ಬುಧವಾರ, ಮೇ 18, 2022
24 °C
ಹೊಸದುರ್ಗ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಜೆಪಿ ಮುಖಂಡರ ಭಿನ್ನಮತ ಬಯಲು

ಲಿಂಗಮೂರ್ತಿ ವಾಗ್ವಾದ; ಕೆಡಿಪಿ ಸಭೆಯಲ್ಲಿ ಗೂಳಿಹಟ್ಟಿ ಶೇಖರ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕೆಡಿಪಿ ಸಭೆಗಳು ತಾಲ್ಲೂಕು ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳು. ಇಲ್ಲಿ ಯಾವುದೇ ಶಿಷ್ಟಾಚಾರ ಇಲ್ಲ. ಆಹ್ವಾನಿತರಲ್ಲದವರಿಗೆ ಪ್ರವೇಶವಿಲ್ಲ. ಅನ್ಯರ ದರ್ಪ, ದಬ್ಬಾಳಿಕೆಗೆ ಎದೆಗುಂದದೇ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.

ಇಲಾಖಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಅವರು ತಪ್ಪಾದ ಮಾಹಿತಿಯಿಂದ ಕೆಡಿಪಿ ಸಭೆಗೆ ಬಂದಿದ್ದರು. ತಾಲ್ಲೂಕು ಆಡಳಿತದ ಅಧಿಕಾರಿಗಳು ಏನೂ ಉತ್ತರ ಕೊಡದೇ ಸುಮ್ಮನಿದ್ದುದನ್ನು ಗಮನಿಸಿದ ಅವರು, ‘ಸಭೆಗೆ ಕರೆದು ಅವಮಾರ್ಯಾದೆ ಮಾಡುವಿರಾ’ ಎಂದು ಕೋಪಿಸಿಕೊಂಡು ಹೊರ ಹೋದರು.

ಆಗ ಮಾತನಾಡಿದ ಶಾಸಕರು, ‘ಸದಸ್ಯರಲ್ಲದವರು ಸಭೆಗೆ ಬಂದು, ದೌರ್ಜನ್ಯ ದಬ್ಬಾಳಿಕೆ ನಡೆಸಿದರೆ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂದು ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಮೊದಲನೇ ಮಹಡಿಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮವಿತ್ತು. ಕರಪತ್ರದಲ್ಲಾದ ಕೆಲವು ದೋಷಗಳನ್ನು ತಿದ್ದುಪಡಿ ಮಾಡುವುದಕ್ಕಾಗಿ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸದನದಲ್ಲಿರುವ ಹಕ್ಕುಬಾಧ್ಯತೆ ಸಮಿತಿಯ ನಿಯಮದ ಪ್ರಕಾರ ತಾಲ್ಲೂಕು ಆಡಳಿತದ ವತಿಯಿಂದ ಯಾವುದೇ ಕಾರ್ಯಕ್ರಮ ಜರುಗಿದರೂ ಶಾಸಕರು ಅಧ್ಯಕ್ಷತೆ ವಹಿಸುವರು. ಇಲಾಖಾ ಸಚಿವರು ಉದ್ಘಾಟಿಸುವರು ಎಂಬ ನಿಯಮವಿದೆ. ಕರಪತ್ರದಲ್ಲಿ ಒಬ್ಬರ ಹೆಸರು ಮೇಲೆ, ಮತ್ತೊಬ್ಬರದು ಕೆಳಗಿರಬೇಕು ಎಂಬ ಮನೋಭಾವ ಬಿಟ್ಟು ಮಾಡುವ ಕಾರ್ಯದತ್ತ ಗಮನಹರಿಸಬೇಕು’ ಎಂದು ಹೇಳಿದರು.

‘ಸಭೆಗೆ ಅಗೌರವ ತೋರಿ, ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಕಳುಹಿಸಿ’ ಎಂದು ಅಧಿಕಾರಿಗಳಿಗೆ ಹೇಳಿದರು.

ಬಿಜೆಪಿ ಅಧಿಕಾರದಲ್ಲಿ ರಸ್ತೆ ಅಭಿವೃದ್ಧಿಗಾಗಿ ₹ 23 ಕೋಟಿ ಅನುದಾನ ಒದಗಿಸಿಕೊಡಲಾಗಿದೆ. ಜಾನಕಲ್ ರೋಡ್ ₹ 6 ಕೋಟಿ, ಶ್ರೀ ರಾಂಪುರ ₹ 6 ಕೋಟಿ ಹಾಗೂ ಹೊಸದುರ್ಗ ಟೌನ್ ಅಭಿವೃದ್ಧಿಗೆ ₹ 11 ಕೋಟಿ ನೀಡಲಾಗಿದೆ’ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ‘ಹೊಸದುರ್ಗದಲ್ಲಿ ಹೆಚ್ಚು ರಸ್ತೆ ಅಪಘಾತಗಳು, ಸಾವು ಸಂಭವಿಸುತ್ತಿವೆ. ಹಾಗಾಗಿ ರಸ್ತೆ ವಿಸ್ತರಣೆ ಶಿಸ್ತುಬದ್ಧವಾಗಿರಲಿ. ತಿರುವುಗಳಲ್ಲಿ ಹೆಚ್ಚಿನ ಗಮನಹರಿಸಿ, ರಸ್ತೆ ನಿರ್ಮಿಸಬೇಕು. ವಿಸ್ತರಣೆಯ ವಿಷಯದಲ್ಲಿ ಗ್ರಾಮಸ್ಥರು ಏನಾದರೂ ಸಮಸ್ಯೆ ಉಂಟುಮಾಡಿದರೆ ಪೊಲೀಸರ ಸಹಕಾರದೊಂದಿಗೆ ಅವರ ಮನವೊಲಿಸಿ, ನಿರ್ಮಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ತೋಟಗಾರಿಕೆ ಇಲಾಖೆಯವರು ಕಳೆದ ಮೂರು ವರ್ಷ ಹಾಗೂ ಮುಂದಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತೀರ್ಣ, ಬೆಳೆಗಳು ಕುರಿತ ಸಂಪೂರ್ಣ ಮಾಹಿತಿ ಒದಗಿಸಬೇಕು. ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯ ಹೆಚ್ಚಾಗಿದ್ದು, ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ನಿತ್ಯ ಭೇಟಿ ನೀಡಿ ವರದಿ ಸಲ್ಲಿಸಬೇಕು’ ಎಂದು ತೋಟಗಾರಿಕ ಇಲಾಖೆ ನಿರ್ದೇಶಕ ಮಂಜುನಾಥ್ ಅವರಿಗೆ ತಿಳಿಸಿದರು.

ಗುತ್ತಿಗೆದಾರರ ಮೇಲೆ ಎಫ್ಐಆರ್‌: ‘ತಾಲ್ಲೂಕಿನ ದಾಸರಹಳ್ಳಿ ಕ್ರಾಸ್ ಬಳಿ ಟಾರ್ ನಿರ್ಮಿಸದೇ 2 ವರ್ಷಗಳಿಂದ ಹಾಗೆಯೇ ಉಳಿದಿದೆ. ಗುರುವಾರದೊಳಗೆ ಗುತ್ತಿಗೆದಾರರು ಬಂದು ಕಾರ್ಯನಿರ್ವಹಿಸದೇ ಇದ್ದರೆ, ಅವರ ಯಾವುದೇ ಕಾರಣಗಳಿಗೆ ಕಿವಿಗೊಡದೇ ನಿರ್ದಾಕ್ಷಿಣ್ಯವಾಗಿ ಎಫ್ಐಆರ್‌ ದಾಖಲಿಸಿ’
ಎಂದರು.

ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗೆ ಜಾಗ: ಬಿಸಿಎಂ ವಿಸ್ತರಣಾಧಿಕಾರಿ ಕೆ.ಸಿ. ಶಶಿಧರ್ ಅವರು ಮಾತನಾಡಿ, ‘ತಾಲ್ಲೂಕಿನಲ್ಲಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗಾಗಿ ಬಾಲಕರಿಗೆ ಹಾಗೂ ಬಾಲಕಿಯರಿಗೆ ಒಂದೊಂದು ವಿದ್ಯಾರ್ಥಿನಿಲಯಗಳ ಅಗತ್ಯವಿದೆ. ಅವರ ದಾಖಲಾತಿಯೂ ಹೆಚ್ಚಿದೆ. ಹೀಗಾಗಿ ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ಸ್ಥಳ ನೀಡಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸ್ಥಳಾವಕಾಶ ಕೊಡಿಸುವುದಾಗಿ ಭರವಸೆ ನೀಡಿದರು.

‘ಸದ್ಯ ತಾಲ್ಲೂಕಿನಲ್ಲಿ ಓಮೈಕ್ರಾನ್ ಪತ್ತೆಯಾಗಿಲ್ಲ. ಕೊರೊನಾ ಪ್ರಕರಣದಲ್ಲಿ ಯಾವುದೇ ಸಾವು ಕೂಡ ಸಂಭವಿಸಿಲ್ಲ. ಪ್ರಸ್ತುತ 104 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಮೂರನೇ ಅಲೆ ತಡೆಯಲು ತಾಲ್ಲೂಕು ಆಸ್ಪತ್ರೆ ಸರ್ವ ಸನ್ನದ್ಧವಾಗಿದೆ’ ಎಂದು
ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ತಾಲ್ಲೂಕು ಆಡಳಿತಾಧಿಕಾರಿ ಶ್ರೀನಿವಾಸ ರೆಡ್ಡಿ ಸೇರಿದಂತೆ ತಾಲ್ಲೂಕು ಮಟ್ಟದ ಇತರ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು