ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

Published 9 ಮೇ 2024, 8:22 IST
Last Updated 9 ಮೇ 2024, 8:22 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಜನರು ಈ ವರ್ಷ ಎದುರಾಗಿರುವ ಭೀಕರ ಬರದಿಂದ ಹಿಂದೆದಿಗಿಂತಲೂ ನಲುಗಿ ಹೋಗಿದ್ದಾರೆ.

ಕಳೆದ ವರ್ಷ ಇಲ್ಲಿ ನಿರೀಕ್ಷೆಯಂತೆ ಮಳೆಯಾಗಲಿಲ್ಲ. ಬಹುತೇಕ ಕೆರೆಗಳು ಖಾಲಿಯಾಗಿವೆ. ರಂಗಯ್ಯನದುರ್ಗ ಜಲಾಶಯದಲ್ಲಿ ನೀರು ಡೆಡ್‌ ಸ್ಟೋರೇಜ್‌ ಮುಟ್ಟಿದೆ. ಕೋವಿಡ್‌ ನಂತರ 2 ವರ್ಷಗಳಿಂದ ಉತ್ತಮ
ಮಳೆಯಾಗಿ ಅಂತರ್ಜಲ ತುಸು ಸುಧಾರಣೆಯಾಗಿತ್ತು. 500 ಅಡಿ ಆಸುಪಾಸಿನಲ್ಲಿ ದೊರೆಯುತ್ತಿದ್ದ ಕೊಳವೆಬಾವಿ ನೀರು ಮತ್ತೆ 800-1000 ಅಡಿ ಆಳಕ್ಕೆ ಕುಸಿದಿದೆ. ಅದೂ ಸಿಗುವ ಗ್ಯಾರೆಂಟಿ ಕಳೆದುಕೊಂಡಿದೆ.

ಕುಡಿಯುವ ನೀರಿನ ಸಮಸ್ಯೆ:

ಅಂತರ್ಜಲ ಮಟ್ಟ ಕುಸಿಯುತ್ತಿರುವ ಪರಿಣಾಮ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ರಾಂಪುರ, ನಾಗಸಮುದ್ರದಂತಹ ದೊಡ್ಡ ಗ್ರಾಮಗಳಲ್ಲಿ ನೀರಿಗಾಗಿ ಪ್ರತಿಭಟನೆಗಳು ನಡೆದಿವೆ. 20 ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಮೊಳಕಾಲ್ಮುರು ಪಟ್ಟಣಕ್ಕೆ ನೀರು ಪೂರೈಸಲು ಆಧಾರವಾಗಿರುವ ರಂಗಯ್ಯನದುರ್ಗ ಜಲಾಶಯ ಡೆಡ್‌ ಸ್ಟೋರೇಜ್‌ ಮುಟ್ಟಿದ್ದು, ನೀರು ವಾಸನೆಯಿಂದ ಕೂಡಿ, ಕುಡಿಯಲು ಬಳಸಬಾರದು ಎಂದು ಪಟ್ಟಣ ಪಂಚಾಯಿತಿ ಸೂಚಿಸಿದೆ. ಹಳೆ ಪಟ್ಟಣದ ಬಡಾವಣೆಗಳ ನೆಲದಲ್ಲಿ ಬೃಹತ್‌ ಬಂಡೆ ಇರುವ ಕಾರಣ ಮನೆಯವರು ಸ್ವಂತವಾಗಿ ಬೋರ್‌ ಹಾಕಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಬೇರೆ ಕಡೆಗೆ ಹೋಲಿಸಿದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಜಾನುವಾರುಗಳಿಗೆ ಸಂಕಷ್ಟ:

ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬಳಿ ಮೇವಿನ ಲಭ್ಯತೆ ಇಲ್ಲವಾಗಿದೆ. ಅನೇಕರು ಜಾನುವಾರು ಸಹವಾಸ ಸಾಕು ಎಂದು ಮಾರಾಟ ಮಾಡಿದ್ದಾರೆ. ಕಾರಣ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸಿದೆ.

ತಾಲ್ಲೂಕಿನಲ್ಲಿ ಕಳೆದ ವರ್ಷ 8 ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಈ ವರ್ಷ 3 ಗೋಶಾಲೆಗಳನ್ನು ತೆರೆಯಲಾಗಿದೆ. ಮೇವು ಬ್ಯಾಂಕ್‌ ತೆರೆಯಬೇಕು ಎಂಬ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ತೆರೆದಿರುವ ಗೋಶಾಲೆಗಳಲ್ಲಿ ನೆರಳಿನ ಕೊರತೆ ಇದೆ. 25-30 ಕಿ.ಮೀ. ವ್ಯಾಪ್ತಿಗೆ ಒಂದು ಗೋಶಾಲೆ ಆರಂಭಿಸಿದ್ದು, ನಿತ್ಯ ಜಾನುವಾರುಗಳನ್ನು ಗೋಶಾಲೆಗೆ ಹೊಡೆದುಕೊಂಡು ಹೋಗಿ ಬರಲು ಸಾಧ್ಯವೇ ಎಂದು ಪಾಲಕ ರಾಯಾಪುರದ ಸಣ್ಣಪಾಲಯ್ಯ ಪ್ರಶ್ನಿಸಿದರು.

ಗೋಶಾಲೆಗಳಿಗೆ ಆಂಧ್ರಪ್ರದೇಶದಿಂದ ಮೇವು ಪೂರೈಕೆಯಾಗುತ್ತಿದೆ. ಸ್ಥಳೀಯವಾಗಿ ಮೇವು ಸಿಗದ ಕಾರಣ ಇದೇ ಮೇವನ್ನು ಕೊಳ್ಳಬೇಕಿದೆ. ಪ್ರತಿ ಟ್ರ್ಯಾಕ್ಟರ್‌ ಸಪ್ಪೆಗೆ ₹ 6,000ದಿಂದ ₹ 8,000 ಬೆಲೆ ಇದೆ. ಪಟ್ಟಣದ ಹಾನಗಲ್‌ ರಸ್ತೆಯಲ್ಲಿ ನಿತ್ಯ ಆಂಧ್ರದಿಂದ ತಂದು ಮೇವುನ ಮಾರಾಟ ಮಾಡುವುದು ಕಾಣಸಿಗುತ್ತದೆ. ದೇವರ ಎತ್ತುಗಳ ಪರಿಸ್ಥಿತಿ ಹೇಳತೀರದು ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಒಣಗಿದ ಬೆಳೆ:

ಮಳೆಯ ಕೊರತೆಯಿಂದಾಗಿ ನೀರಾವರಿ ಪ್ರದೇಶದಲ್ಲಿನ ವಾಣಿಜ್ಯ ಬೆಳೆಗಳಾದ ರೇಷ್ಮೆ, ಪಪ್ಪಾಯ, ದಾಳಿಂಬೆ, ಟೊಮೆಟೊ ಬೆಳೆಗಳು ಒಣಗಿವೆ. 800 ಹೆಕ್ಟೇರ್‌ನಷ್ಟಿದ್ದ ರೇಷ್ಮೆ ಬೆಳೆ ಶೇ 50ರಷ್ಟು ಕುಸಿತವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರೇಷ್ಮೆ ಹುಳು ಸಾಕಣೆ ಮನೆಗಳು ವ್ಯರ್ಥವಾಗಿವೆ ಎಂದು ರೈತ ಸಂಘದ ರವಿಕುಮಾರ್ ತಿಳಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತಂದು ಕೆರೆಗಳನ್ನು ತುಂಬಿಸಲಾಗುವುದು’ ಎಂಬ ಜನಪ್ರತಿನಿಧಿಗಳ ಭರವಸೆ ಚುನಾವಣೆ ಸಂದರ್ಭಗಳಲ್ಲಿ ಅಬ್ಬರಿಸುತ್ತದೆ. ವಾಸ್ತವದಲ್ಲಿ ಸದ್ಯ ಯೋಜನೆ ಮೇಲೆ ಯಾವುದೇ ನಂಬಿಕೆ ಇಟ್ಟುಕೊಳ್ಳುವಂತಿಲ್ಲ. ಕೆರೆಗಳನ್ನು ತುಂಬಿಸುವ ಗ್ಯಾರಂಟಿ ನಮಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮೊಳಕಾಲ್ಮುರು ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ದೇವರ ಎತ್ತುಗಳು ಮೇವಿಲ್ಲದೇ ಸೊರಗಿರುವುದು
ಮೊಳಕಾಲ್ಮುರು ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ದೇವರ ಎತ್ತುಗಳು ಮೇವಿಲ್ಲದೇ ಸೊರಗಿರುವುದು
ಗೋಶಾಲೆಗಳನ್ನು ಅವೈಜ್ಞಾನಿಕವಾಗಿ ಆರಂಭಿಸಲಾಗಿದೆ. ಮೇವಿನ ಬ್ಯಾಂಕ್‌ ಆರಂಭಕ್ಕೂ ಕ್ರಮ ಕೈಗೊಂಡಿಲ್ಲ. ಬಿರುಬಿಸಿಲಿನಲ್ಲಿ ದನಗಳನ್ನು 20-25 ಕಿ.ಮೀ. ಹೊಡೆದುಕೊಂಡು ಹೋಗಿ ಬುರಲು ಸಾಧ್ಯವೇ?.
ಬೇಡರೆಡ್ಡಿಹಳ್ಳಿ ಬಸವರೆಡ್ಡಿ ರಾಜ್ಯ ಉಪಾಧ್ಯಕ್ಷ ರೈತಸಂಘ
ಸದ್ಯ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಮಳೆ ವಿಳಂಬವಾದಲ್ಲಿ ಸಮಸ್ಯೆ ತೀವ್ರವಾಗಲಿದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡುವ ಸ್ಥಿತಿ ಎದುರಾಗಬಹುದು.
ಕೆ.ಆರ್.‌ ಪ್ರಕಾಶ್‌ ಇಒ. ತಾ.ಪಂ. ಮೊಳಕಾಲ್ಮುರು
ಕೂಲಿ ಕಾರ್ಮಿಕರಿಗೆ ಸಮಸ್ಯೆ
ಬಿಸಿಲಿನ ತೀವ್ರತೆ ಹೆಚ್ಚಿರುವುದು ದಿನಗೂಲಿಗಳಿಗೆ ಹೆಚ್ಚು ಸಂಕಷ್ಟ ಉಂಟುಮಾಡಿದೆ. ಕೃಷಿ ಕಾರ್ಯ ಬೆಳಿಗ್ಗೆ 6.30ರಿಂದ ಕೆಲಸ ಆರಂಭವಾಗುತ್ತಿದೆ. ಕೆಲ ತೋಟದ ಮಾಲೀಕರು ಬಿಸಿಲಿನ ಝಳ ನೋಡಿ ಬೇಗ ಮನೆಗೆ ಕಳಿಸುತ್ತಾರೆ. ಮತ್ತೆ ಕೆಲವರು ಮಧ್ಯಾಹ್ನ 1 ಗಂಟೆ ತನಕ ಕೆಲಸ ಮಾಡಿ ಎಂದು ತಾಕೀತು ಮಾಡುತ್ತಾರೆ. ನಿತ್ಯ ₹ 200 ಕೂಲಿ ನೀಡುತ್ತಾರೆ. ಬಿಸಿಲಿನಿಂದ ಜ್ವರ ಬಂದಲ್ಲಿ ಆಸ್ಪತ್ರೆಗೆ ಖರ್ಚಿಗೆ ದುಪ್ಪಟ್ಟು ಕೊಡಬೇಕಿದೆ ಎಂದು ಕಾರ್ಮಿಕ ಮಹಿಳೆ ಶಾಂತಮ್ಮ ಅಳಲು ತೋಡಿಕೊಂಡರು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದಲ್ಲಿ 3 ತಿಂಗಳಾದರೂ ಕೂಲಿ ನೀಡುವುದಿಲ್ಲ. ಅರ್ಜಿ ಹಾಕಿ ಕೆಲಸ ಮಾಡಿ ಪ್ರತಿಭಟನೆ ಮಾಡಿ ಕೂಲಿ ಪಡೆಯಬೇಕಿದೆ. ಆದ್ದರಿಂದ ಯೋಜನೆಗಳ ಸಹವಾಸ ಬೇಡ ಎಂದು ಅನೇಕ ಕಾರ್ಮಿಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT