ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಸಾಗರಕ್ಕೆ ಕಾಲುವೆಯಲ್ಲಿ ಹರಿಯಲಿದೆ ಭದ್ರೆ ನೀರು

ಅಚ್ಚುಕಟ್ಟು ರೈತರು ಹಾಗೂ ಯೋಜನೆ ಎಂಜಿನಿಯರ್‌ಗಳ ಸಭೆ
Last Updated 19 ಜನವರಿ 2021, 1:41 IST
ಅಕ್ಷರ ಗಾತ್ರ

ಹಿರಿಯೂರು: ‘ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ರಾಘವನ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಅಚ್ಚುಕಟ್ಟು ರೈತರು ಹಾಗೂ ಯೋಜನೆ ಎಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಮಾರ್ಚ್ 31ರವರೆಗೆ ಭದ್ರಾದಿಂದ ವಾಣಿವಿಲಾಸಕ್ಕೆ ನೀರು ಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದರೂ ಜ. 2ರಂದು ನೀರು ನಿಲ್ಲಿಸಿದ್ದು ಏಕೆ, ಪ್ಯಾಕೇಜ್ ಒಂದರ ಕಾಮಗಾರಿ ವಿಳಂಬಕ್ಕೆ ಕಾರಣವೇನು, ಅದು ಯಾವಾಗ ಪೂರ್ಣಗೊಳ್ಳುತ್ತದೆ, ವೈ ಜಂಕ್ಷನ್‌ನಿಂದ ಮುಂದಕ್ಕೆ ತುಮಕೂರು ಮತ್ತು ಚಿತ್ರದುರ್ಗ ಶಾಖಾ ನಾಲೆಗಳ ನಿರ್ಮಾಣಕ್ಕೆ ಬೇಕಿರುವ ಭೂಸ್ವಾಧೀನ ಪ್ರಕ್ರಿಯೆ ತಡವಾಗುತ್ತಿರುವುದು ಏಕೆ, ವಾಣಿವಿಲಾಸ ಜಲಪಾತ್ರೆ ಭರ್ತಿಗೆ ಪರ್ಯಾಯ ಮಾರ್ಗಗಳು ಇವೆಯೇ, ಎಂಬ ರೈತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ ನೀರನ್ನು ಜೂನ್ 15ರಿಂದ ಅ. 15ರ ಒಳಗೆ ಪಡೆಯಲು ಅಡ್ಡಿ ಇಲ್ಲ. 2021 ಮಾರ್ಚ್‌ವರೆಗೆ ಹರಿಸಬೇಕೆಂಬ ಉದ್ದೇಶವಿತ್ತು. ಕಾಡಾ ಸಭೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ನಿಲ್ಲಿಸಿದ್ದೇವೆ. ಈ ವರ್ಷ ಜೂನ್ 15ಕ್ಕೆ ಮೂರು ಪಂಪ್ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳುತ್ತೇವೆ. ಯೋಜನೆ ಕಾಮಗಾರಿ ಮುಗಿಯುವವರೆಗೆ ಎಲ್ಲ ನೀರು ವಾಣಿವಿಲಾಸಕ್ಕೆ ಬರುತ್ತದೆ’ ಎಂದು ರಾಘವನ್ ವಿವರಿಸಿದರು.

‘ತುಂಗಾದಿಂದ 17.40 ಟಿಎಂಸಿ ಅಡಿ ನೀರು ಹರಿಸುವ ಮೊದಲ ಪ್ಯಾಕೇಜ್ ಕಾಮಗಾರಿ ಅರಣ್ಯ, ಪರಿಸರ ಇಲಾಖೆ ಕಾರಣದಿಂದ ತಡವಾಗಿದೆ. ತೆರೆದ ನಾಲೆ ಬದಲು ಹೊಸದಾಗಿ 500 ಮೀಟರ್‌ ಸುರಂಗ ಮಾರ್ಗ ನಿರ್ಮಿಸಬೇಕಿದೆ. 2 ಪಂಪ್‌ಹೌಸ್‌ಗಳಲ್ಲಿ ಒಂದು ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನೊಂದು ಪ್ರಗತಿಯಲ್ಲಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಯೋಜನೆಗೆ ಬೇಕಿರುವ ಭೂಸ್ವಾಧೀನಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ವಾಣಿವಿಲಾಸ ಜಲಾಶಯವನ್ನು ಉತ್ತಮ ಪ್ರವಾಸಿ ತಾಣವನ್ನಾಗಿಸಬೇಕು. ಅಲ್ಲಿನ ಉದ್ಯಾನಗಳಿಗೆ ಕಾಯಕಲ್ಪ ನೀಡಿ. ಶೌಚಾಲಯ ವ್ಯವಸ್ಥೆ ಮಾಡಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಸ್ಥಾಪನೆಗೆ ಜಾಗ ಗುರುತಿಸಿ. ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕುರಿತು ಕ್ಯಾಲೆಂಡರ್ ತಯಾರಿಸಿ’ ಎಂದು ಅವರು ಸೂಚಿಸಿದರು.

ಶಿರಾ ಶಾಸಕ ಡಾ.ರಾಜೇಶ್ ಗೌಡ, ‘ನನ್ನ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಬಗ್ಗೆ ಮಾಹಿತಿ ಕೊರತೆ ಇದೆ. ಹೇಮಾವತಿಯ ನೀರನ್ನು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಮದಲೂರು ಕೆರೆಗೆ ಹರಿಸಿದ್ದೇವೆ. ಇದರಿಂದ 60 ಹಳ್ಳಿಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಭದ್ರಾದಿಂದ 65 ಕೆರೆಗಳಿಗೆ ಪೈಪ್‌ಲೈನ್ ಮೂಲಕನೀರು ತುಂಬಿಸಲಾಗುತ್ತಿದೆ’ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಪ್ಯಾಕೇಜ್ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವವರೆಗೆ ಅಲ್ಲಿನ ನೀರನ್ನು ವಾಣಿವಿಲಾಸಕ್ಕೆ ತರಲು ಶಾಸಕರು ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಡಿ.ಟಿ.ಶ್ರೀನಿವಾಸ್, ಕಸವನಹಳ್ಳಿ ರಮೇಶ್, ಎಸ್.ಬಿ.ಶಿವಕುಮಾರ್, ಎಚ್.ಆರ್.ತಿಮ್ಮಯ್ಯ, ಕೆ.ಟಿ.ತಿಪ್ಪೇಸ್ವಾಮಿ, ಸಿ.ಸಿದ್ದರಾಮಣ್ಣ, ನಾರಾಯಣಾಚಾರ್, ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್, ತಹಶೀಲ್ದಾರ್ ಸತ್ಯನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT