ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಐಎಲ್ ಮಳಿಗೆ ತೆರೆಯಲು ಆಗ್ರಹ: ಅಬಕಾರಿ ಕಚೇರಿ ಎದುರ ಶಾಸಕ ಧರಣಿ

Last Updated 21 ಅಕ್ಟೋಬರ್ 2020, 15:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಂಎಸ್‌ಐಎಲ್‌ ಮಳಿಗೆ ತೆರೆಯುವಂತೆ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಅಬಕಾರಿ ಉಪ ಆಯುಕ್ತರ ಕಚೇರಿಯ ಮೆಟ್ಟಿಲ ಮೇಲೆ ಧರಣಿ ಕುಳಿತು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಶಾಸಕರ ಮನವೊಲಿಸಿ ಕಚೇರಿಯ ಒಳಗೆ ಕರೆತಂದು ಸಮಸ್ಯೆ ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು. ಆಯುಕ್ತರ ಕಚೇರಿಯ ಮೆಟ್ಟಿಲ ಮೇಲೆ ಕುಳಿತ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ನನ್ನ ಮತಕ್ಷೇತ್ರ ವ್ಯಾಪ್ತಿಯ ಕೆಲಸದ ಬಗ್ಗೆ ವಿಚಾರಿಸಲು ಅಬಕಾರಿ ಇಲಾಖೆಗೆ ತೆರಳಿದರೆ ಉಪ ಆಯುಕ್ತರು ವಿನಾ ಕಾರಣ ಅಲೆದಾಡಿಸುತ್ತಿದ್ದಾರೆ. ವಿಧಿ ಇಲ್ಲದೇ ಅವರ ಕಚೇರಿಯ ಬಾಗಿಲಲ್ಲಿ ಕುಳಿತು ಕಾಲ ಕಳೆದಿದ್ದೇನೆ. ಒಬ್ಬ ಜನಪ್ರತಿನಿಧಿಗೆ ಹೀಗಾದರೆ, ಸಾಮಾನ್ಯರ ಗತಿ ಏನು’ ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕರು ಪ್ರಶ್ನಿಸಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದಲ್ಲಿ ಎಂಎಸ್‌ಐಎಲ್‌ ಮಳಿಗೆ ತೆರೆಯುವಂತೆ ಶಾಸಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು ನಡೆದಿದ್ದವು. ನಿರಾಕ್ಷೇಪಣ ಪತ್ರ ನೀಡುವ ಹೊಣೆ ಉಪ ಆಯುಕ್ತರ ಮೇಲಿತ್ತು. ಈ ವಿಚಾರವಾಗಿ ಶಾಸಕರು ಹಲವು ಬಾರಿ ಅಬಕಾರಿ ಇಲಾಖೆಯ ಕಚೇರಿಗೆ ಬಂದಿದ್ದರು. ಈ ವೇಳೆ ಉಪ ಆಯುಕ್ತ ನಾಗಶಯನ ಸಿಗುತ್ತಿರಲಿಲ್ಲ ಎಂಬ ಆರೋಪವಿದೆ.

‘ಶ್ರೀರಾಂಪುರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಮದ್ಯದಂಗಡಿ ತೆರೆಯಬೇಡಿ ಎಂದು ಸೂಚಿಸಿದ್ದೆ. ಉತ್ತಮ ವ್ಯಾಪಾರ ನಡೆಯುತ್ತದೆ ಎಂಬ ಕಾರಣಕ್ಕೆ ಖಾಸಗಿ ಮಳಿಗೆಗಳು ಬಾಗಿಲು ತೆರೆದಿವೆ. ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಳಪೆ ಗುಣಮಟ್ಟದ ಮದ್ಯವೂ ಸರಬರಾಜಾಗುತ್ತಿದೆ. ಹೀಗಾಗಿ, ಎಂಎಸ್‌ಐಎಲ್‌ ಮಳಿಗೆ ತೆರೆಯುವಂತೆ ಬೇಡಿಕೆ ಇಟ್ಟಿದ್ದೇನೆ’ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಎಸ್‌ಐಎಲ್‌ ಮಳಿಗೆ ತೆರೆದರೆ ಸರ್ಕಾರಕ್ಕೆ ಲಾಭ ಬರುತ್ತದೆ. ಕಡಿಮೆ ಬೆಲೆಗೆ ಗುಣಮಟ್ಟದ ಮದ್ಯ ಜನರಿಗೆ ದೊರೆಯುತ್ತದೆ. ಎಂಟು ತಿಂಗಳಿಂದ ಉಪ ಆಯುಕ್ತರು ಕೈಗೆ ಸಿಗುತ್ತಿರಲಿಲ್ಲ. ದೂರವಾಣಿ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಬುಧವಾರ ಮಧ್ಯಾಹ್ನ 3.30ಕ್ಕೆ ಕಚೇರಿಗೆ ಭೇಟಿ ನೀಡಿದಾಗ ಸಂಜೆ 6ಕ್ಕೆ ಬರುವಂತೆ ಹೇಳಿದರು. ಅನಿವಾರ್ಯವಾಗಿ ಬಾಗಿಲು ಬಳಿ ಕುಳಿತೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT