ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣುಗಳ ರಾಜನಿಗೆ ಕಡಿಮೆಯಾಗದ ಬೇಡಿಕೆ

ಹಿರಿಯೂರು, ಹೊಸದುರ್ಗ, ಮೊಳಕಾಲ್ಮುರಿನಲ್ಲಿ ಹಿಂದಿಗಿಂತಲೂ ಶೇ 50ರಷ್ಟು ಮಾವಿನ ಹಣ್ಣಿನ ವ್ಯಾಪಾರ ಕುಸಿತ
Last Updated 20 ಜೂನ್ 2021, 5:22 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಬೇಡಿಕೆ ಈಗಲೂ ಕಡಿಮೆಯಾಗಿಲ್ಲ. ಆದರೆ, ಕೋವಿಡ್‌ಗೂ ಮುಂಚೆ ಇದ್ದಂತ ವ್ಯಾಪಾರ ಈಗಿಲ್ಲ. ನಿತ್ಯವೂ ಏರಿಳಿತವಾಗುತ್ತಿದೆ. ಈ ನಡುವೆಯೂ ಅನೇಕ ವ್ಯಾಪಾರಿಗಳು ಎಂದಿನಂತೆ ವ್ಯಾಪಾರದಲ್ಲಿ ತಲ್ಲೀನರಾಗಿದ್ದಾರೆ. ಗ್ರಾಹಕರನ್ನು ಸೆಳೆಯಲು ಕೈಬೀಸಿ ಕರೆಯುತ್ತಿದ್ದಾರೆ.

ಏಪ್ರಿಲ್‌ ಆರಂಭದಲ್ಲೇ ಈ ಹಣ್ಣುಗಳ ಸರದಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅಂದಿನಿಂದ ಈವರೆಗೂ ಗ್ರಾಹಕರ ನಾಲಿಗೆ ಮೇಲೆ ತನ್ನ ಜಾಗ ಬಿಟ್ಟುಕೊಟ್ಟಿಲ್ಲ. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಈ ಹಣ್ಣಿಗೆ ಬೇಡಿಕೆ ಹೆಚ್ಚು. ಆದರೆ, ಮುಂಗಾರು ಮಳೆ ಆರಂಭವಾಗಿ ಮಾವಿನ ಹಣ್ಣಿನ ಬೇಡಿಕೆಯ ಕಾಲ ಮುಗಿಯುತ್ತ ಬಂದಿದ್ದರೂ ಚಿತ್ರದುರ್ಗ, ಚಳ್ಳಕೆರೆ ನಗರದಲ್ಲಿ ಹಾಗೂ ಹೊಳಲ್ಕೆರೆ ಪಟ್ಟಣದಲ್ಲಿ ಮಾವಿನ ಹಣ್ಣುಗಳ ಸಂಭ್ರಮ ಮಾತ್ರ ಇನ್ನೂ ನಿಂತಂತೆ ಕಾಣುತ್ತಿಲ್ಲ.

ಆರಂಭದಲ್ಲಿ ಗುಣಮಟ್ಟದ ಬಾದಾಮಿ, ಮಲ್ಲಿಕಾ, ರಸಪುರಿ ತಲಾ ಕೆ.ಜಿಗೆ ₹ 80ರಿಂದ ₹ 100ಕ್ಕೆ ಮಾರಾಟವಾಯಿತು. ಈ ವೇಳೆ ಕೆಲವರು ಖರೀದಿಸಲು ಹಿಂದೇಟು ಹಾಕಿದರು. ಕ್ರಮೇಣ ₹ 50ರಿಂದ ₹ 60ಕ್ಕೆ ಬೆಲೆ ಕುಸಿತ ಕಂಡ ನಂತರ ಖರೀದಿಸಲು ಅನೇಕರು ಆಸಕ್ತಿ ತೋರುತ್ತಿದ್ದಾರೆ.

ಜಿಲ್ಲೆಯ ಕೆಲವೆಡೆ ಬೇಡಿಕೆ ಹೆಚ್ಚಿದ್ದರೆ ಹಿರಿಯೂರು, ಹೊಸದುರ್ಗ, ಮೊಳಕಾಲ್ಮುರಿನಲ್ಲಿ ಹಿಂದಿಗಿಂತಲೂ ಶೇ 50ರಷ್ಟು ವ್ಯಾಪಾರ ಕುಸಿದಿದೆ. ಕೋವಿಡ್ ಎರಡನೇ ಅಲೆ ಕಾರಣಕ್ಕೆ ಅನೇಕರು ಖರೀದಿಸಲು ಮುಂದಾಗುತ್ತಿಲ್ಲ. ಮನೆ ಬಾಗಿಲಿಗೆ ವ್ಯಾಪಾರಸ್ಥರು ತಳ್ಳುವ ಗಾಡಿ, ವಾಹನಗಳಲ್ಲಿ ಹಣ್ಣು ಕೊಂಡೊಯ್ದರು ಗ್ರಾಹಕರಿಂದ ಉತ್ತಮ ಸ್ಪಂದನ ದೊರೆಯುತ್ತಿಲ್ಲ. ಹೀಗಾಗಿ ಕೆಲವೆಡೆ ವ್ಯಾಪಾರಸ್ಥರಿಗೆ ನಷ್ಟವೂ ಉಂಟಾಗುತ್ತಿದೆ.

ಮದುವೆ, ಗೃಹ ಪ್ರವೇಶ, ಇತರ ಶುಭ ಕಾರ್ಯಗಳು ಕೊರೊನಾ ಬರುವುದಕ್ಕೂ ಮುಂಚೆಯಂತೆ ನಡೆಯುತ್ತಿಲ್ಲ. ಹೆಚ್ಚು ಜನ ಸೇರುವಂತಿಲ್ಲ. ಈ ಕಾರಣದಿಂದಾಗಿ ಮಾವಿನ ಹಣ್ಣಿನ ಬೇಡಿಕೆಯ ಪ್ರಮಾಣದಲ್ಲಿ ಕುಸಿತವೂ ಕಂಡಿದೆ. ಇದರಿಂದ ನಿತ್ಯ ಒಂದೇ ರೀತಿಯಲ್ಲಿ ವ್ಯಾಪಾರ ಚಟುವಟಿಕೆ ನಡೆಯುತ್ತಿಲ್ಲ.

ಮಾವಿನ ಹಣ್ಣುಗಳ ವ್ಯಾಪಾರ ಮೇ ಕೊನೆಯ ಹಂತದಲ್ಲಿ ಕೆಲ ನಗರ ಪ್ರದೇಶಗಳಲ್ಲಿ ಕಡಿಮೆಯಾಗುವುದು ಸಾಮಾನ್ಯ. ಆದರೆ, ಕೋಟೆ ನಗರಿಯಲ್ಲಿ ಜೂನ್‌ ತಿಂಗಳವರೆಗೂ ಇದಕ್ಕೆ ಬೇಡಿಕೆ ಇರುತ್ತದೆ. ನಗರದ ಪ್ರಮುಖ ರಸ್ತೆ ಮಾರ್ಗಗಳು ಸೇರಿ ವಿವಿಧೆಡೆ ನಡೆಯುತ್ತಿರುವ ಚಿಲ್ಲರೆ ವ್ಯಾಪಾರಿಗಳ ಬಳಿಯೂ ಮಾವಿನಹಣ್ಣು ಇನ್ನೂ ಮೊದಲ ಸ್ಥಾನದಲ್ಲೇ ಇದೆ.

‘ಕೆಲ ದಿನಗಳ ಹಿಂದೆ ಗುಣಮಟ್ಟದ ಮಾವಿನ ಹಣ್ಣಿನ ದರ ಕೆ.ಜಿಗೆ ₹ 100 ಇತ್ತು. ಆ ವೇಳೆ ನಗರದಲ್ಲಿ ಹೇಳಿಕೊಳ್ಳುವಂತ ವ್ಯಾಪಾರ ಇರಲಿಲ್ಲ. ಇದರಿಂದಾಗಿ ನಮಗೆ ನಷ್ಟ ಉಂಟಾಗಿತ್ತು. ಈಗ ಚೇತರಿಕೆ ಕಂಡಿದೆ’ ಎನ್ನುತ್ತಾರೆ ಬೀದಿಬದಿ ವ್ಯಾಪಾರಿಗಳಾದ ರೇಣುಕಮ್ಮ, ಸುಶೀಲಮ್ಮ.

‘ಜಿಲ್ಲೆಯ ಹೊಳಲ್ಕೆರೆ ಸೇರಿ ವಿವಿಧೆಡೆ ಬೆಳೆಯುವಂಥ ಮಾವಿನಹಣ್ಣನ್ನು ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತೇವೆ. ಬೇರೆ ಕಡೆಗಳಿಂದ ನಾವು ಹಣ್ಣುಗಳನ್ನು ಖರೀದಿಸುವುದಿಲ್ಲ. ಮಂಡಿ ವ್ಯಾಪಾರಿಗಳು ಹೆಚ್ಚು ಮಾರಾಟ ಮಾಡುವ ಕಾರಣ ಬೆಂಗಳೂರಿನ ಕೆ.ಬಿ. ಕ್ರಾಸ್, ರಾಮನಗರ, ಹುಳಿಯಾರು ಭಾಗದಿಂದ ಮಾವಿನ ಹಣ್ಣನ್ನು ಆವಕ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿ ರಂಗಪ್ಪ.

‘ವಿವಿಧ ತಳಿಗಳ 50 ಕೆ.ಜಿ ಮಾವಿನ ಹಣ್ಣು ಎರಡು–ಮೂರು ದಿನಗಳಿಗೆ ಖಾಲಿಯಾಗುತ್ತಿತ್ತು. ಇದಕ್ಕೂ ಮುಂಚೆ ವ್ಯಾಪಾರ ಚೆನ್ನಾಗಿತ್ತು. ಈಗ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ’ ಎನ್ನುತ್ತಾರೆ ಹಲವು ವ್ಯಾಪಾರಿಗಳು.

‘ಆರಂಭದಲ್ಲಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಹೆಚ್ಚಿತ್ತು. ಆಗ ಹಣ್ಣು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬೆಲೆ ಕಡಿಮೆಯಾಗಿದ್ದು, ತಲಾ 2 ಡಜನ್‌ ಮಲ್ಲಿಕಾ ಹಾಗೂ ರಸಪುರಿ ಮಾವಿನ ಹಣ್ಣು ಖರೀದಿಸಿದ್ದೇನೆ’ ಎಂದು ಗ್ರಾಹಕಿ ಸುಷ್ಮಾ ಸಂತಸದಿಂದ ತಿಳಿಸಿದರು.

‘ಹಿಂದಿನ ವರ್ಷ ಲಾಕ್‌ಡೌನ್‌ನಿಂದಾಗಿ ರೈತರು ಮಾರುಕಟ್ಟೆ ಸಮಸ್ಯೆ ಎದುರಿಸಿದ್ದರು. ಆದರೆ, ಪ್ರಸಕ್ತ ವರ್ಷ ಲಾಕ್‌ಡೌನ್‌ ಜಾರಿ ಇದ್ದರೂ ಅಗತ್ಯ ವಸ್ತುಗಳ ಮಾರಾಟ, ಸಾಗಾಣೆ, ಮಾರುಕಟ್ಟೆಗೆ ಅವಕಾಶ ಇದ್ದಿದ್ದರಿಂದಾಗಿ ರೈತರಿಗೆ ಸಮಸ್ಯೆ ಉಂಟಾಗಲಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದ್ದಾರೆ.

‘ಮಾರಾಟಕ್ಕಾಗಿ ಆವಕವಾಗಿ ಬರುತ್ತಿರುವ ಮಾವಿನ ಹಣ್ಣು ನಿತ್ಯವೂ ಸಗಟು ಮಾರಾಟಗಾರರು, ಚಿಲ್ಲರೆ ವರ್ತಕರಿಗೆ ಸರಬರಾಜು ಆಗುತ್ತಿದೆ. ಜಿಲ್ಲೆಯ ಹಣ್ಣುಗಳು ಬೆಂಗಳೂರು ಮಾರುಕಟ್ಟೆಗೂ ಹೋಗಿದೆ. ಕೊರೊನಾ ನಡುವೆಯೂ ಮಾವಿನ ಹಣ್ಣಿಗೆ ಬೇಡಿಕೆ ಕಡಿಮೆಯಾಗಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT