ಗುರುವಾರ , ಜೂನ್ 30, 2022
25 °C
ಪ್ಯಾಕೇಜ್‌ಗೆ ಆಗ್ರಹ

ಲಾಕ್‌ಡೌನ್‌: ಜೀವನ ನಿರ್ವಹಣೆ ಸಂಕಷ್ಟ- ಕೂಲಿಯತ್ತ ಖಾಸಗಿ ಬಸ್‌ ಸಿಬ್ಬಂದಿ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಲಾಕ್‍ಡೌನ್ ಪರಿಣಾಮ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಏಜೆಂಟ್ ಹಾಗೂ ಕ್ಲೀನರ್ ವೃತ್ತಿಯಿಂದ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಜೀವನ ನಿರ್ವಹಣೆ ಸಂಕಷ್ಟ ಎದುರಿಸುತ್ತಿರುವ ಅವರು ಈಗ ಕೂಲಿಯತ್ತ ಮುಖಮಾಡಿದ್ದಾರೆ.

ಕಟ್ಟಡ ನಿರ್ಮಾಣ, ಗಾರೆಕೆಲಸ, ಮಂಡಕ್ಕಿ ಬಟ್ಟಿಗಳಲ್ಲಿ ದುಡಿಮೆ ಕಂಡುಕೊಂಡಿದ್ದಾರೆ.

ಚಾಲಕರು, ನಿರ್ವಾಹಕರು, ಏಜೆಂಟ್ ಹಾಗೂ ಕ್ಲೀನರ್ ಸೇರಿ ಪ್ರತಿ ಬಸ್‌ನಲ್ಲಿ ಕನಿಷ್ಠ 15 ಜನರು ಕೆಲಸ ಮಾಡುತ್ತಾರೆ. 150 ಜನ ಏಜೆಂಟ್, 200 ಕ್ಲೀನರ್, 100 ಚಾಲಕರು, 175 ನಿರ್ವಾಹಕರು ಸೇರಿ ತಾಲ್ಲೂಕಿನಲ್ಲಿ 600 ಜನ ಖಾಸಗಿ ಬಸ್‌ ಸಿಬ್ಬಂದಿ ಇದ್ದಾರೆ.

‘‌ಬಸ್‌ ಸಂಚಾರ ಇದ್ದ ದಿನಗಳಲ್ಲಿ ದಿನಕ್ಕೆ ₹ 300ರಿಂದ ₹ 400 ಸಿಗುತ್ತಿತ್ತು. 35 ವರ್ಷಗಳಿಂದ ಬಸ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹೇಗೋ ಜೀವನ ಸಾಗುತ್ತಿತ್ತು. ನಮ್ಮಲ್ಲಿ ಯಾರೂ ನಯಪೈಸೆ ಉಳಿತಾಯ ಮಾಡಿಲ್ಲ. ಕೋವಿಡ್‌ನಿಂದ ಈಗ ಪರಿಸ್ಥಿತಿ ಅರ್ಥವಾಗುತ್ತಿದೆ. ಹಾಗಾಗಿ ಪ್ರತಿದಿನ ಟೀ, ಕಾಫಿ ಹಾಗೂ ಹಾಲಿಗೂ ಪರದಾಡುವಂತಾಗಿದೆ. ಶಾಲೆಗಳೂ ನಡೆಯುತ್ತಿಲ್ಲ. ಮಕ್ಕಳು, ತಂದೆ–ತಾಯಿ ಇದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ’ ಎಂದು ಏಜೆಂಟ್‌ ಭೀಮಣ್ಣ ಅಳಲು ತೋಡಿಕೊಂಡರು.

‘ಹಣ್ಣು, ಸೊಪ್ಪು, ತರಕಾರಿ ವ್ಯಾಪಾರ ಮಾಡಿ ಬದುಕು ಸಾಗಿಸೋಣ ಅಂದರೆ ಪೊಲೀಸರ ಕಾಟ. ಬಿಡಿಗಾಸು ಇಲ್ಲ. ಮುಂದಿನ ದಾರಿಯೂ ಕಾಣುತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಆರ್ಥಿಕ ಸಹಾಯ ಹಾಗೂ ಆಹಾರ ಧಾನ್ಯದ ಕಿಟ್ ಒದಗಿಸಿಲ್ಲ. ಹೀಗಾಗಿ ಖಾಸಗಿ ಬಸ್ ಮಾಲೀಕರು, ಸಿಬ್ಬಂದಿ ಪರದಾಡುವಂತಾಗಿದೆ. ಸಂಕಷ್ಟದಲ್ಲಿರುವ ನಮಗೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಬೇಕು’ ಎಂದು ರಾಜ್ಯ ಕಾರ್ಮಿಕ ಮುಖಂಡ ಸಿ.ವೈ. ಶಿವರುದ್ರಪ್ಪ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು