಗುಳಿದಿವೆ.

ಸದ್ಯ ಜಿಲ್ಲೆಯಲ್ಲಿ 57 ಶಾಲೆಗಳು ಮಾತ್ರ ಕಾಯ್ದೆಯ ಅಡಿಯಲ್ಲಿವೆ. ಜತೆಗೆ ಪ್ರತಿ ವರ್ಷ ಸೀಟುಗಳು ಉಳಿಯುತ್ತಿವೆ.

ಸರ್ಕಾರದ ನಿಯಮದಂತೆ ಪಾಲಕರು ಖಾಸಗಿ ಶಾಲೆಗಳ ಪ್ರವೇಶಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ನಿಯಮಾನುಸಾರ ಈಗಾಗಲೇ ಮೊದಲ ಸುತ್ತಿನ ಸೀಟು ಹಂಚಿಕೆಯಾಗಿ ದಾಖಲಾತಿ ಮೇ 13ಕ್ಕೆ ಪೂರ್ಣಗೊಂಡಿದೆ.
ಎಂ.ನಾಸೀರುದ್ದೀನ್‌ , ಹೆಚ್ಚುವರಿ ಪ್ರಭಾರ ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT