ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಉತ್ತೇಜಿಸಲು ರಾಜ್ಯದಾದ್ಯಂತ ಪ್ರವಾಸ

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ
Last Updated 12 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಾಗಿ ಮತ್ತು ಸಿರಿಧಾನ್ಯ ಹೆಚ್ಚಾಗಿ ಉತ್ಪಾದಿಸಲು, ಪಡಿತರ ವ್ಯವಸ್ಥೆಯನ್ನು ಸದೃಢಗೊಳಿಸಲು ಹಾಗೂ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಗುರುವಾರ ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಸಂಸ್ಥೆ, ಕೃಷಿ ಬೆಲೆ ಆಯೋಗದಿಂದ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯ ಸರ್ಕಾರಿ ಕಾರ್ಯಕ್ರಮ ಹಾಗೂ ವಿವಿಧ ಯೋಜನೆಗಳಿಗೆ ಬಳಕೆಯಾದರೆ ಬೆಳೆಯುವ ರೈತರಿಗೆ ಉತ್ತೇಜನದ ಜತೆಗೆ ಉತ್ತಮ ಬೆಲೆಯೂ ದೊರೆಯುತ್ತದೆ. ಆದರೆ, ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಬೇರೆ ಜಿಲ್ಲೆಗಳ ರೈತರು ಬೆಳೆಯುವ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದರು.

‘ನಮ್ಮ ರಾಜ್ಯ, ನಮ್ಮ ಸ್ವಾಯತ್ತತೆ, ನಮ್ಮ ಉತ್ಪಾದನೆ, ನಮ್ಮ ಬೆಲೆ. ಇದು ಸಿರಿಧಾನ್ಯ ಬೆಳೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಜಾರಿಯಾಗಬೇಕಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣದಲ್ಲಿ ರಾಗಿ ಹೆಚ್ಚು ಬಳಸುತ್ತಾರೆ. ಪಡಿತರ ವ್ಯವಸ್ಥೆಯಡಿ ಪ್ರದೇಶಕ್ಕೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಧಾನ್ಯಗಳನ್ನು ವಿತರಿಸುವಂತಾಗಬೇಕು. ಈಗಾಗಲೇ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ, ರಾಗಿ, ಜೋಳ ನೀಡಲಾಗುತ್ತಿದೆ. 9 ಲಕ್ಷ ಟನ್ ರಾಗಿ, 20ರಿಂದ 25ಲಕ್ಷ ಟನ್ ಜೋಳವನ್ನು ರೈತರಿಂದ ಪಡೆದು ಪಡಿತರಿಗೆ ವಿತರಿಸಬೇಕಿದೆ’ ಎಂದರು.

‘ಆಹಾರ ಭದ್ರತೆ ಇಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಅದಕ್ಕಾಗಿ ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿಸಲು ಕೇಂದ್ರ ಸರ್ಕಾರ 2013ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತು. ಇದರನ್ವಯ ಗ್ರಾಮೀಣ ಪ್ರದೇಶದಲ್ಲಿ ಶೇ 75 ಹಾಗೂ ನಗರ ಪ್ರದೇಶದಲ್ಲಿ ಶೇ 50ರಷ್ಟು ಆಹಾರ ಧಾನ್ಯ ನೀಡಬೇಕು ಎಂಬ ಆದೇಶವಿದೆ’ ಎಂದರು.

‘ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ 285 ದಶಲಕ್ಷ ಟನ್ ಆಹಾರ ಉತ್ಪಾದಿಸಲಾಗುತ್ತಿದೆ. 300 ದಶಲಕ್ಷ ಟನ್ ಹಣ್ಣು ಮತ್ತು ತರಕಾರಿ ಹಾಗೂ 300 ಕೋಟಿ ಟನ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಆಗರ ಚಿತ್ರದುರ್ಗ ಜಿಲ್ಲೆಯಾಗಿದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಕೃಷಿಯಲ್ಲಿನ ಕ್ರಾಂತಿಕಾರಕ ಬದಲಾವಣಿಗೆ ಯಾಂತ್ರೀಕರಣ ಕಾರಣವಾಗಿದೆ. ಆದರೆ, ರಾಸಾಯನೀಕರಣ ತುಂಬಾ ಅಪಾಯಕಾರಿ. ಅದಕ್ಕಾಗಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಳೆ ಹಾಗೂ ಮಾರುಕಟ್ಟೆಗಳು ರೈತನೊಂದಿಗೆ ಜೂಜಾಡುತ್ತಿವೆ. ಜತೆಗೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೇ ರೈತ ಕಂಗಾಲಾಗಿದ್ದಾನೆ. ಅದಕ್ಕಾಗಿ ಸರ್ಕಾರ ಆಯೋಗ ರಚಿಸಿದ್ದು, ರೈತ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಹನುಮನಗೌಡ ಹೇಳಿದರು.

ಚಿತ್ರದುರ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಭಾರತಿ, ‘ಜಿಲ್ಲೆಯ ಒಟ್ಟು 60ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 7ಲಕ್ಷ ಟನ್ ಸಿರಿಧಾನ್ಯ ಉತ್ಪಾದನೆಯಾಗುತ್ತಿದೆ. ಆದ್ದರಿಂದ ರೈತರು ಬೆಳೆದ ಸಿರಿಧಾನ್ಯಗಳನ್ನು ಸರ್ಕಾರ ನೇರವಾಗಿ ಖರೀದಿ ಮಾಡಿ, ವಿದ್ಯಾರ್ಥಿ ವಸತಿ ನಿಲಯಗಳಿಗೆ, ಅಂಗನವಾಡಿ, ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳಿಗೆ ವಿತರಿಸಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಆದಾಯ ದೊರೆಯುವಂತೆ ಮಾಡಬೇಕು. ಈ ಕುರಿತು ಚರ್ಚಿಸಲು ರೈತರೊಂದಿಗೆ ಸಂವಾದ ಆಯೋಜಿಸಲಾಗಿದೆ’ ಎಂದರು.

ಐಎಟಿ ಉಪಾಧ್ಯಕ್ಷ ಹನುಮಂತರಾಯರೆಡ್ಡಿ, ಕಾರ್ಯದರ್ಶಿ ಜೆ. ತಿಪ್ಪೇಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓಂಕಾರಪ್ಪ, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್, ಕೃಷಿ ಇಲಾಖೆ ಉಪನಿರ್ದೇಶಕ ಎ.ಸಿ. ಮಂಜು, ಐಎಟಿ ರೈತ ಮುಖಂಡರಾದ ರಂಗಸ್ವಾಮಿ, ತಿಮ್ಮಣ್ಣ, ಬಸವರಾಜಪ್ಪ, ಶರಣಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT