ಮೊಳಕಾಲ್ಮುರು: ‘ಎತ್ತ ನೋಡಿದರೂ ಜನಸಾಗರ, ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ...
-ಇದು ವಿಧಾನಸಭಾ ಕ್ಷೇತ್ರದ ಚಳ್ಳಕೆರೆ ತಾಲ್ಲೂಕಿನ ಗಡಿಗ್ರಾಮವಾದ ಗೌರಸಮುದ್ರದ ತುಂಬಲು ಎಂಬಲ್ಲಿ ಮಂಗಳವಾರ ಜರುಗಿದ ಮಾರಮ್ಮದೇವಿ ಜಾತ್ರೆಯ ಚಿತ್ರಣ.
ಪ್ರತಿವರ್ಷ ಶ್ರಾವಣವಾಸದ ಕೊನೆಯ ಅಮವಾಸ್ಯೆ ನಂತರ ಬರುವ ಮಂಗಳವಾರ ನಡೆಸಿಕೊಂಡು ಬರುವ ಮಾರಮ್ಮದೇವಿ ಜಾತ್ರೆಗೆ ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಬೆಳಗಿನ ಜಾವದಿಂದಲೇ ಭಕ್ತರು ತುಂಬಲು ಕಟ್ಟೆಯನ್ನು ಪ್ರದಕ್ಷಿಣೆ ಹಾಕಿದರು. ಸಂಜೆ ತನಕವೂ ಅಪಾರ ಭಕ್ತರು ದರ್ಶನ ಪಡೆದು ಹಕರೆ ತೀರಿಸಿದರು.
ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ದೇವಿ ಮೂಲವಿಗ್ರಹವನ್ನು 4 ಕಿ.ಮೀ. ದೂರದ ತುಂಬಲು ಎಂಬಲ್ಲಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲು ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಹರಕೆಹೊತ್ತ ಭಕ್ತರು ಕೋಳಿ, ಮೆಣಸು, ವಿವಿಧ ಧಾನ್ಯ, ಈರುಳ್ಳಿಯನ್ನು ತೂರಿದರು. ಉರುಮೆ, ಚಾಮರ, ತಪ್ಪಡೆ, ಡೊಳ್ಳು ವಾದ್ಯಗಳು ಸೇರಿದಂತೆ ಹತ್ತಾರು ಬುಡಕಟ್ಟು ಸಂಸ್ಕೃತಿಗಳು ಗಮನ ಸೆಳೆದವು.
ತೂರಿದ ಮೆಣಸು ಆರಿಸಿಕೊಂಡು ಅನೇಕರು ಮನೆಗೆ ತೆಗೆದುಕೊಂಡು ಹೋದರು. ಅದನ್ನು ಬಳಸಿದರೆ ಚರ್ಮವ್ಯಾಧಿ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆಯಿದೆ. ದೇವಿ ತುಂಬಲು ಪ್ರದೇಶ ಪ್ರವೇಶ ಮಾಡುತ್ತಿದ್ದಂತೆಯೇ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ತುಂಬಲು ಕಟ್ಟೆಗೆ ಆಗಮಿಸಿ ಕಟ್ಟೆಯನ್ನು ಪ್ರದಕ್ಷಿಣೆ ಹಾಕಿಸಿದ ನಂತರ ಕಟ್ಟೆಮೇಲೆ ದೇವಿ ಪ್ರತಿಷ್ಠಾಪನೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ಬೇವಿನಸೀರೆ ಹಕರೆ, ಬಾಯಿಗೆ ಬೀಗ, ದವಸ-ಧಾನ್ಯ ಅರ್ಪಣೆ, ವಸ್ತ್ರ ಅರ್ಪಿಸಿದರು. ರೈತರು ಜಾನುವಾರುಗಳನ್ನು ಕಟ್ಟೆ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಕಾಪಾಡುವಂತೆ ಪ್ರಾರ್ಥಿಸಿದರು.
ಮಧ್ಯಾಹ್ನ ವೇಳೆ ದರ್ಶನ ನೀಡುವ ಕಾರಣಕ್ಕಾಗಿ ಈ ದೇವಿಗೆ ‘ಮಧ್ಯಾಹ್ನ ಮಾರಿ’ ಎಂಬ ಹೆಸರಿಗೆ. ದೊಡ್ಡಪರಿಷೆಯಲ್ಲಿ ಮಾತ್ರ ದೇವಿಯನ್ನು ತುಂಬಲಿಗೆ ಕರೆದುಕೊಂಡು ಬರಲಾಗುತ್ತದೆ. ಮರಿಪರಿಷೆಯಲ್ಲಿ ದೇವಿ ಆಭರಣಗಳನ್ನು ಮಾತ್ರ ತರಲಾಗುತ್ತದೆ. ಜಾತ್ರೆಯು ಬಾಡೂಟಕ್ಕೆ ಖ್ಯಾತಿಯಾಗಿದೆ.
ವಾಡಿಕೆಯಂತೆ ಸಂಜೆಯಾಗುತ್ತಲೇ ತುಂಬಲಿನಲ್ಲಿ ಯಾರೂ ಉಳಿಯುವಂತಿಲ್ಲ. ಈ ಕಾರಣಕ್ಕೆ ಸಂಜೆ ವೇಳೆಗೆ ಸ್ಥಳ ಖಾಲಿಯಾಯಿತು. ಗ್ರಾಮದಲ್ಲಿ ರಾತ್ರಿ ದೇವಿ ಮೆರವಣಿಗೆ ನಡೆಯಿತು. ಬುಧವಾರ ಗ್ರಾಮದ ದೇವಸ್ಥಾನ ಎದುರು ಸಿಡಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ಆಂಧ್ರಪ್ರದೇಶದಿಂದ ಅಪಾರ ಭಕ್ತರು ಭಾಗವಹಿಸಿದ್ದರು.
ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ. ರಘುಮೂರ್ತಿ, ಮಾಜಿ ಶಾಸಕ ಬಿ. ಶ್ರೀರಾಮುಲು, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ರಾಜ್ಯ ದ್ರಾಕ್ಷಾರಸ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್‌ಬಾಬು, ಕಾರ್ಮಿಕ ಮಂಡಳಿ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.