ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗಳಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿ: ಸಚಿವ ನಾರಾಯಣಸ್ವಾಮಿ

Published 8 ಜನವರಿ 2024, 16:18 IST
Last Updated 8 ಜನವರಿ 2024, 16:18 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ವಿಳಂಬ, ಅವೈಜ್ಞಾನಿಕ ಮಾದರಿ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೇಸರ ಹೊರ ಹಾಕಿದ್ದಾರೆ. ನೀವುಗಳು ಮಾಡುತ್ತಿರುವ ಕಾರ್ಯ ನವದೆಹಲಿಯಲ್ಲೂ ಚರ್ಚೆಯಾಗುತ್ತಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಹೆದ್ದಾರಿ ಕಾಮಗಾರಿ ವೇಗವಾಗಿ ಸಾಗಲು ಜಿಲ್ಲೆಯಲ್ಲಿ ಅಸಹಕಾರ ವ್ಯಕ್ತವಾಗಿದೆ ಎಂಬ ಮಾತು ನವದೆಹಲಿಯಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಾಮಗಾರಿ ವಿಚಾರದಲ್ಲಿ ಮಾಫಿಯಾ ನಡೆಯುತ್ತಿದಿಯೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಮೊಳಕಾಲ್ಮುರು ತಾಲ್ಲೂಕು ಬಿ.ಜೆ.ಕೆರೆ ಹಾಗೂ ತಳಕು ಹೋಬಳಿಯ ಗಿರಿಯಮ್ಮನಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮಸ್ಥರು ರಸ್ತೆ ದಾಟಲು ಸೂಕ್ತ ಕೆಳಸೇತುವೆ ಇಲ್ಲದೇ ಸಂಕಷ್ಟ ಅನುಭಸುತ್ತಿದ್ದಾರೆ. ಬಿ.ಜಿ.ಕೆರೆ ಬಳಿ ಒಂದು ವರ್ಷದಲ್ಲಿ 6 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಸಚಿವರ ಗಮನಕ್ಕೆ ತಂದರು.

‘ಅಪಘಾತವಾದಾಗ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುತ್ತಿದೆ. 3 ಅಪಘಾತ ವಲಯಗಳಲ್ಲಿ ಸ್ಥಳೀಯರು ಹೆಚ್ಚು ಮೃತಪಡುತ್ತಿದ್ದಾರೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರದಿಂದ ಸಮಸ್ಯೆ ಪರಿಹಾರಕ್ಕೆ ಹಾಗೂ ಅಪಘಾತ ತಡೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೌರವ್ ಮಾತನಾಡಿ, ‘ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಬಿ.ಜಿ.ಕೆರೆ ಬಳಿ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು 2 ತಿಂಗಳು ಬೇಕಿದೆ. ನಂತರ 4 ತಿಂಗಳ ಅವಧಿಯಲ್ಲಿ ಸೇತುವೆ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅಹವಾಲುಗಳು ನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿವೆ. ನಗರದ ಪಿಳ್ಳೆಕೇರೆನಹಳ್ಳಿ ಬಳಿ ಕೂಡ ಶಾಲಾ ಮಕ್ಕಳು ರಸ್ತೆ ದಾಟುತ್ತಾರೆ. ಇಲ್ಲಿಯೂ ಒಂದು ಕೆಳ ಸೇತುವ ನಿರ್ಮಿಸಬೇಕು. ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ’ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಅಧಿಕಾರಿಗಳಿಗೆ ಸೂಚಿಸಿದರು.

‘ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಮಾದರಿ ಅನುಸರಿಸಿ ಜನರಿಗೆ ಸಮಸ್ಯೆ ಜತೆ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಬೇಡಿ. ನೀವು ಮಾಡುವ ಕೆಲಸಕ್ಕೆ ನಾವು ಉತ್ತರಿಸಬೇಕು. ಹೊಸದುರ್ಗ– ಹೊಳಲ್ಕೆರೆ ಹಾಗೂ ಹಿರಿಯೂರು– ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗಾಗಲೇ ನಿಗದಿತ ಕಾಲಾವಧಿ ಮುಗಿದಿದೆ. ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ಕೂಡಲೇ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜತೆಗೆ ಸ್ಕೈವಾಕ್‌ ನಿರ್ಮಿಸಿ’ ಎಂದು ಸಚಿವರು ತಾಕೀತು ಮಾಡಿದರು.

‘ಆದರ್ಶ ಗ್ರಾಮಗಳಿಗೆ ನರೇಗಾ ಯೋಜನೆಯಡಿ ಒಗ್ಗೂಡಿಸಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಆದರೆ ಜಿಲ್ಲೆಯಲ್ಲಿ ಈ ಕಾರ್ಯ ಆಗಿಲ್ಲ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಯೋಜನೆಯಡಿ 97 ಆದರ್ಶ ಗ್ರಾಮಗಳಲ್ಲಿ 710, ಪರಿಶಿಷ್ಟ ಪಂಗಡ ಯೋಜನೆಯಡಿ 34 ಗ್ರಾಮಗಳಲ್ಲಿ 206 ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಕಾಮಗಾರಿ ಕೈಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರಂಗಸ್ವಾಮಿ ಇದ್ದರು.

ಎಲ್ಲ ಹಂತದ ಅಧಿಕಾರಿಗಳು ಕಚೇರಿಯಿಂದ ಹೊರ ಬಂದು ಜನರ ನಡುವೆ ಕೆಲಸ ಮಾಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ನಿಮ್ಮ ನಿರ್ಲಕ್ಷ್ಯದಿಂದ ಅನುದಾನ ವ್ಯರ್ಥವಾದರೆ ಯಾರು ಜವಾಬ್ದಾರಿ. ಇದರಲ್ಲಿ ನಾವು ಅಪರಾಧಿಗಳಾಗುತ್ತೇವೆ.
ಎ.ನಾರಾಯಣಸ್ವಾಮಿ ಕೇಂದ್ರ ಸಚಿವ
ರಾಜಕೀಯ ನಿರಾಸಕ್ತಿ ಮೂಡಿದೆ
ನೀವು ಮಾಡುತ್ತಿರುವ ಕೆಲಸ ನೋಡಿ ಸಾಕಾಗಿದೆ. ಒಂದು ಚಿಕ್ಕ ಮಾಹಿತಿ ಇಲ್ಲದೆ ಸಭೆಗೆ ಬರುತ್ತೀರ. ನಿಮ್ಮ ವರ್ತನೆಯಿಂದ ನನಗೆ ರಾಜಕೀಯದಲ್ಲೇ ನಿರಾಸಕ್ತಿ ಮೂಡಿದೆ’ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು. ಸಂಸದರ ಆದರ್ಶ ಗ್ರಾಮಗಳ ಕುರಿತು ಸಚಿವರು ಕೇಳಿದ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸರಿಯಾಗಿ ನೀಡಲಿಲ್ಲ. ‘ನಿಮ್ಮ ಈ ರೀತಿಯ ವರ್ತನೆ ಜಿಲ್ಲಾಡಳಿತಕ್ಕೆ ಮಾತ್ರ ಅಲ್ಲ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ ಸಚಿವರು ಸಂಸದರು ಎಲ್ಲರಿಗೂ ಜನ ಬೆರಳಿಟ್ಟು ಮಾತನಾಡುವಂತೆ ಆಗುತ್ತದೆ’ ಎಂದು ಗರಂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT