ಗುರುವಾರ , ಸೆಪ್ಟೆಂಬರ್ 29, 2022
26 °C

ನಾರಾಯಣ ಗುರುಗಳಿಗೆ ಅವಮಾನಿಸಿದವರ ತಿರಸ್ಕರಿಸಿ: ಮಾಜಿ ಶಾಸಕ ಮಧು ಬಂಗಾರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ಕೇರಳದಲ್ಲಿ ಅಸ್ಪೃಶ್ಯ ಈಳವ ಜಾತಿಯಲ್ಲಿ ಹುಟ್ಟಿದ ನಾರಾಯಣ ಗುರು ಹಿಂದುಳಿದವರು, ದಲಿತರು ಶಿಕ್ಷಣ ಪಡೆಯಲು ಪ್ರೇರಕರಾಗಿದ್ದಾರೆ. ಅಂತಹವರನ್ನು ಅವಮಾನಿಸಿದವರು ಯಾರೇ ಆಗಿದ್ದರೂ ತಿರಸ್ಕರಿಸಿ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಕರೆ ನೀಡಿದರು.

ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆರ್ಯ ಈಡಿಗರ ಸಂಘದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರ್ಯ ಈಡಿಗ ಸಮಾವೇಶ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಅವರು ಮಾತನಾಡಿದರು.

‘ಅನ್ಯ ಜಾತಿಯವರನ್ನು ದ್ವೇಷಿಸಬಾರದು. ಎಸ್. ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಎಂದೂ ಜಾತಿ ರಾಜಕೀಯ ಮಾಡಲಿಲ್ಲ. ಬಡವರಪರ ಯೋಜನೆಗಳನ್ನು ರೂಪಿಸಿದರು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದರಿಂದ ಇಂದು ರೈತರು ಅನ್ನ ಬೆಳೆಯುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರು ಅವರ ರಜೆರಹಿತ ಜಯಂತಿ, ಅವರ ಹೆಸರಿನಲ್ಲಿ ವಿದ್ಯಾಪೀಠ ಸ್ಥಾಪನೆ, ಪಠ್ಯದಲ್ಲಿ ಅವರ ತತ್ವ–ಸಿದ್ದಾಂತಗಳ ಸೇರ್ಪಡೆಗೆ ಮನವಿ ಮಾಡಿದ್ದೆ. ಗುರುಗಳ ಜಯಂತಿ ಆಚರಣೆ ಅನಿವಾರ್ಯತೆಯನ್ನು ಸಿದ್ದರಾಮಯ್ಯನವರು ಅರ್ಥಮಾಡಿಕೊಂಡಿದ್ದರಿಂದ, ಅದು ಸರ್ಕಾರಿ ಆಚರಣೆಯಾಗಿ ಜಾರಿಗೆ ಬಂದಿತು’ ಎಂದು ಅವರು ತಿಳಿಸಿದರು.

‘ಸಮುದಾಯದ ಯುವಕರು ಕರಾವಳಿ ಭಾಗದಲ್ಲಿ ಚಡ್ಡಿ ಹಾಕಿಕೊಂಡು ಹಾಳಾಗಿದ್ದಾರೆ. ಯಾವುದೇ ಜಾತಿ, ಸಮುದಾಯವಿರಲಿ ಮನುಷ್ಯರಾಗಿ ಬಾಳುವ ಆಲೋಚನೆ ಬೆಳೆಸಿಕೊಳ್ಳಬೇಕು. ಸಮುದಾಯದ ಹಿರಿಯರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು’ ಎಂದು ಮಧುಬಂಗಾರಪ್ಪ ಮನವಿ ಮಾಡಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ, ‘ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಘಟನೆ ಅನಿವಾರ್ಯ. ಶಿಕ್ಷಣ ಪಡೆಯುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸಂಘದ ಅಧ್ಯಕ್ಷ ಅಜಯ್ ಕುಮಾರ್, ‘ನಗರದಲ್ಲಿ ಆರ್ಯ ಈಡಿಗರ ಸಮುದಾಯ ಭವನಕ್ಕೆ ಮಾಜಿ ಸಚಿವ ಡಿ. ಸುಧಾಕರ್ ಅವರು ₹ 67 ಲಕ್ಷ ಮಂಜೂರು ಮಾಡಿಸಿದ್ದರು. ಅದರಲ್ಲಿ ₹ 15 ಲಕ್ಷ ಬಿಡುಗಡೆ ಆಗುವ ವೇಳೆಗೆ ಸರ್ಕಾರ ಬದಲಾಯಿತು. ವಿಖ್ಯಾತನಂದ ಸ್ವಾಮೀಜಿ ಅವರ ಪ್ರಯತ್ನದಿಂದ ಕೋಟಾ ಶ್ರೀನಿವಾಸ ಪೂಜಾರಿಯವರು ₹ 25 ಲಕ್ಷ ನೀಡಿದ್ದಾರೆ. ಪ್ರಸ್ತುತ ನಿರ್ಮಾಣ ವೆಚ್ಚ ₹ 1.25 ಕೋಟಿಗೆ ಹೆಚ್ಚಿದೆ. ಹಾಲಿ ಶಾಸಕರು ಈಡಿಗ ಸಮುದಾಯಕ್ಕೆ ನಯಾಪೈಸೆ ಅನುದಾನ ನೀಡದೆ ವಂಚಿಸಿದ್ದಾರೆ. ಸ್ಥಿತಿವಂತರು ಭವನ ನಿರ್ಮಾಣ ಪೂರ್ಣಗೊಳಿಸಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ಮಾಜಿ ಸಚಿವ ಡಿ. ಸುಧಾಕರ್, ಸಂಘದ ಗೌರವಾಧ್ಯಕ್ಷ ಎಂ.ಕೆ. ವೆಂಕಟಸ್ವಾಮಿ ಮಾತನಾಡಿದರು. ಚಿತ್ರದುರ್ಗ ಎಚ್. ಜೀವನ್, ತುಮಕೂರಿನ ಅಜಯ್ ಕುಮಾರ್, ಶಿವಣ್ಣ, ಚಂದ್ರಶೇಖರ್ ಇಕ್ಕನೂರು, ಟಿ. ಮಂಜುನಾಥ್, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಉಮಾದೇವಿ, ಅಧ್ಯಕ್ಷೆ ಮೀನಾ ಬಾಲರಾಜ್, ವಿಶಾಲಾಕ್ಷಿ ನಾಗರಾಜ್, ಭಾಗ್ಯ ತಿಪ್ಪೇಸ್ವಾಮಿ, ಮಂಜುಳಾ ಕೃಷ್ಣ, ಅರುಣನಾರಾಯಣಸ್ವಾಮಿ ಅವರೂ ಹಾಜರಿದ್ದರು.

ಡಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ವಿ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು