ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗೋಸೇವೆಯಲ್ಲಿ ಸಾರ್ಥಕತೆ ಕಂಡ ಕಬೀರಾನಂದಶ್ರೀ

ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ
Last Updated 30 ನವೆಂಬರ್ 2021, 6:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಗೋವುಗಳ ಸೇವೆಗಾಗಿ ಗೋಶಾಲೆಯನ್ನು ತೆರೆದ ಕಬೀರಾನಂದ ಸ್ವಾಮೀಜಿ ಉಚಿತವಾಗಿ ಹಾಲು ಹಂಚಿ ಸಾವಿರಾರು ಮಕ್ಕಳ ಜೀವನಕ್ಕೆ ನೆರವಾಗಿದ್ದರು ಎಂದು ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕಬೀರಾನಂದಾಶ್ರಮದಲ್ಲಿ ಭಾನುವಾರ ರಾತ್ರಿ ನಡೆದ ಕಬೀರಾನಂದ ಸ್ವಾಮೀಜಿ ಅವರ 64ನೇ ಹಾಗೂ ಕಬೀರೇಶ್ವರ ಸ್ವಾಮೀಜಿ ಅವರ 54ನೇ ಪುಣ್ಯಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕಬೀರಾನಂದ ಸ್ವಾಮೀಜಿ ಅವರು ಹುಬ್ಬಳಿಯ ಸಿದ್ಧಾರೂಢ ಮಠದಿಂದ ಚಿತ್ರದುರ್ಗಕ್ಕೆ ಬಂದರು. ಗೋವುಗಳ ಸೇವೆಗೆ ಮೊದಲು ಗೋಶಾಲೆ ತೆರೆದರು. ಗೋಸೇವೆ ಮಾಡಿದರೆ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಸ್ವಾಮೀಜಿ ನಿದರ್ಶನ. ಗೋವುಗಳ ಹಾಲನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದರು’ ಎಂದು ಹೇಳಿದರು.

‘ಇಬ್ಬರೂ ಹಿರಿಯ ಸ್ವಾಮೀಜಿಗಳು ಅಲ್ಪಾಯಿಷಿಗಳಾಗಿದ್ದರು. ಆದರೆ, ತಮ್ಮ ಜೀವಿತಾವಧಿಯಲ್ಲಿಯೇ ಉತ್ತಮವಾದ ಕಾರ್ಯ ಮಾಡಿದರು. ಆ ಮೂಲಕ ಭಕ್ತರ ಮನದಲ್ಲಿ ಮನೆ ಮಾಡಿದರು. ತುಂಬ ಸಣ್ಣದಾಗಿದ್ದ ಈ ಆಶ್ರಮವನ್ನು ಸಾಧ್ಯವಾದಷ್ಟು ಅಭಿವೃದ್ಧಿಪಡಿಸಿದರು’ ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ‘ಕಬೀರಾನಂದ ಸ್ವಾಮೀಜಿ 1929ರಲ್ಲಿ ಚಿತ್ರದುರ್ಗಕ್ಕೆ ಬಂದರು. ದೇಹತ್ಯಾಗ ಮಾಡುವ ಹೊತ್ತಿಗೆ ಉತ್ತಮ ಕಾರ್ಯ ಮಾಡಿ ಭಕ್ತರ ಮನದಲ್ಲಿ ನೆಲೆಸಿದರು. ಆನಂತರ ಬಂದ ಕಬೀರೇಶ್ವರ ಸ್ವಾಮೀಜಿ ಅವರೂ ಆಶ್ರಮದ ಪ್ರಗತಿಗೆ ಶ್ರಮಿಸಿದರು. ಶಿವಲಿಂಗಾನಂದ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಇನ್ನಷ್ಟು ಪ್ರಗತಿ ಸಾಧಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ ಹಲವು ಧರ್ಮ, ದಾರ್ಶನಿಕರು ಹಾಗೂ ಪಂಥಗಳಿವೆ. ಹಲವು ಧಾರ್ಮಿಕ ಗುರುಗಳು ಹಾದು ಹೋಗಿದ್ದಾರೆ. ಕಲುಷಿತವಾದ ಮಾನವನ ಮನಸ್ಸನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಕಬೀರಾನಂದ ಹಾಗೂ ಕಬೀರೇಶ್ವರರು ಸಹ ಸೇರಿದ್ದಾರೆ. ತಮ್ಮ ಸುತ್ತಲಿನ ಕತ್ತಲನ್ನು ಹೊಡೆದೋಡಿಸುವ ಕಾರ್ಯವನ್ನು ಮಾಡಿದ್ದಾರೆ’ ಎಂದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಎಸ್. ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ಧರ್ಮದರ್ಶಿ ಷಣ್ಮುಖಪ್ಪ, ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾದ ಗಾಯತ್ರಿ ಶಿವರಾಂ, ಮಾತೃಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ನಗರಸಭೆ ಸದಸ್ಯರಾದ ವೆಂಕಟೇಶ್, ಯಶೋದ ರಾಜಶೇಖರಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT