ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಇಲಾಖೆ ವಿತರಿಸಿದ್ದ ಮಾತ್ರೆ ಸೇವನೆ: ಕಟ್ಟಡ ಕಾರ್ಮಿಕರಲ್ಲಿ ವಾಂತಿ–ಭೇದಿ

Last Updated 23 ಅಕ್ಟೋಬರ್ 2021, 13:19 IST
ಅಕ್ಷರ ಗಾತ್ರ

ಚಿತ್ರದುರ್ಗ: ವಾಂತಿ–ಭೇದಿಯಿಂದ ಬಳಲುತ್ತಿದ್ದ ಎಂಟು ಕಟ್ಟಡ ಕಾರ್ಮಿಕರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಮಿಕ ಇಲಾಖೆ ವಿತರಿಸಿದ್ದ ‘ಇಮ್ಯುನಿಟಿ ಬೂಸ್ಟರ್‌’ ಸೇವನೆಯ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕಾರ್ಮಿಕರ ಈ ಆರೋಪವನ್ನು ಇಲಾಖೆ ನಿರಾಕರಿಸಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ನೀಡುವ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಕಾರ್ಮಿಕರ ಆರೋಗ್ಯದಲ್ಲಿ ಕಾಣಿಸಿಕೊಂಡ ಈ ಸಮಸ್ಯೆ ಇಡೀ ಸಮುದಾಯದಲ್ಲಿ ಆತಂಕ ಮೂಡಿಸಿದೆ. ‘ಇಮ್ಯುನಿಟಿ ಬೂಸ್ಟರ್‌’ ಸೇವನೆಗೆ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ‘ಪ್ರತಿರಕ್ಷಣಾ ಕಿಟ್‌’ ವಿತರಿಸಿದೆ. ಅ.8ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾರ್ಮಿಕರು ಈ ಕಿಟ್‌ ಪಡೆದಿದ್ದರು. ವಾರದ ಬಳಿಕ ಸೇವನೆ ಮಾಡಿದಾಗ ವಾಂತಿ–ಭೇದಿ ಕಾಣಿಸಿಕೊಂಡಿದೆ.

ಕಿಟ್‌ನಲ್ಲಿ ಹಲವು ಔಷಧಗಳಿವೆ. ಆಯುಷ್‌ ಇಲಾಖೆ ಪ್ರಮಾಣೀಕರಿಸಿದ ‘ಇಮ್ಯುನಿಟಿ ಬೂಸ್ಟರ್‌’ ಕೂಡ ಇದರಲ್ಲಿದೆ. ತುಳಸಿ, ಶುಂಠಿ, ಕಾಳುಮೆಣಸು ಸೇರಿ ಇತರ ಗಿಡಮೂಲಿಕೆಗಳಿಂದ ಇದನ್ನು ತಯಾರಿಸಲಾಗಿದೆ. ಈ ಪುಡಿಯನ್ನು ನಿತ್ಯ ಬೆಳಿಗ್ಗೆ ಎರಡು ಚಮಚ ಬಿಸಿನೀರಿನಲ್ಲಿ ಹಾಕಿ ಸೇವಿಸಲು ಸೂಚಿಸಲಾಗಿದೆ. ಹೀಗೆ ಸೇವಿಸಿದ ಕೆಲ ಸಮಯದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ಕಾರ್ಮಿಕರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯ ಎರಡು ವಾರ್ಡ್‌ಗಳಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಹಾಗೂ ಶುಶ್ರೂಷಕರು ಇವರ ಮೇಲೆ ನಿಗಾ ಇಟ್ಟಿದ್ದಾರೆ. ಇಬ್ಬರು ಕಾರ್ಮಿಕರು ನಿತ್ರಾಣಗೊಂಡಿದ್ದಾರೆ. ಕಾರ್ಮಿಕರು ಸೇವಿಸಿದ ಔಷಧವನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ. ಕಾರ್ಮಿಕ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.

‘ಅ.8ರಂದು ಕಾರ್ಮಿಕ ಇಲಾಖೆ ಕಿಟ್‌ ನೀಡಿತ್ತು. ವಾರದಿಂದ ಇದನ್ನು ಸೇವಿಸಿರಲಿಲ್ಲ. ಶನಿವಾರ ಬೆಳಿಗ್ಗೆ ಎರಡು ಚಮಚ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ ಸೇವಿಸಿದೆ. ಕೆಲವೇ ನಿಮಿಷಗಳಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿತು. ಇದರಿಂದ ತೀರಾ ನಿತ್ರಾಣಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಕುಮಾರ್‌ ತಿಳಿಸಿದರು.

ಮದಕರಿಪುರದ ನಾಗರಾಜ್‌, ಕೊಟ್ರೇಶ್‌, ಕೆಳಗೋಟೆಯ ತಿಪ್ಪೇಸ್ವಾಮಿ, ವೇದಮೂರ್ತಿ, ಲಕ್ಷ್ಮಣ್‌, ಆನಂದ್‌ ಎಂಬ ಕಾರ್ಮಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಪ್ಲಾಸ್ಟಿಕ್‌ ಮಿಶ್ರಣ: ಆರೋಪ

ರೋಗನಿರೋಧ ಶಕ್ತಿ ಹೆಚ್ಚಳಕ್ಕೆ ಕಾರ್ಮಿಕ ಇಲಾಖೆ ನೀಡಿದ ಔಷಧದ ಡಬ್ಬಿಯಲ್ಲಿ ಪ್ಲಾಸ್ಟಿಕ್‌ ಪುಡಿ ಮಿಶ್ರಣವಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕಾರ್ಮಿಕರೊಬ್ಬರು ತಂದಿದ್ದ ‘ಇಮ್ಯುನಿಟಿ ಬೂಸ್ಟರ್‌’ ಪುಡಿಯನ್ನು ಶುಶ್ರೂಷಕರು ಕೆಳಗೆ ಸುರಿದರು. ಪುಡಿಯಲ್ಲಿದ್ದ ದೂಳು ಮೇಲೆದ್ದಿತು. ಇದರಲ್ಲಿ ಮಿಶ್ರಣವಾಗಿದ್ದ ಪ್ಲಾಸ್ಟಿಕ್‌ ಪುಡಿ ಹಾಗೂ ದಾರವನ್ನು ರೋಗಿಗಳು ಬೇರ್ಪಡಿಸಿದರು.

ವೈದ್ಯಕೀಯ ವರದಿಗೆ ಕೋರಿಕೆ

ವಾಂತಿ–ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಕಾರ್ಮಿಕರ ಆರೋಗ್ಯ ಏರುಪೇರು ಆಗಿರುವುದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಕಾರ್ಮಿಕ ಇಲಾಖೆ ವೈದ್ಯರಲ್ಲಿ ಮನವಿ ಮಾಡಿಕೊಂಡಿದೆ.

‘ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಿಟ್‌ ಅನ್ನು ಒಂದೂವರೆ ತಿಂಗಳಿಂದ ನೀಡಲಾಗುತ್ತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಮೂರು ಸಾವಿರ ಕಿಟ್‌ ವಿತರಿಸಲಾಗಿದೆ. ಅನೇಕರು ಇದನ್ನು ನಿತ್ಯವೂ ಸೇವಿಸುತ್ತಿದ್ದಾರೆ. ಕೆಲವರಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ಅನುಮಾನಗಳಿವೆ. ವೈದ್ಯಕೀಯ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ’ ಎಂದು ಕಾರ್ಮಿಕ ಇಲಾಖೆ ತಾಲ್ಲೂಕು ಅಧಿಕಾರಿ ರಾಜಣ್ಣ ತಿಳಿಸಿದ್ದಾರೆ.

***

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ಕಿಟ್‌ ನೀಡಿತ್ತು. ಇದನ್ನು ಸೇವಿಸಿದ ಬಳಿಕ ವಾಂತಿ ಬರುತ್ತಿತ್ತು. ಶುಕ್ರವಾರ ಆಸ್ಪತ್ರೆಗೆ ಧಾವಿಸಿ ವೈದ್ಯರ ಬಳಿ ಆರೋಗ್ಯ ಪರೀಕ್ಷಿಸಿಕೊಂಡು ಮರಳಿದ್ದೆ.

ರಾಜಪ್ಪ, ಕಾರ್ಮಿಕ
ಹಳಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT