ಶನಿವಾರ, ಸೆಪ್ಟೆಂಬರ್ 18, 2021
30 °C
‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಅಂಬಲಿ ದಾಸೋಹಕ್ಕೆ ಮಾರುಹೋಗದ ಶರಣರಿಲ್ಲ: ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಆದರ್ಶಕ್ಕೆ ಕಟ್ಟುಬಿದ್ದವರು ಸರಳತೆ ರೂಢಿಸಿಕೊಳ್ಳುವರು ಎನ್ನುವುದಕ್ಕೆ ಶರಣೆ ಮೋಳಿಗೆ ಮಹಾದೇವಮ್ಮ ಬದುಕೇ ಸಾಕ್ಷಿ. ಇವರ ಅಂಬಲಿಯ ದಾಸೋಹಕ್ಕೆ ಮಾರುಹೋಗದ ಶರಣರಿಲ್ಲ. ಇವರು ಕಾಶ್ಮೀರದಲ್ಲಿ ರಾಣಿಯಾಗಿದ್ದು, ನಂತರ ಕಲ್ಯಾಣಕ್ಕೆ ಬಂದು ನಿಜ ಶರಣೆಯಾಗಿ ಬದುಕಿದ್ದೇ ಒಂದು ಪವಾಡ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದ 13ನೇ ದಿನವಾದ ಶುಕ್ರವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾದೇವಿ ಕಾಶ್ಮೀರದ ಮಾಂಡವ್ಯಪುರದ ರಾಜ ಮಹದೇವ ಭೂಪಾಲನ ಧರ್ಮಪತ್ನಿ. ಹೆಸರು ಗಂಗಾಂಬಿಕೆ. ಕಲ್ಯಾಣದ ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದ ಈ ದಂಪತಿ ರಾಜ್ಯದ ಅಧಿಕಾರವನ್ನು ಮಗನಿಗೆ ವಹಿಸಿ ಸಾಮಾನ್ಯರಂತೆ ಕಲ್ಯಾಣಕ್ಕೆ ಬರುವರು. ಕಲ್ಯಾಣದಲ್ಲಿ ಕಾಯಕಶೀಲರಿಗೆ ಮಾತ್ರ ಮಾನ್ಯತೆ ಎನ್ನುವುದನ್ನು ಅರಿತ ಇವರು ಸಾಮಾನ್ಯರ ಹಾಗೆ ಗುಡಿಸಲು ಕಟ್ಟಿಕೊಂಡು, ಕಟ್ಟಿಗೆ ಕಡಿದು ಮಾರುವ ಕಾಯಕ ಮಾಡುವರು. ಹೀಗಾಗಿ ಇವರಿಗೆ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಮ್ಮ ಎನ್ನುವ ಹೆಸರು ಬಂದಿದೆ’ ಎಂದು ತಿಳಿಸಿದರು.

‘ಮಹಾದೇವಮ್ಮ ಕನ್ನಡ ಕಲಿತು 70 ವಚನಗಳನ್ನು ರಚಿಸಿದ್ದಾರೆ. ಎನ್ನಯ್ಯ ಪ್ರಿಯ ನಿಃಕಳಂಕ ಮಲ್ಲಿಕಾರ್ಜುನ ಎನ್ನುವುದು ಇವರ ಅಂಕಿತ. ಇವರ ವಚನಗಳಲ್ಲಿ ಲಿಂಗಾಂಗ ಸಮರಸದ ಸುಖವನ್ನು, ಭಕ್ತಿಯ ವಿಚಾರವನ್ನು ಪ್ರಸ್ತಾಪಿಸುವರು. ಅಲ್ಲದೇ ಶ್ರದ್ಧೆ, ಭಕ್ತಿ, ನಿಷ್ಠೆಗಳಿಲ್ಲದ ಪೂಜೆ ವ್ಯರ್ಥ, ಯಾಂತ್ರಿಕ ಆಚರಣೆಗಳಿಗಿಂತ ಆಂತರಿಕ ಪಕ್ವತೆ ಮುಖ್ಯ. ಸಂಸಾರದ ಭ್ರಮೆಯಿಂದ ಹೊರಬಂದು ಪರಮಜ್ಞಾನಿಗಳಾಗಿ ಪರಮ ಚೈತನ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಜ ಸುಖವಿದೆ. ಪೂಜೆ ಯಾಂತ್ರಿಕೆಯಾಗದೆ ಸರ್ವಾಂಗವೂ ಲಿಂಗವಾಗಬೇಕು. ಜ್ಞಾನ ಮತ್ತು ಕ್ರಿಯೆ ಒಂದಾಗಬೇಕು ಎನ್ನುವ ಸಂದೇಶಗಳೊಂದಿಗೆ ಡಾಂಭಿಕ ಭಕ್ತಿಯ ವಿಡಂಬನೆಯೂ ಇದೆ’ ಎಂದು ವಿಶ್ಲೇಷಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ ಮೋಳಿಗೆ ಮಹಾದೇವಿ ವಿಷಯ ಕುರಿತು ಹುಬ್ಬಳ್ಳಿಯ ಲೇಖಕಿ ಸುನಂದಾ ಕಡಮೆ, ‘ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಮ್ಮ ಅವರ ಮೇಲೆ ಶರಣರ ಚಿಂತನೆ ಗಾಢಪರಿಣಾಮ ಬೀರಿತ್ತು. ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದ್ದನ್ನು ದಾಸೋಹಕ್ಕೆ ಉಪಯೋಗಿಸಬೇಕು ಎನ್ನುವ ಶರಣರ ತತ್ವ ಸಿದ್ಧಾಂತಕ್ಕನುಗುಣವಾಗಿ ಅಂಬಲಿ ದಾಸೋಹವನ್ನು ಕೈಗೊಂಡರು’ ಎಂದು ವಿವರಿಸಿದರು.

ಅರಕಲಗೂಡು ಮಧುಸೂದನ್ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಡಿ.ಎಸ್‌. ಸುಪ್ರಭೆ ಹಾಗೂ ಡಿ.ಜೆ. ಮುಕ್ತ ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.