ಮೊಳಕಾಲ್ಮುರು: ಪಟ್ಟಣದ ಸ್ವಚ್ಛತೆ ಕಾಪಾಡುವ ಮೂಲಕ ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದ್ದು, ಅವರ ಸೇವೆಯನ್ನು ಯಾರೂ ಕಡೆಗಣಿಸಬಾರದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ದಿನ ಅವರು ಕೆಲಸ ಮಾಡಲಿಲ್ಲ ಎಂದಲ್ಲಿ ಪಟ್ಟಣದ ನೈರ್ಮಲ್ಯವನ್ನು ಊಹಿಸುವುದೂ ಕಷ್ಟ. ಅವರ ಜತೆಗೆ ನಾಗರಿಕರೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ ಸಹಕಾರ ನೀಡಬೇಕಿದೆ ಎಂದರು.
ಸರ್ಕಾರ ಅವರ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ಸದಸ್ಯ ಜಿ. ಪ್ರಕಾಶ್ ಹೇಳಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ಪಾಲಯ್ಯ ಮಾತನಾಡಿದರು.
ಸದಸ್ಯರಾದ ಟಿ.ಟಿ. ರವಿಕುಮಾರ್, ಶುಭಾ ಪೃಥ್ವರಾಜ್, ಅಬ್ದುಲ್ಲಾ, ರೂಪಾ ವಿನಯಕುಮಾರ್, ಮಂಜಣ್ಣ, ದೇವದಾಸ್, ಒಬೇದುಲ್ಲಾ ಹಾಗೂ ಸಿಬ್ಬಂದಿ ಇದ್ದರು. ಇದೇ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.