ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗದಲ್ಲಿ ಗೆದ್ದು ಬೀಗಿದ ಬಿಜೆಪಿಯ ಗೋವಿಂದ ಕಾರಜೋಳ

ಕಾಂಗ್ರೆಸ್‌ನ ಬಿ.ಎನ್‌.ಚಂದ್ರಪ್ಪಗೆ ಸೋಲು: ಕಾರಜೋಳ ಮೊದಲ ಬಾರಿಗೆ ಸಂಸತ್ತಿಗೆ
Published 4 ಜೂನ್ 2024, 10:19 IST
Last Updated 4 ಜೂನ್ 2024, 10:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಜಯಭೇರಿ ಭಾರಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಗೋವಿಂದ ಕಾರಜೋಳ ಅವರು 6,84,890 ಮತಗಳನ್ನು ಪಡೆದರೆ, ಬಿ.ಎನ್‌.ಚಂದ್ರಪ್ಪ 6,36,769 ಮತಗಳಿಸಿದರು. ಇಬ್ಬರು ಮಹಿಳೆಯರು ಸೇರಿ ಕಣದಲ್ಲಿ 20 ಅಭ್ಯರ್ಥಿಗಳಿದ್ದು, 18 ಉಮೇದುವಾರರು ಠೇವಣಿ ಕಳೆದುಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ 18,56,876 ಮತದಾರರಲ್ಲಿ 13,61,031 ಮತದಾರರು ಹಕ್ಕು ಚಲಾಯಿಸಿದ್ದರು.

ಕೇಂದ್ರ ಸಚಿವರೂ ಆಗಿದ್ದ ಮಾಜಿ ಸಂಸದ ಎ.ನಾರಾಯಣಸ್ವಾಮಿ ಬದಲಾಗಿ ಕಾರಜೋಳ ಅವರನ್ನು ಕಣಕ್ಕೆ ಇಳಿಸಿದ ಬಿಜೆಪಿಯ ಕಾರ್ಯತಂತ್ರ ಫಲಿಸಿದೆ. ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಇದು ಎರಡನೇ ಸೋಲು. 2019ರಲ್ಲಿ ಎ.ನಾರಾಯಣಸ್ವಾಮಿ ಎದುರು ಸೋಲು ಕಂಡಿದ್ದರು.

ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರ ಹರಡಿಕೊಂಡಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಕೈ ಅಭ್ಯರ್ಥಿ ಗೆಲುವಿನ ವಿಶ್ವಾಸದಲ್ಲಿದ್ದರು. ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಾರಜೋಳ ಅವರು ಅಖಾಡಕ್ಕೆ ಇಳಿದಾಗ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿತ್ತು.

ಕ್ಷೇತ್ರಕ್ಕೆ ನಡೆದ 18 ಚುನಾವಣೆಯಲ್ಲಿ ಕಾಂಗ್ರೆಸ್‌ 11, ಬಿಜೆಪಿ 3 ಬಾರಿ ಜಯಗಳಿಸಿದೆ. ಪಿಎಸ್‌ಪಿ, ಸ್ವತಂತ್ರ ಪಕ್ಷ, ಜನತಾ ದಳ ಮತ್ತು ಜೆಡಿಯು ತಲಾ ಒಂದು ಬಾರಿ ಕ್ಷೇತ್ರ ಪ್ರತಿನಿಧಿಸಿವೆ. 2009ರಿಂದ ನಡೆದ ಪ್ರತಿ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮತದಾರರು ಮಣೆ ಹಾಕಿದ್ದಾರೆ.

ಮೊದಲ ಬಾರಿಗೆ ಸಂಸತ್ತಿಗೆ

ಮೂಲತಃ ವಿಜಯಪುರ ಜಿಲ್ಲೆಯ ಗೋವಿಂದ ಎಂ.ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.

1994ರಲ್ಲಿ ವಿಧಾನಸಭಾ ಚುನಾವಣೆಗೆ ಪದಾರ್ಪಣೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು, 2023ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT