ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಬಸ್ ಡಿಪೋ ಕಾಮಗಾರಿ ಸ್ಥಗಿತ?

Published 8 ಜೂನ್ 2023, 5:51 IST
Last Updated 8 ಜೂನ್ 2023, 5:51 IST
ಅಕ್ಷರ ಗಾತ್ರ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಶುರುವಾಗಿದ್ದ ಕೆಎಸ್ಆರ್‌ಟಿಸಿ ಬಸ್ ಡಿಪೋ ನಿರ್ಮಾಣ ಕಾಮಗಾರಿ ಕೆಲ ದಿನಗಳಿಂದ ಸ್ಥಗಿತಗೊಂಡಿರುವುದು ಆತಂಕಕ್ಕೀಡು ಮಾಡಿದೆ. ‘ಪ್ರತಿ ತಾಲ್ಲೂಕಿಗೆ ಒಂದು ಬಸ್ ಡಿಪೋ ನಿರ್ಮಿಸಬೇಕು’ ಎಂಬ ಉದ್ದೇಶದಡಿ ಇಲ್ಲಿ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ರಾಯಾಪುರ ರೇಷ್ಮೆ ಫಾರಂ ಬಳಿ 6 ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣ ಕಾಮಗಾರಿ ಶುರುವಾಗಿದೆ. ಇದಕ್ಕೆ ₹8 ಕೋಟಿ ಅನುದಾನ ನಿಗದಿಯಾಗಿದೆ. 

ಆದರೆ 15 ದಿನಗಳಿಂದ ಕಾಮಗಾರಿ ಸ್ಥಗಿತವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ‘ಡಿಪೋ ನಿರ್ಮಿಸಿದರೂ ಇಲಾಖೆಯು ಬಸ್‌ಗಳನ್ನು ಸಮರ್ಪಕವಾಗಿ ಒದಗಿಸುವುದಿಲ್ಲ. ಹೀಗಾಗಿ ಇಲ್ಲಿ ಡಿಪೋ ಅಗತ್ಯವಿಲ್ಲ’ ಎಂಬುದಾಗಿ ಜನಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ಕಾಮಗಾರಿ ಸ್ಥಗಿತ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 

‘ಕಾಮಗಾರಿ ನಿರಂತರವಾಗಿ ನಡೆದಿದ್ದಲ್ಲಿ, ಮುಂದಿನ ವರ್ಷ ಡಿಪೋ ಉದ್ಘಾಟಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಒಂದು ವೇಳೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಲ್ಲಿ, ತಾಲ್ಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ಇದೇ ಫೆಬ್ರುವರಿಯಲ್ಲಿ ಕಾಮಗಾರಿ ಆರಂಭವಾಗಿತ್ತು. ‘ಯು’ ಆಕಾರದಲ್ಲಿ ಕಾಪೌಂಡ್ ನಿರ್ಮಿಸಲಾಗುತ್ತಿದೆ. ಡಿಪೋ ಕಟ್ಟಡ ನಿರ್ಮಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ₹1.25 ಕೋಟಿ ವೆಚ್ಚ ಮಾಡಲಾಗಿದೆ. ಕಾಮಗಾರಿ ಸ್ಥಳ ನಿಗದಿ ಹಾಗೂ ನೀಲನಕ್ಷೆ ತಯಾರಿಗೆ ವಿಳಂಬ ಮಾಡಿದ್ದರಿಂದ ಕಾಮಗಾರಿ ತಡವಾಗಿ ಶುರುವಾಗಿತ್ತು. ‘ಈಗ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿರುವ ಪರಿಣಾಮ, ಕಾಮಗಾರಿ ನಿಲ್ಲಿಸಲಾಗಿದೆ. ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಟೆಂಡರ್‌ ಆಗಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವುದು ಅಷ್ಟು ಸುಲಭವಲ್ಲ’ ಎನ್ನುತ್ತಾರೆ ಗುತ್ತಿಗೆದಾರ ರವಿಶಂಕರ. 

₹27.30 ಲಕ್ಷಕ್ಕೆ 6 ಎಕರೆ ಜಮೀನು ಖರೀದಿಸಿದ್ದು, ಇದರಲ್ಲಿ 4 ಎಕರೆಯಲ್ಲಿ ಡಿಪೋ ಮತ್ತು 2 ಎಕರೆಯಲ್ಲಿ ವಸತಿಗೃಹಗಳನ್ನು ನಿರ್ಮಿಸಲಾಗುವುದು. ಕಾಮಗಾರಿ ಸ್ಥಗಿತಗೊಂಡರೆ ಬಸ್‌ಗಳನ್ನು ಮಂಜೂರು ಮಾಡುವುದಿಲ್ಲ. ಪಕ್ಕದ ಚಳ್ಳಕೆರೆ ಡಿಪೋಕ್ಕೆ 50 ಬಸ್ ನೀಡಲಾಗಿದೆ ಎನ್ನುತ್ತಾರೆ ಕೆಎಸ್ಆರ್‌ಟಿಸಿ ಎಂಜಿನಿಯರ್ ನಾಗರಾಜ್. 

ಸಾರಿಗೆ ಇಲಾಖೆ ಮತ್ತು ಜನಪ್ರತಿನಿಧಿಗಳ ಗೊಂದಲಕ್ಕೆ ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಜತೆಗೆ ಅರ್ಹ ಸೌಲಭ್ಯವೊಂದು ಕೈತಪ್ಪುತ್ತಿರುವುದಕ್ಕೆ ಹೊಣೆ ಯಾರು ಎಂದು ಸಾರ್ವನಿಕರು ಪ್ರಶ್ನೆ ಮಾಡಿದ್ದಾರೆ.

‘ಪರಿಶೀಲಿಸಿ ಸೂಚನೆ’

ಬಸ್ ನಿಲ್ದಾಣ ಡಿಪೋ ನಿರ್ಮಾಣ ಸ್ಥಳ ಪರಿಶೀಲಿಸುವಂತೆ ಸೂಚನೆ ಬಂದಿದೆ. ಕಾಮಗಾರಿ ಸ್ಥಗಿತ ಮಾಡಿ ಎಂದು ಹೇಳಿಲ್ಲ. ಈ ಹಂತದಲ್ಲಿ ಡಿಪೋ ಜಾಗ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಡಿಪೋ ಆರಂಭವಾದಲ್ಲಿ 30-40 ಬಸ್‌ಗಳನ್ನು ಒದಗಿಸಲಾಗುವುದು. ನಂತರ ಬೇಡಿಕೆಗೆ ಅನುಗುಣವಾಗಿ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಸಾರಿಗೆ ಇಲಾಖೆ ಜಿಲ್ಲಾ ನಿರ್ದೇಶಕ ಸಿದ್ದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT