ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದರ ಕುಸಿತ: ಬೆಳೆಗಾರರು ಕಂಗಾಲು

ಕೊಯ್ಲು ಮಾಡಿದ ಕೂಲಿಯೂ ಸಿಗದ ಸ್ಥಿತಿ
Last Updated 21 ಮೇ 2022, 19:45 IST
ಅಕ್ಷರ ಗಾತ್ರ

ಹಿರಿಯೂರು(ಚಿತ್ರದುರ್ಗ): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ. ಒಂದು ಎಕರೆ ಜಮೀನಿನಲ್ಲಿ ಸುಮಾರು ₹ 60 ಸಾವಿರದಷ್ಟು ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಕೆ.ಜಿ.ಗೆ ₹ 2ರಷ್ಟು ಬೆಲೆಯೂ ದೊರೆಯದ ಸ್ಥಿತಿ ಎದುರಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

‘ಬೇಸಿಗೆಯಲ್ಲಿ ಕೊಳವೆಬಾವಿ ನೀರು ಬಳಸಿ ಈರುಳ್ಳಿ ನಾಟಿ ಮಾಡಿದ್ದೆ. ಮುಂಗಾರು ಮಳೆ ಆರಂಭಕ್ಕೂ ಮೊದಲೇ ಬೆಳೆ ಕೊಯ್ಲಿಗೆ ಬರುವ ಕಾರಣ ಉತ್ತಮ ದರ ಸಿಗುತ್ತದೆ ಎಂದು ಕನಸು ಕಂಡಿದ್ದೆ. ಮಳೆಯ ಕಾರಣಕ್ಕೆ 45 ಚೀಲ ಈರುಳ್ಳಿ ಕೊಳೆತು ಹೋಗಿದೆ. ಉಳಿದ 55 ಚೀಲ ಈರುಳ್ಳಿಯನ್ನು ಹೊಲದಲ್ಲಿಟ್ಟು ಕಾಯುತ್ತಿದ್ದೇನೆ. 60ರಿಂದ 65 ಕೆ.ಜಿ ಈರುಳ್ಳಿ ತುಂಬಿರುವ ಚೀಲವೊಂದಕ್ಕೆ ವರ್ತಕರು ₹ 100ರಿಂದ ₹ 150 ಕೇಳುತ್ತಿದ್ದಾರೆ’ ಎಂದು ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದ ರೈತ ತಿಮ್ಮಯ್ಯ ಅಳಲು ತೋಡಿಕೊಂಡರು.

‘₹ 2 ಸಾವಿರಕ್ಕೆ ಒಂದು ಕೆ.ಜಿ.ಯಂತೆ ಈರುಳ್ಳಿ ಬೀಜ ಖರೀದಿಸಿ ತಂದಿದ್ದೆ. ಬಿತ್ತನೆ ಬೀಜ, ಗೊಬ್ಬರ, ಕಳೆ, ಔಷಧ ಸಿಂಪಡಣೆ ಎಲ್ಲಾ ಸೇರಿ ಎಕರೆಗೆ ₹ 60 ಸಾವಿರ ಖರ್ಚಾಗಿತ್ತು. ಬೆಳೆ ಉತ್ತಮವಾಗಿ ಬಂದಿತ್ತು. ಈಗ ಕೆ.ಜಿಗೆ ₹ 1, ₹ 2ರಂತೆ ಕೇಳುತ್ತಿದ್ದಾರೆ’ ಎಂದು ಅವರು ಬೇಸರದಿಂದ ಹೇಳಿದರು.

‘ಈರುಳ್ಳಿ ತುಂಬುವ ಚೀಲವೊಂದಕ್ಕೆ ₹ 15 ಇದೆ. ಒಂದು ಚೀಲ ಈರುಳ್ಳಿ ಕೊಯ್ಯಲು ₹ 35, ಈರುಳ್ಳಿಯನ್ನು ಆರಿಸಲು (ಗ್ರೇಡಿಂಗ್) ಚೀಲವೊಂದಕ್ಕೆ ₹ 35 ಖರ್ಚಾಗುತ್ತದೆ. ಅದನ್ನು ಚೀಲಕ್ಕೆ ತುಂಬಲು, ಗ್ರೇಡಿಂಗ್ ಮಾಡಲು ಬರುವ ಗಂಡಾಳಿಗೆ ದಿನಕ್ಕೆ ₹ 500, ಹೆಣ್ಣಾಳಿಗೆ ₹ 250 ಕೂಲಿ ಕೊಡಬೇಕು. ₹ 100ರಿಂದ ₹ 150ಕ್ಕೆ ಒಂದು ಚೀಲ ಈರುಳ್ಳಿ ಮಾರಿದರೆ ಕೊಯ್ಲಿನ ನಂತರದ ಖರ್ಚೂ ಬರುವುದಿಲ್ಲ’ ಎಂದು ದಿಂಡಾವರ ಗ್ರಾಮದ ಲೋಕೇಶ್, ಕರೇಗೌಡ, ಕರಿಬಾಲಪ್ಪ ಸಂಕಟ ಹೇಳಿಕೊಂಡರು.

‘ಮಳೆಯ ಅಭಾವ, ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ಸಿಗುವ ನೀರು, ದುಬಾರಿ ಬಿತ್ತನೆ ಬೀಜ, ಗೊಬ್ಬರ, ಕೂಲಿ, ರೋಗ... ಇಂತಹ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆ ತೆಗೆದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಒಂದು ಕೆ.ಜಿ ಈರುಳ್ಳಿಗೆ ಕನಿಷ್ಠ ₹ 15 ಬೆಲೆ ಸಿಕ್ಕರೂ ಬಂಡವಾಳ ಮರಳಿ ಬರುತ್ತದೆ. ಒಂದೂವರೆ, ಎರಡು ರೂಪಾಯಿಗೆ ಕೇಳಿದರೆ ಏನು ಮಾಡುವುದು’ ಎಂದು ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದ ಗ್ರಾಮದ ರಂಗರಾಜು, ಕೃಷ್ಣಮೂರ್ತಿ ಕಣ್ಣೀರು ಹಾಕಿದರು.

* ಈರುಳ್ಳಿಗೆ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬೆಂಬಲ ಬೆಲೆ <br/>ಘೋಷಿಸಬೇಕು.

–ತಿಮ್ಮಯ್ಯ, ಈರುಳ್ಳಿ ಬೆಳೆಗಾರ, ದಿಂಡಾವರ ಗ್ರಾಮ

* ಮೇ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ 400 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ನೀರಾವರಿಯಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ನಷ್ಟವಾಗಿಲ್ಲ.

–ಸವಿತಾ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT