ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಂಗಸಂದ್ರ: ಮಕ್ಕಳ ಕಲಿಕೆಗೆ ಆಸರೆಯಾದ ರಾತ್ರಿ ಪಾಠ

ಶಾಲೆಯ ಅತ್ಯುತ್ತಮ ಸಾಧನೆಗೆ ಹಲವು ಪ್ರಶಸ್ತಿಗಳ ಗರಿ
Last Updated 5 ಅಕ್ಟೋಬರ್ 2021, 6:13 IST
ಅಕ್ಷರ ಗಾತ್ರ

ಮೆಂಗಸಂದ್ರ (ಹೊಸದುರ್ಗ): ಗ್ರಾಮದ ಭೈರೇದೇವರ ಸಮಿತಿಯವರು ಊರಿನ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 4 ಎಕರೆ ನೆರವು ನೀಡಿದ್ದರಿಂದ ಪುಟ್ಟಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಯೊಂದು ಇನ್ನಿತರ ಶಾಲೆಗಳಿಗೆ ಮಾದರಿ ಆಗುವಂತೆ ಅರಳಿ ನಿಂತಿದೆ. ಇಲ್ಲಿಯ ಶಿಕ್ಷಕರು ನಡೆಸುತ್ತಿರುವ ರಾತ್ರಿ ಪಾಠವು ಮಕ್ಕಳ ಉನ್ನತ ಕಲಿಕೆಗೆಆಸರೆಯಾಗಿದೆ.

ಸುಮಾರು 200 ಮನೆ, 1,700 ಜನಸಂಖ್ಯೆ ಇರುವ ಮೂಲಸೌಕರ್ಯ ವಂಚಿತ ಕುಗ್ರಾಮವಿದು. ಹಿಂದುಳಿದ ವರ್ಗದವರೇ ನೆಲೆಸಿರುವ ಇಲ್ಲಿಯ ಜನರಿಗೆ ಕೃಷಿ ಮುಖ್ಯ ಕಸುಬಾಗಿದ್ದು, ಬಡವರು ಹೆಚ್ಚಾಗಿದ್ದಾರೆ. ಈ ಗ್ರಾಮದ ಜನರಿಗೆ ಸುಸಜ್ಜಿತ ರಸ್ತೆ ಹಾಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಆದರೂ, ಗ್ರಾಮಸ್ಥರ ಶೈಕ್ಷಣಿಕ ಕಾಳಜಿಯಿಂದ ಎಲ್ಲರನ್ನೂ ಹುಬ್ಬೇರಿಸುವ ರೀತಿಯಲ್ಲಿ ಇಲ್ಲಿಯ ಈ ಶಾಲೆ ಅಭಿವೃದ್ಧಿ ಹೊಂದುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಶಾಲೆಯ ಅತ್ಯುತ್ತಮ ಸಾಧನೆಗೆ 2013ರಲ್ಲಿ ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದಗೌಡ ಪ್ರಶಸ್ತಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ.

2007ರ ಸೆ. 24ರಂದು ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಕಟ್ಟಡದಲ್ಲಿ ಆರಂಭಗೊಂಡಿತ್ತು. ಮೆಂಗಸಂದ್ರ, ಬಾಚಾವರ, ಗೊಲ್ಲರಹಳ್ಳಿ ಹಾಗೂ ಹರೇನಹಳ್ಳಿ ಗ್ರಾಮದಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪ್ರೌಢಶಾಲೆಯ ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿ ವರ್ಷ ಉತ್ತಮ ಸಾಧನೆ ಮಾಡಿದ್ದರಿಂದ ಗ್ರಾಮಸ್ಥರಿಗೆ ಸ್ಫೂರ್ತಿಯನ್ನುಂಟು ಮಾಡಿತ್ತು. ಇಂತಹ ಶಾಲೆಯ ಸಾಧನೆಗೆ ಮನಸೋತ ಗ್ರಾಮದ ಭೈರೇದೇವರ ದೇವಸ್ಥಾನ ಸಮಿತಿಯವರು ಪ್ರತ್ಯೇಕ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಿಸಲು ಊರ ಹೊರಗಿರುವ 4 ಎಕರೆ ಜಮೀನು ಬಿಟ್ಟುಕೊಟ್ಟರು. ಆದ್ದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಈ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಸ್ಥಿರ ನಿಧಿ ಇಟ್ಟಿದ್ದಾರೆ.

ಶಾಲಾ ಕಟ್ಟಡ ಆಕರ್ಷಕವಾಗಿದ್ದು ತರಗತಿ, ಮುಖ್ಯಶಿಕ್ಷಕಿ, ಕಚೇರಿ, ಸಿಬ್ಬಂದಿ, ಕಂಪ್ಯೂಟರ್‌, ದಾಸ್ತಾನು ಕೊಠಡಿ, 2 ಸ್ಮಾರ್ಟ್‌ ಕ್ಲಾಸ್‌, ವಿಜ್ಞಾನ ಪ್ರಯೋಗಾಲಯ, ಅಡುಗೆ ಕೋಣೆ, ಶೌಚಾಲಯ, ಗ್ರಂಥಾಲಯ ಹಾಗೂ ಬಯಲು ವೇದಿಕೆ ಹೊಂದಿದೆ. ಉದ್ಯಾನ ಹಾಗೂ ವಿಶಾಲವಾದ ಆಟದ ಮೈದಾನವಿದೆ. ಶಾಲಾ ಕಟ್ಟಡದ ಗೋಡೆಗಳ ಮೇಲೆ ಬರೆಯಿಸಿರುವ ಚಿತ್ರಕಲೆ ಮೆರುಗು ನೀಡುತ್ತಿದೆ. ಮಳೆನೀರು ಇಂಗಿಸುವ ಗುಂಡಿ ನಿರ್ಮಿಸಲಾಗಿದೆ. ಸುಂದರವಾದಶಾಲಾ ಗೋಪುರನಿರ್ಮಾಣವಾಗುತ್ತಿದೆ. ವಿರಾಮದ ಅವಧಿಯಲ್ಲಿ ಮಕ್ಕಳು ಮರದಡಿ ಕಳಿತು ಓದಲು ಬೆಂಚ್‌ ವ್ಯವಸ್ಥೆಕಲ್ಪಿಸಲಾಗಿದೆ. ಮರಗಿಡಗಳನ್ನು ಬೆಳೆಸಲು ಗ್ರಾಮಸ್ಥರು ಪೈಪ್‌ಲೈನ್‌, ಹನಿ ನೀರಾವರಿ ವ್ಯವಸ್ಥೆಕಲ್ಪಿಸಿದ್ದಾರೆ. ಇದರಿಂದ ಶಾಲಾ ಆವರಣದಲ್ಲಿ ಔಷಧ ವನ ಸೇರಿ ಭಿನ್ನ ತಳಿಯ ನೂರಾರು ಸಸಿಗಳು ಬೆಳೆದಿವೆ. ಇದರಿಂದಾಗಿ ಮಲೆನಾಡಿನಂತೆ ಕಂಗೊಳಿಸುತ್ತಿರು ವುದರಿಂದ ಎಲ್ಲರ ಗಮನ ಶಾಲೆಯತ್ತಸೆಳೆಯುತ್ತಿದೆ.

ಮಕ್ಕಳು ಊರಿಗೆ ಹೋಗಲು ಆಟೊ ವ್ಯವಸ್ಥೆ

ಪ್ರಸ್ತುತ ಶಾಲೆಯಲ್ಲಿ ಮುಖ್ಯಶಿಕ್ಷಕಿ ಸೇರಿ 9 ಶಿಕ್ಷಕರು, 70 ವಿದ್ಯಾರ್ಥಿಗಳು ಇದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ನೆರವಾಗಲೆಂದು 6 ವರ್ಷಗಳಿಂದಲೂ ಇಲ್ಲಿಯ ಶಿಕ್ಷಕರು ರಾತ್ರಿ 9ರವರೆಗೂ ಶಾಲೆ ನಡೆಸುತ್ತಿದ್ದಾರೆ. ಈ ವೇಳೆ ಮಕ್ಕಳಿಗೆ ಲಘು ಉಪಾಹಾರ, ಕಾಫಿ, ಬಿಸ್ಕೆಟ್‌, ಬ್ರೆಡ್‌ ಕೊಡುತ್ತಿದ್ದಾರೆ. ರಾತ್ರಿ ಶಾಲೆ ಮುಗಿದ ನಂತರ ಊರುಗಳಿಗೆ ಹೋಗಲು ಆಟೊ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಕ್ಕೆ ಪೋಷಕರ ಸಹಕಾರ ಹೆಚ್ಚಿನದಾಗಿದೆ. ಎನ್‌ಎಂಎಂಎಸ್‌, ಎನ್‌ಟಿಎಸ್‌ಇ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ವಿಷಯವಾರು ಕ್ಲಬ್‌ ರಚಿಸಲಾಗಿದೆ. ಶಿಕ್ಷಕರು ಶ್ರಮಿಸುತ್ತಿರುವುದರಿಂದ ಶಾಲೆ ಆರಂಭವಾದ 12 ವರ್ಷಗಳಲ್ಲಿ 7 ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಗಳಿಸಿದೆ ಎಂದು ಮುಖ್ಯಶಿಕ್ಷಕಿ ಎಸ್‌. ಉಮಾದೇವಿ ತಿಳಿಸಿದರು.

...

ಶಿಕ್ಷಕರ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ನಮ್ಮ ಶಾಲೆಯು ಅತ್ಯುತ್ತಮ ಸಾಧನೆ ಮಾಡುತ್ತಿದೆ. ಕುಗ್ರಾಮವಾದ ಇಲ್ಲಿಯ ಮಕ್ಕಳ ಶೈಕ್ಷಣಿಕ ಸಾಧನೆಗೆ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಬೇಕಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ.

-ಎಂ.ಕೆ. ದಯಾನಂದ, ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ

...........

ಶಾಲೆಯ ಅಭಿವೃದ್ಧಿಗೆ ಶಿಕ್ಷಕರ ಹಾಗೂ ಸಮುದಾಯದವರ ಶ್ರಮ ಹೆಚ್ಚಿನದಾಗಿದೆ. ಊರಿನವರು ಇಟ್ಟಿರುವ ಸ್ಥಿರ ನಿಧಿಯ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಪ್ರೋತ್ಸಾಹಿಸಲಾಗುತ್ತಿದೆ.

- ಎಸ್‌. ಉಮಾದೇವಿ, ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT