ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಒಕ್ಕಲಿಗರೇ ಗೆಲ್ಲುವಂತೆ ನೋಡಿಕೊಳ್ಳಿ: ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಲಹೆ
Last Updated 19 ಆಗಸ್ಟ್ 2022, 4:05 IST
ಅಕ್ಷರ ಗಾತ್ರ

ಹಿರಿಯೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಒಕ್ಕಲಿಗರೇ ಗೆಲ್ಲುವಂತೆ ನೋಡಿಕೊಳ್ಳಿ. ಇತರ ಸಮುದಾಯದ ಬಂಧುಗಳು ಒಕ್ಕಲಿಗರ ಜೊತೆ ಕೈಜೋಡಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ನಗರದ ನೆಹರೂ ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ತಾಲ್ಲೂಕು ಒಕ್ಕಲಿಗರ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ಜನಾಂಗದವರಿಗೆ ಮೀಸಲಾತಿ ನೀಡಿದರು. ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಯಾದವ ಹಾಗೂ ತುಮಕೂರು ಕ್ಷೇತ್ರದಿಂದ ಕುರುಬ ಸಮಾಜದ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇವೆ. ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಹೊರಗಿನವರೇ ಹೆಚ್ಚಾಗಿ ಪ್ರತಿನಿಧಿಸಿದ್ದಾರೆ. ಇಲ್ಲಿ ಒಕ್ಕಲಿಗರೇ ಗೆದ್ದರೆ ಅನುಕೂಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ರೈತರ ಸಾಲಮನ್ನಾ, ಸಾರಾಯಿ ನಿಷೇಧ, ವೃದ್ಧರು, ವಿಧವೆಯರ ಪಿಂಚಣಿ ಹೆಚ್ಚಳ ಮಾಡಿದ್ದೇನೆ. ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ ಕೊಟ್ಟಿರುವ ತೃಪ್ತಿ ಇದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂದು ತೋರಿಸುತ್ತೇವೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ರಾಷ್ಟ್ರಕವಿ ಕುವೆಂಪು ಬುಡಕ್ಕೇ ಸರ್ಕಾರ ಕೈಹಾಕಿ ಪಠ್ಯ ಬದಲಿಸುವ ಕೆಲಸ ಮಾಡಿದೆ. ಕುಮಾರಸ್ವಾಮಿ ಮತ್ತು ನಾನು ಇಬ್ಬರೂ ಈ ವಿಷಯವನ್ನು ಅಧಿವೇಶನದಲ್ಲಿ ನೋಡಿಕೊಳ್ಳುತ್ತೇವೆ. ಶಾಂತಿಯ ತೋಟವನ್ನು ಕದಡುವ ಅವಕಾಶ ಕೊಡುವುದಿಲ್ಲ. ಯಾವ ವೃತ್ತಿಯವರನ್ನೂ ಅಗೌರವದಿಂದ ಕಾಣಬಾರದು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಎಲ್ಲರೂ ಬದುಕಬೇಕು’ ಎಂದು ನುಡಿದರು.

‘ಪಾವಗಡದ ಬಳಿ 15 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಿದೆ. ರೈತರನ್ನು ಅದಕ್ಕೆ ಪಾಲುದಾರರನ್ನಾಗಿಸಿದ್ದೆ. ಅದರ ಪರಿಣಾಮ ಪ್ರತಿ ವರ್ಷ ಎಕರೆಗೆ ₹ 24 ಸಾವಿರ ರೈತರ ಖಾತೆ ಸೇರುತ್ತಿದೆ. ಇದರಲ್ಲೂ ತಪ್ಪು ಹುಡುಕುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ಪಟ್ಟನಾಯಕನ ಹಳ್ಳಿಯ ನಂಜಾವಧೂತ ಸ್ವಾಮೀಜಿ, ‘ಒಬಿಸಿ ವಿಚಾರ ಇಟ್ಟುಕೊಂಡು ಕುಂಚಿಟಿಗರು ಮತ್ತು ಒಕ್ಕಲಿಗರನ್ನು ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿರುವುದು ನೋವಿನ ಸಂಗತಿ. ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕುಂಚಿಟಿಗರು–ಒಕ್ಕಲಿಗರು ಬೇರೆಯಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಕುಂಚಿಟಿಗರಿಗೆ ಮೀಸಲಾತಿ ಕೊಡಿಸುವ ಹೋರಾಟಕ್ಕೆ ತಾವು ಬದ್ಧ’ ಎಂದು ಘೋಷಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ, ಎಂ.ಜಯಣ್ಣ ಮಾತನಾಡಿದರು. ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುರಳೀಧರ ಹಾಲಪ್ಪ, ಕೇಶವಮೂರ್ತಿ, ಕೋನರೆಡ್ಡಿ, ಅಭಿಜಿತ್ ಗೌಡ, ಉಮಾಪತಿ ಇದ್ದರು.

...

‘ಸಂಸ್ಕಾರ ಕೊಡಿಸುವ ಕೆಲಸ ಮಾಡಿ’

ನಮ್ಮಲ್ಲಿ ಆದರ್ಶಗಳ ಕೊರತೆ ಇದೆ. ಹಿರಿಯರು ಜಗತ್ತಿಗೆ ಕೊಡುವಷ್ಟು ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ನಾವು ಏನೇ ಸಾಧನೆ ಮಾಡಿದರೂ ಅದನ್ನು ಜಗತ್ತಿಗೆ ತೋರಿಸುವ ಕೆಲಸ ಮಾಡಬೇಕು ಎಂದು ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

‘ಭಾರತೀಯ ವಿಜ್ಞಾನ ಸಂಸ್ಥೆ ಸಂಶೋಧನೆಯಲ್ಲಿ ಜಗತ್ತು ಅಚ್ಚರಿಪಡುHವ ಸಾಧನೆ ಮಾಡಿದ್ದರೂ ತೋರಿಸುವ ಪ್ರಯತ್ನ ಮಾಡದ ಕಾರಣ ಇಂದಿಗೂ ಶ್ರೇಷ್ಠ ಸಂಶೋಧನಾ ಸಂಸ್ಥೆಗಳ ಮೊದಲ ಹತ್ತರ ಪಟ್ಟಿಯಲ್ಲಿ ಅದು ಸೇರಿಲ್ಲ. ರೈತರು ತಮ್ಮ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡಿಸುವ ಕೆಲಸ ಮಾಡಿದಲ್ಲಿ ಮಾತ್ರ ತಲೆ ಎತ್ತಿ ನಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT