ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ಕ್ಷೇತ್ರ ಸ್ಥಿತಿ–ಗತಿ| ಬಿಜೆಪಿಗೆ ಬಿಸಿತುಪ್ಪವಾದ ಬಣ ರಾಜಕೀಯ

ಜೆಡಿಎಸ್‌ ಅಭ್ಯರ್ಥಿ ಘೋಷಣೆ, ಕಾಂಗ್ರೆಸ್‌ ಟಿಕೆಟ್‌ಗೆ ನಾಲ್ವರ ಅರ್ಜಿ
Last Updated 14 ಜನವರಿ 2023, 7:47 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದ ಹೊಸದುರ್ಗ ಕ್ಷೇತ್ರದಲ್ಲಿ ಬಣ ರಾಜಕೀಯ ಬಿಸಿತುಪ್ಪವಾಗಿದೆ. ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರವನ್ನು ಟಿಕೆಟ್‌ ಆಕಾಂಕ್ಷಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಯಾಗಿ ಎಂ.ತಿಪ್ಪೇಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಕಾಂಗ್ರೆಸ್‌ ಟಿಕೆಟ್‌ ಸಿಗುವ ಭರವಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪೈಪೋಟಿ ನೀಡುವ ಭರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಕ್ಷೇತ್ರ ಪರ್ಯಟನೆಯಲ್ಲಿ ತೊಡಗಿದ್ದಾರೆ.

ವಿ.ವಿ. ಸಾಗರದ ಹಿನ್ನೀರಿನಲ್ಲಿ ಚಾಚಿಕೊಂಡಿರುವ ಈ ಕ್ಷೇತ್ರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಚಿಕ್ಕಮಗಳೂರು, ಹಾಸನ ಹಾಗೂ ತುಮಕೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಈ ಭಾಗದಲ್ಲಿ ಹಲವು ಪಕ್ಷಗಳ ಪ್ರಭಾವ ಗಾಢವಾಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಕಾಣಸಿಗುತ್ತಾರೆ. ಮುಂಬರುವ ಚುನಾವಣೆಯಲ್ಲಿ ಮತದಾರರ ಒಲವು ಹೇಗಿದೆ ಎಂಬ ಲೆಕ್ಕಾಚಾರದಲ್ಲಿ ಮೂರು ಪಕ್ಷಗಳ ಮುಖಂಡರು ತಲ್ಲೀನರಾಗಿದ್ದಾರೆ.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಎರಡನೇ ಬಾರಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರು, 2018ರಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿದು ವಿಜೇತರಾಗಿದ್ದರು. ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕರೆಸಿ ಕಚೇರಿ ಉದ್ಘಾಟಿಸಿ ಮತದಾರರ ಮನೆಬಾಗಿಲು ತಟ್ಟುತ್ತಿದ್ದಾರೆ. ಉದ್ಯಮಿ ಹೆಬ್ಬಳ್ಳಿ ಓಂಕಾರಪ್ಪ ಬಿಜೆಪಿ ಟಿಕೆಟ್‌ ಕೇಳುತ್ತಿದ್ದಾರೆ.

ಕಾಂಗ್ರೆಸ್‌ನ ಬಿ.ಜಿ. ಗೋವಿಂದಪ್ಪ 1999, 2004 ಹಾಗೂ 2013ರಲ್ಲಿ ವಿಜೇತರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಪಾಂಡುರಂಗ ಗರಗ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರ ಸುತ್ತುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ಗ್ರಾಮಕ್ಕೆ ಭೇಟಿ ನೀಡಿ ದೇಗುಲ, ಯುವಕ ಸಂಘ, ಕ್ರೀಡಾ ಸಂಘಗಳಿಗೆ ಉದಾರ ನೆರವು ನೀಡುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಕೇಳುತ್ತಿರುವ ಇನ್ನೊಬ್ಬ ಆಕಾಂಕ್ಷಿ ಟಿ.ಮಂಜುನಾಥ್‌ ಪಕ್ಷೇತರರಾಗಿಯೂ ಚುನಾವಣಾ ಅಖಾಡಕ್ಕೆ ಧುಮುಖಲು ಸಜ್ಜಾಗಿದ್ದಾರೆ.

ರಸ್ತೆ ಕಾಮಗಾರಿಯ ವಿಚಾರವಾಗಿ ಹೊಸದುರ್ಗ ಪಟ್ಟಣದಲ್ಲಿ ನಡೆದ ಗಲಾಟೆ ಬಿಜೆಪಿಯ ಆಂತರಿಕ ಬಂಡಾಯ ಹೊರಬರಲು ಎಡೆಮಾಡಿಕೊಟ್ಟಿತು. ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಎಸ್‌.ಲಿಂಗಮೂರ್ತಿ ಬಣಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿತು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಮಧ್ಯಪ್ರವೇಶಿಸಿ ಸಂಧಾನ ಮಾಡಿದರೂ ಪರಿಸ್ಥಿತಿ ಸರಿಹೋದಂತೆ ಕಾಣುತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ ನವೀನ್‌ ಸ್ಪರ್ಧಿಸಲಿದ್ದಾರೆ ಎಂಬ ವದಂತಿಯೂ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಈ ವದಂತಿಯನ್ನು ನವೀನ್‌ ಸಂಪೂರ್ಣವಾಗಿಲ್ಲ ತಳ್ಳಿಹಾಕಿಲ್ಲ.

ಕ್ಷೇತ್ರದ ಅಭಿವೃದ್ಧಿ, ವಿ.ವಿ. ಸಾಗರ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೇತುವೆ, ಭದ್ರಾ ಮೇಲ್ದಂಡೆ ಯೋಜನೆ ಹೀಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಶಾಸಕ ಗೂಳಿಹಟ್ಟಿ ಶೇಖರ್‌ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿರುವ ಮೂಲ ಸೌಲಭ್ಯಗಳ ಕೊರತೆ ಹಾಗೂ ಕ್ಷೇತ್ರದ ಇತರೆ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಎದುರಿಸಲು ಇತರ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಮತದಾರರಿಗೆ ‘ಕೊಡುಗೆ’ಗಳನ್ನು ನೀಡುವ ಮೂಲಕ ಪಕ್ಷೇತರರು ಮತ ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

***

ಕೋವಿಡ್‌ ಸಂದರ್ಭ ಜನರಿಗೆ ಸಹಾಯ ಮಾಡಿದ್ದೇನೆ. ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ಜನರು ಮತ್ತೆ ಬೆಂಬಲಿಸುವ ವಿಶ್ವಾಸದಲ್ಲಿ ಕಣಕ್ಕೆ ಇಳಿಯಲಿದ್ದೇನೆ.

ಗೂಳಿಹಟ್ಟಿ ಡಿ.ಶೇಖರ್‌, ಶಾಸಕ

***

2013–18ರವರೆಗೆ ಕಾಂಗ್ರೆಸ್‌ ಪಕ್ಷ ನೀಡಿದ ಕೊಡುಗೆಗಳ ಆಧಾರದ ಮೇರೆಗೆ ಮತಯಾಚನೆ ಮಾಡುತ್ತೇವೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ.

ಬಿ.ಜಿ. ಗೋವಿಂದಪ್ಪ, ಮಾಜಿ ಶಾಸಕ

***

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ವೃದ್ಧಾಪ್ಯ ವೇತನ ಹೆಚ್ಚಿಸಿದೆ. ಈ ಫಲಾನುಭವಿಗಳು ಕೈಹಿಡಿಯವ ವಿಶ್ವಾಸವಿದೆ.

ಎಂ.ತಿಪ್ಪೇಸ್ವಾಮಿ, ಜಡಿಎಸ್‌ ಅಭ್ಯರ್ಥಿ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT