ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ನೇರಳೆ ಹಣ್ಣು ಬೆಳೆಯಲು ಮುಂದಾದ ಸಹೋದರರು

ಅಂಜೂರ, ಮೋಸಂಬಿ, ಕಿತ್ತಲೆ, ಕಾಫಿ, ಡ್ರ್ಯಾಗನ್ ಫ್ರೂಟ್, ಗೋಡಂಬಿಯಲ್ಲದೇ ಮತ್ತಷ್ಟು ಪ್ರಯೋಗ
Last Updated 14 ಜುಲೈ 2021, 3:36 IST
ಅಕ್ಷರ ಗಾತ್ರ

ಹಿರಿಯೂರು: ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣು ಬೆಳೆ ಈಚೆಗೆ ಜನಪ್ರಿಯವಾಗುತ್ತಿದೆ. ಪ್ರಯೋಗಶೀಲತೆಗೆ ಹೆಸರಾಗಿರುವ ಹಿರಿಯೂರು ತಾಲ್ಲೂಕಿನ ರೈತರು, ಅಂಜೂರ, ಮೋಸಂಬಿ, ಕಿತ್ತಲೆ, ಕಾಫಿ ಬೆಳೆಯ ನಂತರ ಡ್ರ್ಯಾಗನ್ ಫ್ರೂಟ್, ಗೋಡಂಬಿಯಲ್ಲದೇ ಈಗ ನೇರಳೆಯತ್ತ ಗಮನ ಹರಿಸಿದ್ದಾರೆ. ತಾಲ್ಲೂಕಿನ ಆದಿವಾಲ, ಬಬ್ಬೂರು, ಸೋಮೇರಹಳ್ಳಿ, ಪರಮೇನಹಳ್ಳಿ, ದೊಡ್ಡಗಟ್ಟ ಮೊದಲಾದ ಕಡೆ 30 ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ನೇರಳೆ ಬೆಳೆಯುತ್ತಿದ್ದಾರೆ.

ಸರ್ಕಾರಿ ಉದ್ಯೋಗ ತೊರೆದು ತೋಟಗಾರಿಕೆ: ಮೌಂಟ್ ಅಬುವಿನಲ್ಲಿ ಸಿಆರ್‌ಪಿಎಫ್‌ನಲ್ಲಿ ಡಿವೈಎಸ್‌ಪಿ ಆಗಿ ಸೇವೆಗೆ ಸೇರಿದ ಒಂದೇ ವರ್ಷಕ್ಕೆ ತೋಟಗಾರಿಕೆಯ ಸೆಳೆತಕ್ಕೆ ಒಳಗಾದ ತಾಲ್ಲೂಕಿನ ಆದಿವಾಲ ಗ್ರಾಮದ ಟಿ.ರವಿಶಂಕರ್ ತಮ್ಮ ಅಣ್ಣ ಟಿ.ತ್ರಿಯಂಭಕಮೂರ್ತಿ ಜೊತೆಗೂಡಿ 12 ವರ್ಷಗಳಿಂದ ತೋಟದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಸುಗಂಧ ದ್ರವ್ಯ ತಯಾರಿಸಲು ಬಳಸುವ ‘ಪೋಗೊಸ್ಟಮನ್ ಪಚೋಲಿ’ ಬೆಳೆಯನ್ನು ಅವರು 2010ರಲ್ಲಿಯೇ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದ್ದರು. ಇದಲ್ಲದೇ ತಮ್ಮ ತೋಟದಲ್ಲಿ ಮಾವು, ಬಾಳೆ, ಸೀಬೆ, ಮೋಸಂಬಿ, ಸಪೋಟ, ಪಪ್ಪಾಯಿ, ದಾಳಿಂಬೆ ಬೆಳೆದ ನಂತರ ಆರೇಳು ವರ್ಷಗಳಿಂದ ನೇರಳೆ ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

‘ಮಾವು, ಸೀಬೆ, ದಾಳಿಂಬೆ, ಸಪೋಟ ಎಲ್ಲವೂ ಸೀಸನಲ್ ಹಣ್ಣುಗಳು. ವರ್ಷದ ಎಲ್ಲ ಕಾಲದಲ್ಲೂ ತೋಟದಿಂದ ಆದಾಯ ದೊರೆಯಬೇಕೆಂಬ ಕಾರಣಕ್ಕೆ ನೇರಳೆ ಹಾಕಿದ್ದೇವೆ. ಮಾವಿನ ಹಣ್ಣಿನ ಸೀಸನ್ ಮುಗಿದ ತಕ್ಷಣ ಬರುವ ನೇರಳೆ ಹಣ್ಣು ಕೇವಲ ಒಂದರಿಂದ ಒಂದೂವರೆ ತಿಂಗಳು ಇರುತ್ತದೆ. ಬೆಂಗಳೂರು ಸಮೀಪದ ನರ್ಸರಿಯೊಂದರಿಂದ ಜಂಬು ನೇರಳೆ ಸಸಿ ತಂದಿದ್ದೆವು. ಒಂದೂವರೆ ಎಕರೆಯಲ್ಲಿ 30 ಅಡಿ ಅಂತರದಲ್ಲಿ 50 ಗಿಡಗಳನ್ನು ಹಾಕಿದ್ದೇವೆ. ನಾಲ್ಕು ವರ್ಷಗಳಿಗೆ ಗಿಡಗಳು ಹಣ್ಣು ಬಿಡಲು ಆರಂಭಿಸುತ್ತವೆ. ವರ್ಷ ಕಳೆದಂತೆ ಇಳುವರಿ ಹೆಚ್ಚುತ್ತ ಹೋಗುತ್ತದೆ. ಜೂನ್‌ನಲ್ಲಿ ಆರಂಭವಾಗಿ ಜುಲೈ ಅಂತ್ಯದವರೆಗೆ ನೇರಳೆ ಹಣ್ಣಿನ ಸೀಸನ್ ಇರುತ್ತದೆ’ ಎಂದು ರವಿಶಂಕರ್ ವಿವರಿಸಿದರು.

ತುಂಬಾ ಸೂಕ್ಷ್ಮ: ‘ನಾಲ್ಕು ವರ್ಷ ಪ್ರಾಯದ ಗಿಡವೊಂದರಿಂದ 30–40 ಕೆ.ಜಿ ಹಣ್ಣು ಸಿಗುತ್ತದೆ. ಹಣ್ಣು ಕೊಯ್ಲಿಗೆ ಬರುವವರೆಗೆ ಗಿಡವೊಂದನ್ನು ಬೆಳೆಸಲು ₹ 1,000ದಿಂದ ₹ 1,200 ಖರ್ಚು ಬರುತ್ತದೆ. ನೇರಳೆ ಹಣ್ಣು ತುಂಬಾ ಸೂಕ್ಷ್ಮ. ಕೊಯ್ಲು ಮಾಡಿದ ಹಣ್ಣನ್ನು ದಾಸ್ತಾನು ಮಾಡಲು ಬರುವುದಿಲ್ಲ. ಮಾರುಕಟ್ಟೆ ಬೇಡಿಕೆ ನೋಡಿಕೊಂಡು ಹಣ್ಣು ಕೀಳಬೇಕು. ನೇರಳೆ ಹಣ್ಣಿಗೆ ನಿಶ್ಚಿತ ಮಾರುಕಟ್ಟೆಯಿಲ್ಲ. ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆ ಇದೆ. ಆದರೆ ಬೆಳಿಗ್ಗೆ 10ರೊಳಗೆ ಅಲ್ಲಿಗೆ ಹಣ್ಣು ತಲುಪಿಸುವುದು ದೊಡ್ಡ ಸವಾಲು. ಹಿಂದಿನ ದಿನ ಹಣ್ಣು ಕಿತ್ತು ಇಟ್ಟರೆ, ಮೆತ್ತಗಾಗಿ ಹೋಗುತ್ತದೆ. ಹಣ್ಣು ಮಾಗಿ ಮರದಿಂದ ನೆಲದ ಮೇಲೆ ಬಿದ್ದಲ್ಲಿ ಒಡೆದು ಹೋಗುತ್ತದೆ. ಹಣ್ಣು ನೆಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕು. ಬೆಳಿಗ್ಗೆ ಕಿತ್ತು ಮಾರುಕಟ್ಟೆಗೆ ಒಯ್ಯೋಣವೆಂದರೆ ಸಮಯ ಸಾಕಾಗುವುದಿಲ್ಲ. ಮರ ಎತ್ತರಕ್ಕೆ ಬೆಳೆದಿದ್ದರೆ ಕೊಯ್ಲು ಇನ್ನೂ ಕಷ್ಟ. ಮರದ ಕೊಂಬೆಗಳು ಗಟ್ಟಿಯಾಗಿರದ ಕಾರಣ ಮುರಿಯುವ ಭಯ ಇರುತ್ತದೆ. ಬೇಡಿಕೆ ನೋಡಿಕೊಂಡು ಹಣ್ಣು ಕಿತ್ತರೆ ನಷ್ಟವಾಗುವುದಿಲ್ಲ’ ಎನ್ನುತ್ತಾರೆ ತ್ರಿಯಂಭಕಮೂರ್ತಿ.

‘ಬೇಡಿಕೆ ಹೆಚ್ಚಿದ್ದರೆ ಮಾರಾಟಗಾರರು ತೋಟಕ್ಕೇ ಬಂದು ಹಣ್ಣು ಖರೀದಿಸುತ್ತಾರೆ. ಹಣ್ಣು ಮತ್ತು ಹಣ್ಣಿನ ಬೀಜ ಮಧುಮೇಹಕ್ಕೆ ಉತ್ತಮ ಔಷಧ ಎಂಬ ಮಾತಿದ್ದು, ಬಹಳಷ್ಟು ಜನ ದೂರವಾಣಿ ಕರೆ ಮಾಡುತ್ತಾರೆ. ಅಂತಹವರಿಗೆ ಹಿರಿಯೂರು ನಗರದಲ್ಲಿ ಒಂದು ಜಾಗಕ್ಕೆ ಬರಲು ತಿಳಿಸಿ ಹಣ್ಣು ಮಾರುತ್ತೇವೆ’ ಎಂದು ಅವರು ಹೇಳುತ್ತಾರೆ.

‘ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ವರ್ಷವಿಡೀ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಇದರಿಂದ ಹತ್ತಾರು ಕುಟುಂಬಗಳಿಗೆ ನಿತ್ಯ ಕೂಲಿ ಸಿಗುತ್ತದೆ. ಮನೆಯವರಿಗೂ ಸಾಕಷ್ಟು ಕೆಲಸ ಇರುತ್ತದೆ. ಹೆಚ್ಚು ನೀರು ಬಯಸದ, ಬಯಲುಸೀಮೆಗೆ ಅನುಕೂಲಕರವಾದ ಸಪೋಟ, ಮಾವು, ನೇರಳೆ, ಡ್ರ್ಯಾಗನ್ ಫ್ರೂಟ್, ಗೋಡಂಬಿಯಂತಹ ಬೆಳೆಗಳನ್ನು ಹಾಕಿದಲ್ಲಿ ರೈತರು ಸಂಕಷ್ಟದಿಂದ ಹೊರಬರಲು ಸಾಧ್ಯ’ ಎಂದು ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

...

ಉದ್ಯೋಗ ಖಾತರಿಯಲ್ಲಿ ನೆರವು

ಉದ್ಯೋಗ ಖಾತರಿ ಯೋಜನೆಯಲ್ಲಿ ಅಡಿಕೆ ಹೊರತುಪಡಿಸಿ, ನೇರಳೆ, ಡ್ರ್ಯಾಗನ್, ಗೋಡಂಬಿ ಮೊದಲಾದ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಸಾಂಪ್ರದಾಯಿಕವಾದ ತೆಂಗು, ಅಡಿಕೆ ಬದಲು ಕಡಿಮೆ ನೀರು ಬಯಸುವ ನೇರಳೆಯಂತಹ ಬೆಳೆಗಳತ್ತ ರೈತರು ಗಮನ ಹರಿಸಬೇಕು.

–ಲೋಕೇಶ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

...

ತೋಟದ ಬದುವಿನಲ್ಲಿ ನೇರಳೆ

ನಮ್ಮ ತೋಟದ ಬದುವಿನಲ್ಲಿ ಆರು ವರ್ಷ ಪ್ರಾಯದ 60 ನೇರಳೆ ಗಿಡಗಳಿವೆ. ಸ್ಥಳೀಯ ವ್ಯಾಪಾರಿಗಳು ತೋಟಕ್ಕೇ ಬಂದು ಕೆ.ಜಿಗೆ ₹ 100ರಿಂದ ₹ 120ವರೆಗೆ ಕೊಟ್ಟು ಹಣ್ಣನ್ನು ಖರೀದಿಸುತ್ತಾರೆ. ಹಣ್ಣಿಗೆ ಇರುವೆ, ಹಕ್ಕಿಗಳ ಕಾಟ ಹೆಚ್ಚು. ನೇರಳೆ ಹಣ್ಣನ್ನು ಮಾವು, ಸಪೋಟ, ಬಾಳೆ ಹಣ್ಣಿನಂತೆ ಮೂರ್ನಾಲ್ಕು ದಿನ ಇಡುವಂತಿಲ್ಲ. ಹೀಗಾಗಿ ವರ್ತಕರೊಂದಿಗೆ ಹೊಂದಾಣಿಕೆ ಅನಿವಾರ್ಯ.

– ಎ.ಎಂ. ಅಮೃತೇಶ್ವರಸ್ವಾಮಿ, ಸೋಮೇರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT