ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಕಾಮಗಾರಿ ವಿಳಂಬಕ್ಕೆ ಕಿಡಿ

ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ
Last Updated 24 ಜೂನ್ 2021, 16:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಅಮೃತ್‌ ಯೋಜನೆಯಡಿ ₹ 112 ಕೋಟಿ ವೆಚ್ಚದಲ್ಲಿ ಕೈಗೊತ್ತಿಕೊಂಡ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ‘ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಮೀಟರ್‌ ಅಳವಡಿಸಬೇಕು’ ಎಂದು ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ), ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕೆಯುಐಡಿಎಫ್‍ಸಿ ಕಾಮಗಾರಿಗಳ ಪ್ರಗತಿಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘2019ರ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಎರಡು ವರ್ಷ ಕಳೆದರೂ ಕಾಮಗಾರಿ ಮುಕ್ತಾಯ ಆಗಿಲ್ಲ. ಗುತ್ತಿಗೆದಾರರಿಗೆ ಅಂತಿಮ ಎಚ್ಚರಿಕೆ ನೀಡಿ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ. ಕಾಮಗಾರಿ ಮುಂದುವರಿಸಿ ದುಪ್ಪಟ್ಟು ದಂಡ ವಸೂಲಿ ಮಾಡಿ’ ಎಂದು ಸೂಚನೆ ನೀಡಿದರು.

ಚಿತ್ರದುರ್ಗ ನಗರದ ಜನಸಂಖ್ಯೆಗೆ ನಿತ್ಯ 21 ಎಂಎಲ್‌ಡಿ ನೀರು ಸಾಕಾಗುತ್ತದೆ. ಶಾಂತಿಸಾಗರ ಕೆರೆ ಮತ್ತು ವಿ.ವಿ.ಸಾಗರ ಜಲಾಶಯದಿಂದ ನಿತ್ಯ 40 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಆದರೂ, ನಗರದ ಹಲವು ಬಡಾವಣೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ಇದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು. ಇದು ಸಚಿವರ ಅಸಮಾಧಾನಕ್ಕೆ ಕಾರಣವಾಯಿತು.

‘ಹೆಚ್ಚುವರಿ ನೀರು ಲಭ್ಯವಿದ್ದರೂ ಏಕೆ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಕೊಳವೆ ಮಾರ್ಗ, ಟ್ಯಾಂಕ್‌ ವ್ಯವಸ್ಥೆ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಿ. ನೀರು ಮರು ಹಂಚಿಕೆಗೆ ಪ್ರಯತ್ನಿಸಿ. ಜನರು ತೆರಿಗೆ ಪಾವತಿಸುತ್ತಾರೆ. ಅವರಿಗೆ ಮೂಲ ಸೌಲಭ್ಯವನ್ನು ತಲುಪಿಸದೇ ಇದ್ದರೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ’ ಎಂದರು.

ಒಳಚರಂಡಿ ವ್ಯವಸ್ಥೆ ಸರಿಪಡಿಸಿ

ಕೋಟ್ಯಂತರ ಹಣ ಖರ್ಚು ಮಾಡಿ ರೂಪಿಸಿದ ಒಳಚರಂಡಿ ವ್ಯವಸ್ಥೆ ನನೆಗುದಿಗೆ ಬಿದ್ದಿರುವುದು ಸಚಿವರನ್ನು ಕೆರಳಿಸಿತು. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇರುವ ಪಿಳ್ಳೇಕೆರನಹಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಖನಿಜ ನಿಧಿಯಲ್ಲಿ (ಡಿಎಂಎಫ್‌) ₹ 5 ಕೋಟಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಸೂಚಿಸಿದರು.

‘ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣದ ಸಂದರ್ಭದಲ್ಲಿ ಪಿಳ್ಳೇಕೆರೆನಹಳ್ಳಿಗೂ ಒಳಚರಂಡಿ ನಿರ್ಮಿಸುವುದಾಗಿ ವಾಗ್ದಾನ ನೀಡಲಾಗಿತ್ತು. ಒಳಚರಂಡಿ ವ್ಯವಸ್ಥೆ ಸಿದ್ಧವಾದರೆ ಮಲ್ಲಾಪುರ ಕೆರೆಗೆ ಕೊಳಚೆ ನೀರು ಹರಿಯುವುದು ತಪ್ಪಲಿದೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ನಗರ ವ್ಯಾಪ್ತಿಯ ಒಳಗೆ ₹ 79 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ನಗರದ ಹೊರಭಾಗದ ಬಡಾವಣೆಗಳಲ್ಲಿ ಯುಜಿಡಿ ನಿರ್ಮಾಣಕ್ಕೆ ₹ 93 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಈ ಪ್ರಸ್ತಾವನೆ ತಾಂತ್ರಿಕ ಸಮಿತಿ ಎದುರು ಇದ್ದು, ಶೀಘ್ರವೇ ಅನುಮೋದನೆ ಸಿಗಲಿದೆ’ ಎಂದು ಹೇಳಿದರು.

ನಗರ ಅನೈರ್ಮಲ್ಯಕ್ಕೆ ಅಸಮಾಧಾನ

ಐತಿಹಾಸಿಕ ನಗರದ ಅನೈರ್ಮಲ್ಯದ ಸ್ಥಿತಿ ಕಂಡು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು. ‘ಗಂಡು ಮೆಟ್ಟಿನ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರದುರ್ಗ ನಗರದ ಕೆಲವೆಡೆ ಕಾಲಿಡಲು ಅಸಹ್ಯವಾಗುತ್ತಿದೆ’ ಎಂದು ಪೌರಾಯುಕ್ತ ಜಿ.ಟಿ.ಹನುಮಂತರಾಜು ಅವರನ್ನು ತರಾಟೆ ತೆಗೆದುಕೊಂಡರು.

‘ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಸಮರ್ಪಕವಾಗಿ ಕಸವಿಲೇವಾರಿ ಮಾಡುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾರ್ವಜನಿಕರಿಂದ ನಿತ್ಯ ದೂರುಗಳು ಬರುತ್ತಿವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಟದ ಈ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಜಿಲ್ಲಾ ಆಸ್ಪತ್ರೆಯ ಮುಂಭಾಗದ ಉದ್ಯಾನ ದುಃಸ್ಥಿತಿಯಲ್ಲಿದೆ’ ಎಂದರು.

ನಗರದಲ್ಲಿ ಉದ್ಯಾನವನಗಳು ಸಮಪರ್ಕ ನಿರ್ವಹಣೆ ಆಗುತ್ತಿಲ್ಲ. ಉದ್ಯಾನಗಳ ಸಮಪರ್ಕ ನಿರ್ವಹಣೆಗೆ ಸರ್ಕಾರದಿಂದ ಸುತ್ತೊಲೆ ಹೊರಡಿಸಲಾಗುವುದು. ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಿಗೆ ವಿಶೇಷ ಜವಾಬ್ದಾರಿ ನೀಡಲಾಗುವುದು. ರೈತರ ಮನವೊಲಿಸಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ಹಂಚಲಾಗುವುದು ಎಂದು ತಿಳಿಸಿದರು.

ಕೆರೆ ಕಲುಷಿತ: ಶಾಸಕ

ಚಿತ್ರದುರ್ಗ ನಗರದ ಒಳಚರಂಡಿ ನೀರು ಮಲ್ಲಾಪುರ ಕೆರೆ ಸೇರುತ್ತಿದೆ. ಇದರಿಂದ ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕಿನ ಕೆರೆಗಳು ಕಲುಷಿತಗೊಳ್ಳುತ್ತಿವೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಗಮನ ಸೆಳೆದರು.

‘ಮಲ್ಲಾಪುರ ಕೆರೆ ಕೋಡಿ ಬಿದ್ದು ಗೋನೂರು ಕೆರೆ ಸೇರುತ್ತದೆ. ಅಲ್ಲಿಂದ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ ಕೆರೆಯ ಮೂಲಕ ಚಳ್ಳಕೆರೆ ತಾಲ್ಲೂಕಿಗೆ ಹರಿದುಹೋಗತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕೆರೆಯ ಕಾಯಕಲ್ಪಕ್ಕೆ ಸುಮಾರು ₹ 70 ಕೋಟ ಅನುದಾನದ ಅವಶ್ಯಕತೆ ಇದೆ’ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ಆಯುಕ್ತ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT