ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಮೋದಿ ಋಣ ತೀರಿಸುವ ಕಾತರ– ಗೋವಿಂದ ಎಂ.ಕಾರಜೋಳ

Published 19 ಏಪ್ರಿಲ್ 2024, 4:57 IST
Last Updated 19 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಮುಧೋಳ ನಿಮ್ಮ ರಾಜಕೀಯ ಕಾರ್ಯಕ್ಷೇತ್ರ. ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಏಕೆ?

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವುದು ನನ್ನ ವೈಯಕ್ತಿಕ ಆಯ್ಕೆ ಅಲ್ಲ, ಪಕ್ಷದ ಆದೇಶ. ಅನಿವಾರ್ಯ ಸಂದರ್ಭ ಎದುರಾದರೆ ವಿಜಯಪುರದಿಂದ ಕಣಕ್ಕೆ ಇಳಿಯಬೇಕಾಗಬಹುದು ಎಂಬ ಸಂದೇಶವನ್ನು ಪಕ್ಷ ಮೊದಲೇ ನೀಡಿತ್ತು. ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಸೂಚನೆಯ ಮೇರೆಗೆ ಚಿತ್ರದುರ್ಗಕ್ಕೆ ಬರಬೇಕಾಯಿತು.

ಪ್ರ

ಹಾಲಿ ಸಂಸದರು, ಕೇಂದ್ರ ಸಚಿವರೂ ಆಗಿರುವ ಎ.ನಾರಾಯಣಸ್ವಾಮಿ ಬದಲಾಗಿ ನಿಮ್ಮನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಏಕೆ?

ನಾರಾಯಣಸ್ವಾಮಿ ಅವರೇ ಅಭ್ಯರ್ಥಿಯಾಗಬೇಕು ಎಂಬುದು ಪಕ್ಷದ ಅಪೇಕ್ಷೆಯಾಗಿತ್ತು. ಆದರೆ, ಅವರು ಸ್ಪರ್ಧೆಗೆ ಹಿಂದೇಟು ಹಾಕಿದರು. ಸಮರ್ಥ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನನ್ನ ಹೆಸರು ಮುನ್ನೆಲೆಗೆ ಬಂದಿತು. ಬಹುತೇಕರಿಗೆ ಪರಿಚಿತವಾಗಿರುವ ವ್ಯಕ್ತಿ ಹುರಿಯಾಳಾದರೆ ಅನುಕೂಲ ಎಂಬುದು ಪಕ್ಷದ ಲೆಕ್ಕಾಚಾರ. ಹಾಲಿ ಸಂಸದರು, ಮಾಜಿ ಶಾಸಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರು ನನ್ನ ಹೆಸರು ಸೂಚಿಸಿದ್ದರಿಂದ ಸ್ಪರ್ಧೆ ಅನಿವಾರ್ಯವಾಯಿತು.

ಪ್ರ

ಟಿಕೆಟ್‌ ಪಡೆದು ಕ್ಷೇತ್ರ ಪ್ರವೇಶಿಸಿದಾಗ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿತ್ತು. ನಾಯಕರ ಬಂಡಾಯ ಶಮನವಾಗಿದೆಯೇ?

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಸಹಜವಾಗಿ ಹುಟ್ಟಿಕೊಂಡಿತ್ತು. ಪುತ್ರನ ಆಸೆ ಈಡೇರಿಸುವುದು ತಂದೆಯ ಕರ್ತವ್ಯ ಕೂಡ ಹೌದು. ಅವರ ತಕರಾರನ್ನು ತಪ್ಪು ಎಂದು ಹೇಳಲಾಗದು. ಚಂದ್ರಪ್ಪ ಮತ್ತು ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ರಾಜಕಾರಣದಲ್ಲಿ ಒಟ್ಟಿಗೆ ಬೆಳೆದವರು. ಈಗ ಎಲ್ಲವೂ ಸರಿ ಹೋಗಿದೆ. ನನ್ನ ಪರ ಎಲ್ಲರೂ ಕೆಲಸ ಮಾಡುತ್ತಿದ್ದಾರೆ.

ಪ್ರ

ಹಲವು ಬಾರಿ ಶಾಸಕರಾಗಿದ್ದ ನೀವು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದೀರಿ. ಮತದಾರರು ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಲ್ಲಿ 56 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ಭ್ರಷ್ಟಾಚಾರ, ಹಗರಣ ಹೆಚ್ಚಾಗಿದ್ದವು. ದೇಶದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಭಾರತದ ಕುರಿತು ವಿಶ್ವ ಮಟ್ಟದಲ್ಲಿ ತಪ್ಪು ಗ್ರಹಿಕೆ ಇತ್ತು. ಇದನ್ನು ಹೋಗಲಾಡಿಸಿ ಭಾರತೀಯರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು ಪ್ರಧಾನಿ ನರೇಂದ್ರ ಮೋದಿ. ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆ ಸುಧಾರಣೆಯಾಗಿದೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬೇಕು.

ಪ್ರ

ನೀವು ಕ್ಷೇತ್ರದ ಹೊರಗಿನವರು ಎಂಬ ಆರೋಪವಿದೆ. 500 ಕಿ.ಮೀ. ದೂರದವರು ಎಂದು ಕಾಂಗ್ರೆಸ್‌ ಟೀಕಿಸುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಸಿದ್ದರಾಮಯ್ಯ ಅವರು ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತರು. ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನ. ಆಗ ನೀವು ಹೊರಗಿವರು ಎಂದು ಗೊತ್ತಿರಲಿಲ್ಲವೇ? ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ರಾಹುಲ್‌ ಗಾಂಧಿ ಕೇರಳಕ್ಕೆ ಬಂದು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಎಲ್ಲಿ ಸ್ಪರ್ಧಿಸಿದರೂ ನಡೆಯುತ್ತದೆ. ಆದರೆ, ಬಿಜೆಪಿಗರಿಗೆ ಮಾತ್ರ ಆರೋಪ ಮಾಡಲಾಗುತ್ತಿದೆ. ನಾನು ನೈಜ ಕನ್ನಡಿಗ. ರಾಜ್ಯ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸುವ ಅರ್ಹತೆ ನನಗೂ ಇದೆ.

ಪ್ರ

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದೀರಿ. ಅಭ್ಯರ್ಥಿಯಾಗಿ ಮುನ್ನೆಲೆಗೆ ಬರಲು ಹಿಂಜರಿಕೆ ಏಕೆ?

ಗುಜರಾತ್‌ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 23 ವರ್ಷಗಳಿಂದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇಷ್ಟು ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪ ಅವರ ವಿರುದ್ಧ ಕೇಳಿಬಂದಿಲ್ಲ. ಕೋವಿಡ್‌ ಸಂದರ್ಭದಲ್ಲಿ ಭಾರತೀಯರನ್ನು ರಕ್ಷಣೆ ಮಾಡಿದ್ದಾರೆ. ಈ ಋಣ ತೀರಿಸುವ ಭಾವನೆ ಜನರಲ್ಲಿದೆ. ಹೀಗಾಗಿ, ಇಡೀ ದೇಶದ ಎಲ್ಲ ಕ್ಷೇತ್ರಗಳಿಗೂ ಮೋದಿ ಅವರೇ ಬಿಜೆಪಿ ಅಭ್ಯರ್ಥಿ.

Cut-off box - * ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹ 5300 ಕೋಟಿ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದನ್ನು ಕಾಂಗ್ರೆಸ್‌ ಚುನಾವಣಾ ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಕೇಂದ್ರದ ಈ ವಿಳಂಬ ನಿಮಗೆ ಮುಳುವಾಗುವುದಿಲ್ಲವೇ? 2013–18ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಮೀಸಲಿಟ್ಟ ಸರಾಸರಿ ಅನುದಾನ ₹ 200 ಕೋಟಿ. ನಾನು ನೀರಾವರಿ ಸಚಿವನಾಗಿದ್ದಾಗ ಒಮ್ಮೆ ₹ 1100 ಕೋಟಿ ಹಾಗೂ ಮತ್ತೊಮ್ಮೆ ₹ 2700 ಕೋಟಿ ಬಿಡುಗಡೆ ಮಾಡಿದ್ದೇನೆ. ಇದೊಂದು ರಾಷ್ಟ್ರೀಯ ಯೋಜನೆಯಾಗಬೇಕು ಎಂಬ ಉದ್ದೇಶದಿಂದ ಪ್ರಕ್ರಿಯೆ ಶುರು ಮಾಡಿದ್ದು ನನ್ನ ಅವಧಿಯಲ್ಲಿಯೇ. ಇದರ ಪರಿಣಾಮವಾಗಿಯೇ ಕೇಂದ್ರ ಸರ್ಕಾರ ₹ 5300 ಕೋಟಿ ಅನುದಾನ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಸರಿಯಾದ ದಾಖಲೆಗಳನ್ನು ಒದಗಿಸದೇ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ಜನ ಎಲ್ಲವನ್ನೂ ಗಮನಿಸುತ್ತಾರೆ.

Cut-off box - ಉಪಮುಖ್ಯಮಂತ್ರಿ ನೀರಾವರಿ ಸಮಾಜಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯನ್ನು ಚಿತ್ರದುರ್ಗ ಕ್ಷೇತ್ರದಿಂದ ಎದುರಿಸುತ್ತಿದ್ದಾರೆ. ಕ್ಷೇತ್ರಕ್ಕೆ ಹೊಸಬರಾದರೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ನೀರಾವರಿ ಸೌಲಭ್ಯದ ಕುರಿತು ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT