ಭಾನುವಾರ, ಅಕ್ಟೋಬರ್ 2, 2022
18 °C

ಮೊಳಕಾಲ್ಮುರು: ಮುಸ್ಲಿಮರು ಇಲ್ಲದ ಕೋನಾಪುರದಲ್ಲಿ ಸಂಭ್ರಮದ ಮೊಹರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಭಾವೈಕ್ಯದ ಹಬ್ಬವೆಂದು ಖ್ಯಾತಿಯಾಗಿರುವ ಮೊಹರಂನ್ನು ಮೂರು ದಿನಗಳ ಕಾಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಚರಣೆ ಮಾಡಲಾಗಿದ್ದು, ಹಬ್ಬಕ್ಕೆ ಮಂಗಳವಾರ ಸಂಜೆ ತೆರೆಬಿದ್ದಿತು.

ಮೊಹರಂನಲ್ಲಿ ದೇವರುಗಳನ್ನು ಪ್ರತಿಸ್ಥಾಪನೆ ಮಾಡುವ ಸ್ಥಳದ ಮುಂಭಾಗದ ಅಲ್ಲಾದ ಗುಣಿಗೆ ಐದು ದಿನಗಳ ಹಿಂದೆ ಗುದ್ದಲಿ ಪೂಜೆ ಮಾಡಿ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ನಂತರ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸೋಮವಾರ ರಾತ್ರಿ ಹರಕೆ ಹೊತ್ತವರು ಅಲ್ಲಾದ ಗುಣಿಗೆ ಕಟ್ಟಿಗೆ, ಹುರುಳಿ, ಹತ್ತಿಕಾಳು ಹಾಕಿದರು. ಇದಕ್ಕೆ ರಾತ್ರಿ ಬೆಂಕಿ ಹಚ್ಚಿ ಕೆಂಡ ಮಾಡಲಾಯಿತು. ಭಕ್ತರು ದೇವರಿಗೆ ಸಕ್ಕರೆ, ಬೆಲ್ಲ, ಕೆಂಪು ದಾರವನ್ನು ಅರ್ಪಿಸಿದರು.

ಮಂಗಳವಾರ ಬೆಳಿಗ್ಗೆ ಪೀರಲ ದೇವರನ್ನು ಹೊತ್ತು ಹರಕೆ ಹೊತ್ತವರು ಕೆಂಡಸೇವೆ ಸಲ್ಲಿಸಿದರು. ನಂತರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮತ್ತೆ ಮಂಗಳವಾರ ಸಂಜೆ ದೇವರನ್ನು ಹೊತ್ತು ಕೆಂಡ ಸೇವೆ ಸಲ್ಲಿಸಿದ ನಂತರ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ನೀರಿಗೆ ಹಾಕುವ ಮೂಲಕ ಹಬ್ಬಕ್ಕೆ
ತೆರೆಬಿದ್ದಿತು.

ಹಬ್ಬದ ಅಂಗವಾಗಿ ಹುಲಿವೇಷ, ಹೆಣ್ಣುವೇಷ, ಅಳ್ಳಲ್ಲಿ ಬುಕ್ಕ, ಗಂಡ, ಹೆಂಡತಿ ವೇಷ ಸೇರಿದತೆ ಹಲವು ವೇಷಧಾರಿಗಳು ಮನೆ, ಮನೆಗೆ ಹೋಗಿ ಕಾಣಿಕೆ ಪಡೆದು ಅಂತಿಮವಾಗಿ ದೇವರಿಗೆ ಅರ್ಪಿಸಿದರು.

ಮುಸ್ಲಿಮರು ಇಲ್ಲದ ತಾಲ್ಲೂಕಿನ ಕೋನಾಪುರದಲ್ಲಿ ಪಕ್ಕದ ಬೊಮ್ಮಕ್ಕನಹಳ್ಳಿಯಿಂದ ಮುಸ್ಲಿಮರನ್ನು ಕರೆಸಿ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡುವ ಮೂಲಕ ಭಾವೈಕ್ಯ ಮೆರೆದರು. ಉಳಿದಂತೆ ಮೊಳಕಾಲ್ಮುರು ಪಟ್ಟಣ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಊಡೇವು, ಕೋನಸಾಗರ, ಹಾನಗಲ್, ನಾಗಸಮುದ್ರ, ರಾಂಪುರ, ದೇವಸಮುದ್ರದಲ್ಲೂ ಹಬ್ಬ ಆಚರಿಸಿದ ಬಗ್ಗೆ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು