ಗುರುವಾರ , ಮೇ 6, 2021
23 °C
ಹೊಸದುರ್ಗ ತಾಲ್ಲೂಕಿನ ಕಪ್ಪನಾಯಕನಹಳ್ಳಿ ಸಮೀಪದ ಗಣಿಗಾರಿಕೆ ಪ್ರದೇಶದಲ್ಲಿ ಬಿದ್ದ ಆಳವಾದ ಗುಂಡಿಗಳು

ಹೊಸದುರ್ಗ: ಗಣಿ ಕಂದಕದಲ್ಲಿ ತಿಳಿಯಾದ ಜೀವಜಲ

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕಡುಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಇಲ್ಲಿನ ಗಣಿಗಾರಿಕೆಯ ಕಂದಕದಲ್ಲಿ ತಿಳಿಯಾದ ಜೀವಜಲವಿದ್ದು, ಕಾಡುಪ್ರಾಣಿ, ಜಲಚರಗಳಿಗೆ ಆಸರೆಯಾಗಿದೆ.

ತಾಲ್ಲೂಕಿನ ಮತ್ತೋಡು ಹೋಬಳಿಯ ಕಪ್ಪನಾಯಕನಹಳ್ಳಿ ಸಮೀಪದ ನಿರ್ಜನ ಪ್ರದೇಶ ಅಮರಕಲ್ಲು ಗುಡ್ಡದ ಗಣಿಗಾರಿಕೆ ಪ್ರದೇಶದಲ್ಲಿ 1 ಕಿ.ಮೀ ಉದ್ದ, 60 ಅಡಿ ಅಗಲವಿರುವ ಆಳವಾದ ಗುಂಡಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ.

ಮತ್ತೋಡಿನಿಂದ ಕಪ್ಪನಾಯಕನಹಳ್ಳಿ ಮಾರ್ಗವಾಗಿ ಕಂಚೀಪುರ ಗ್ರಾಮಕ್ಕೆ ಸಾಗುವಾಗ ಈ ಜೀವಜಲ ಕಾಣಸಿಗುತ್ತದೆ. ದಶಕದ ಹಿಂದೆ ಇಲ್ಲಿದ್ದ ಐತಿಹಾಸಿಕ ಅಮರಕಲ್ಲು ಗುಡ್ಡ ಅಕ್ರಮ ಗಣಿಗಾರಿಕೆಯಿಂದಾಗಿ ಸಂಪೂರ್ಣ ಹಾಳಾಗಿದೆ. ನೂರಾರು ಅಡಿ ಆಳದವರೆಗೂ ಗುಡ್ಡವನ್ನು ಬಗೆದಿರುವ ಕಲ್ಲುಕ್ವಾರಿಯ ಬೃಹತ್ತಾದ ಗುಂಡಿಯಲ್ಲಿ ನಿಂತಿರುವ ನೀರು ಗಮನ ಸೆಳೆಯುತ್ತಿದೆ.

ಮಳೆಗಾಲದಲ್ಲಿ ಈ ಭಾಗದ ಗುಡ್ಡದ ಮೇಲೆ ಬೀಳುವ ಮಳೆ ನೀರು ಹರಿದು ಬಂದು ನೂರಾರು ಅಡಿ ಆಳದ ಗುಂಡಿ ಭರ್ತಿಯಾಗುತ್ತದೆ. ಆಗ ಈ ಗುಂಡಿಯನ್ನು ಹತ್ತಿರದಿಂದ ನೋಡುವುದಕ್ಕೂ ಭಯವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳ ಹೆಚ್ಚಾದಾಗ ಸುತ್ತಮುತ್ತಲಿನ ಕೆರೆಕಟ್ಟೆ, ಬ್ಯಾರೇಜ್‌, ಚೆಕ್‌ಡ್ಯಾಂ, ಗೋಕಟ್ಟೆಗಳು ಸಂಪೂರ್ಣ ಬರಿದಾಗುತ್ತವೆ. ಇಂತಹ ಸಮಯದಲ್ಲಿಯೂ ಈ ಗುಂಡಿಯಲ್ಲಿ 20 ಅಡಿ ಆಳದವರೆಗೂ ನೀರು ನಿಂತಿರುವುದು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿದೆ.

‘ಇಲ್ಲಿಗೆ 4 ಕಿ.ಮೀ ಸಮೀಪದಲ್ಲಿಯೇ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶವಿದೆ. ಎರಡು ವರ್ಷಗಳಿಂದ ಭದ್ರಾ ಜಲಾಶಯದ ನೀರನ್ನು ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ. ಇದರಿಂದಾಗಿ ಬೇಸಿಗೆಯಲ್ಲೂ ಈ  ಗುಂಡಿಯಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ನೀರು ಮೇಲಕ್ಕೆ ಬಂದಿದೆ. ಸಾಕಷ್ಟು ನೀರು ನಿಂತಿದ್ದರೂ ಜಾನುವಾರು ಕುಡಿಯಲಿಕ್ಕೆ ಹಾಗೂ  ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಆಗುತ್ತಿಲ್ಲ. ಇಲ್ಲಿಗೆ ಯಾರೂ ಬರದಂತೆ ಸಿಮೆಂಟ್‌ ಕಂಪನಿಯವರು ಪ್ರವೇಶ ನಿರ್ಬಂಧಿಸಿದ್ದಾರೆ’ ಎನ್ನುತ್ತಾರೆ ಕಂಚೀಪುರ ಡಿ. ಪರುಶುರಾಮಪ್ಪ, ಮತ್ತೋಡು ರಾಮಪ್ಪ.

ದಶಕದ ಹಿಂದೆ ಮತ್ತೋಡು, ದೊಡ್ಡಬ್ಯಾಲದಕೆರೆ, ಚಿಕ್ಕಬ್ಯಾಲದಕೆರೆ, ಕಂಚೀಪುರ, ಲಕ್ಕಿಹಳ್ಳಿ ಸುತ್ತಮುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿಯೇ ಅಕ್ರಮವಾಗಿ ಗಣಿಗಾರಿಕೆ ನಡೆದಿತ್ತು. ಆಗ ಇಲ್ಲಿ 9 ಗಣಿ ಕಂಪನಿಗಳಿದ್ದವು. ಇದರಿಂದಾಗಿ ಓಬಳಾಪುರ ಗಣಿ ಪ್ರದೇಶದಲ್ಲಿಯೂ ಅಗೆಯದಷ್ಟು ಭೂಮಿಯನ್ನು ಇಲ್ಲಿ ಬಗೆಯಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಡೂರು ಗಣಿಗಿಂತಲೂ ದೊಡ್ಡ ಪ್ರಮಾಣದ ಗಣಿಗಾರಿಕೆ ಗುಂಡಿಗಳು ಕಾಣಿಸುತ್ತವೆ. ಆದರೆ,  ಗಣಿಗಾರಿಕೆಯಿಂದ  ಈ ಪ್ರದೇಶದ ರಸ್ತೆ, ಶಾಲೆ, ಆಸ್ಪತ್ರೆ, ಜನರ ಮನೆಗಳಿಗೆ ಸಾಕಷ್ಟು ಹಾನಿಯಾಗಿತ್ತು. ದಶಕ ಕಳೆದರೂ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾಡಳಿತ್ತು ಕಾಳಜಿ ವಹಿಸದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತ್ತೋಡು ಹೋಬಳಿ ನಾಗರಿಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು