ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ‘ಬೆಸ್ಕಾಂ’ ಎಇಇ ತಿರುಪತಿ ನಾಯ್ಕ್ ವಿದ್ಯುತ್ ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಜೋಡಿ ರಂಗಾಪುರ ಗೊಲ್ಲರಹಟ್ಟಿಯ ಎ.ಸತೀಶ್ ಎಂಬುವರ ಮನೆ ಹಾಗೂ ಕುರಿ ಫಾರಂಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎ.ಟಿ.ಕುಮಾರ್ ಎಂಬುವವರು ಗುತ್ತಿಗೆ ಪಡೆದಿದ್ದರು. ಫೈಲ್‌ಗೆ ಸಹಿ ಹಾಕಲು ತಿರುಪತಿ ₹ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ಸುತ್ತಿನ ಮಾತುಕತೆಯ ಬಳಿಕ ಲಂಚದ ಮೊತ್ತವನ್ನು ತಿರುಪತಿ ₹ 20 ಸಾವಿರಕ್ಕೆ ಕಡಿಮೆ ಮಾಡಿಕೊಂಡಿದ್ದರು. ಆರಂಭದಲ್ಲಿ ₹ 10 ಸಾವಿರ ಹಾಗೂ ಫೈಲ್ ಚಿತ್ರದುರ್ಗ ಕಚೇರಿಯಿಂದ ಮರಳಿದ ಬಳಿಕ ₹ 10 ಸಾವಿರ ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಲಂಚ ನೀಡಲು ಇಷ್ಟವಿರದ ಕುಮಾರ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ತಿರುಪತಿ ಗುರುವಾರ ಲಂಚದ ಹಣವನ್ನು ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ರೂಪದಲ್ಲಿ ಪಡೆದ ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದು, ತನಿಖೆಯ ಹೊಣೆಯನ್ನು ಡಿವೈಎಸ್‌ಪಿ ಎನ್.ಮೃತ್ಯುಂಜಯ ಅವರಿಗೆ ವಹಿಸಲಾಗಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.