ಗುರುವಾರ , ಸೆಪ್ಟೆಂಬರ್ 23, 2021
22 °C
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚನೆ

ಚಿತ್ರದುರ್ಗ: ಕೆರೆ ಪುನಶ್ಚೇತನಕ್ಕೆ ಐದು ತಿಂಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಲಸಂರಕ್ಷಣೆಯಲ್ಲಿ ಕೆರೆಗಳ ಪಾತ್ರ ಹಿರಿದಾಗಿದ್ದು, ಪುನಶ್ಚೇತನ ಮಾಡುವುದು ಪುಣ್ಯದ ಕೆಲಸ. ಡಿಸೆಂಬರ್‌ ಅಂತ್ಯದ ಹೊತ್ತಿಗೆ ಜಿಲ್ಲೆಯ ಎಲ್ಲ ಕೆರೆಗಳು ಅಭಿವೃದ್ಧಿ ಹೊಂದಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 462 ಕೆರೆಗಳಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಕೆರೆಗಳ ಸಂಖ್ಯೆ ಕಡಿಮೆ ಇದೆ. ಮುಂದಿನ ಐದು ತಿಂಗಳಲ್ಲಿ ಇವುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಕೆರೆ ಅಭಿವೃದ್ಧಿಪಡಿಸುವುದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಅನುಕೂಲವಾಗುತ್ತದೆ. ಅಂತರ್ಜಲಮಟ್ಟ ಹೆಚ್ಚಿ, ಮಳೆ ನೀರು ಸಮುದ್ರ ಸೇರುವುದು ತಪ್ಪಲಿದೆ ಎಂದು ಹೇಳಿದರು.

‘ಕೆರೆ, ಕಲ್ಯಾಣಿ, ತೆರೆದ ಬಾವಿ, ಕೃಷಿ ಹೊಂಡಗಳನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ. ಕೃಷಿ ಹೊಂಡ, ಬದು ನಿರ್ಮಾಣ ಮಾಡುವ ಮೂಲಕ ಜಲಸಂರಕ್ಷಣೆ ಮಾಡಬಹುದಾಗಿದೆ. ನರೇಗಾ ಯೋಜನೆಯ ಮೂಲಕವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕೂಲಿ ಸಿಗುತ್ತದೆ. ನರೇಗಾ ಯೋಜನೆಯಡಿ ಅತಿ ಹೆಚ್ಚು ಕೂಲಿಯನ್ನು ನಿಗದಿ ಮಾಡಲಾಗಿದೆ’ ಎಂದರು.

‘ನರೇಗಾ ಯೋಜನೆಯ ಕೂಲಿ ಹಣ ಪಡೆಯಲು ಆರು ತಿಂಗಳು ಕಾಯುವ ಸ್ಥಿತಿ ಹಿಂದೆ ಇತ್ತು. ಜಾಬ್‌ ಕಾರ್ಡ್‌ ಹೊಂದಿದವರ ಬ್ಯಾಂಕ್‌ ಖಾತೆಗೆ ವಾರದ ಒಳಗೆ ಕೂಲಿ ಹಣ ಸಂದಾಯವಾಗುತ್ತಿದೆ. ಉದ್ಯೋಗ ಕೇಳಿ ಬರುವ ಪ್ರತಿಯೊಬ್ಬರಿಗೂ ಜಾಬ್‌ ಕಾರ್ಡ್‌ ನೀಡಬೇಕು’ ಎಂದು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

‘ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಗೆ ₹ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಯೋಜನೆಯಲ್ಲಿ ಆಯ್ಕೆಯಾದ ಗ್ರಾಮಗಳ ಪ್ರತಿ ಮನೆಗೆ ನಳ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರವಾರು ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರಿಗೆ ತರಬೇತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಉಡುಪಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ, ಭೂವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಧನಂಜಯ್, ಸಂಪನ್ಮೂಲ ವ್ಯಕ್ತಿ ಪ್ರಮೋದ್ ಹೆಗಡೆ ಇದ್ದರು.

122 ಗ್ರಾ.ಪಂ.ಗೆ ಮಹಿಳಾ ಅಧ್ಯಕ್ಷರು
ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ 122 ಗ್ರಾಮ ಪಂಚಾಯಿತಿಗಳಿಗೆ ಮಹಿಳೆಯರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ಮಹತ್ವಪೂರ್ಣ ಬೆಳವಣಿಗೆ ಎಂದು ಸಭೆಯಲ್ಲಿ ಮೆಚ್ಚಗೆ ವ್ಯಕ್ತವಾಯಿತು.

‘ಇದೊಂದು ಖುಷಿಯ ಸಂಗತಿ. ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವ ಮಹಿಳೆ ಗ್ರಾಮ ಪಂಚಾಯಿತಿಯನ್ನೂ ನಿಭಾಯಿಸಬಲ್ಲಳು. ಅರ್ಧಕ್ಕಿಂತ ಹೆಚ್ಚು ಪಂಚಾಯಿತಿಗಳ ಚುಕ್ಕಾಣಿ ಮಹಿಳೆಯರು ಹಿಡಿದಿರುವುದು ಪ್ರಗತಿಯ ಸಂಕೇತ. ಕೆಲಸ ಮಾಡಲು ಇದೊಂದು ಸದಾವಕಾಶ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟರು.

ಸಚಿವರ ಭಾಷಣ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ನಿಯೋಗವೊಂದು ವೇದಿಕೆಗೆ ತೆರಳಿತು. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಬೇಡಿಕೆಯ ಪಟ್ಟಿಯೊಂದನ್ನು ಸಚಿವರ ಕೈಗೆ ಇಟ್ಟಿತು. ಈ ನಿಯೋಗದಲ್ಲಿ ಒಬ್ಬ ಮಹಿಳೆಯೂ ಕಾಣಲಿಲ್ಲ.

ಚಂದ್ರವಳ್ಳಿ ಮೊದಲ ಕೆರೆ: ಕಳವೆ
ಚಿತ್ರದುರ್ಗದ ಚಂದ್ರವಳ್ಳಿ ಕೆರೆಗೆ ಕರ್ನಾಟಕದ ಮೊದಲ ಕೆರೆ ಎಂಬ ಹೆಗ್ಗಳಿಕೆ ಇದೆ. ನಾಲ್ಕನೇ ಶತಮಾನದಲ್ಲಿ ಚಂದ್ರವಳ್ಳಿ ಕೆರೆ ನಿರ್ಮಾಣವಾಗಿದೆ ಎಂದು ಪರಿಸರವಾದಿ ಶಿವಾನಂದ ಕಳವೆ ತಿಳಿಸಿದರು.

ಜಲಸಂರಕ್ಷಣೆಯ ಬಗ್ಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹಲವು ಕೆರೆಗಳು ವಿಶಾಲವಾಗಿವೆ. ಆದರೆ, ಇವುಗಳಲ್ಲಿ ನೀರಿಲ್ಲ. ನಿರ್ವಹಣೆ ಇಲ್ಲದೇ ಹಾಳಾಗಿವೆ. ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದೆ. ಇಂತಹ ಕೆರೆಗಳ ಪುನಃಶ್ಚೇತನಕ್ಕೆ ಗ್ರಾಮ ಪಂಚಾಯಿತಿ ಆಸಕ್ತಿ ತೋರಬೇಕು. ಹೂಳು ತೆಗೆಯಲು ಹಲವು ತಂತ್ರಜ್ಞಾನಗಳಿವೆ. ಇವುಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

***

ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರ ಇದ್ದಂತೆ. ಕೋವಿಡ್‌ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಗ್ರಾಮಗಳ ಅಭಿವೃದ್ಧಿಯತ್ತ ಸದಸ್ಯರು ಗಮನಹರಿಸಬೇಕು.
-ಪ್ರಿಯಾಂಕ ಮೇರಿ ಫ್ರಾನ್ಸಿಸ್‌
ಆಯುಕ್ತರು, ಪಂಚಾಯತ್‌ರಾಜ್‌ ಇಲಾಖೆ

***

ನರೇಗಾ ಯೋಜನೆಯಡಿ 3.14 ಲಕ್ಷ ಜಾಬ್‌ಕಾರ್ಡ್‌ಗಳನ್ನು ನೀಡಲಾಗಿದೆ. 15,347 ಬದು, 6,347 ಕೃಷಿ ಹೊಂಡ ಹಾಗೂ 5,829 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.
-ಡಾ.ಕೆ.ನಂದಿನಿದೇವಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು