ಶುಕ್ರವಾರ, ಸೆಪ್ಟೆಂಬರ್ 30, 2022
26 °C

ಲೈಂಗಿಕ ಕಿರುಕುಳ ನೀಡಿದ ಆರೋಪ: ಮತ್ತೆ ಜೈಲು ಸೇರಿದ ಮುರುಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಚಿತ್ರದುರ್ಗ: ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ
ರನ್ನು ಜಿಲ್ಲಾ ನ್ಯಾಯಾಲಯವು ಸೆ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನಂತರ ಪೊಲೀಸರು ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು. ಕಾರಾಗೃಹ ಸಿಬ್ಬಂದಿ ಆರೋಪಿ ತಪಾಸಣೆ ನಡೆಸಿ ಒಳಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಕಾರಾಗೃಹದ ಬಳಿ ಭಕ್ತರು ಜಮಾಯಿಸಿದ್ದರು.

ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡಿದ್ದರಿಂದ ತನಿಖಾ ತಂಡ ಆರೋಪಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ಗೆ ಸೋಮವಾರ ಹಾಜರುಪಡಿಸಿತು. ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ನ್ಯಾಯಾಲಯಕ್ಕೆ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಕರೆತಂದ ಪೊಲೀಸರು, ಮರುಹಾಜರಿ ಅರ್ಜಿಸಲ್ಲಿಸಲು ವಿಳಂಬ ಮಾಡಿದರು. ಕಟಕಟೆಯಲ್ಲಿದ್ದ ಆರೋಪಿ, ನ್ಯಾಯಾಧೀಶರ ಅನುಮತಿ ಪಡೆದು ಬೆಂಚಿನ ಮೇಲೆ ಕುಳಿತರು. ಈ ವೇಳೆ ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸುವಂತೆ ತನಿಖಾಧಿಕಾರಿ ಮನವಿ ಸಲ್ಲಿಸಲಿಲ್ಲ.

‘ಜೈಲು ಸೇರಿದ ಆರೋಪಿ ಕೆಲಹೊತ್ತು ಏಕಾಂತದ ಮೊರೆ ಹೋಗಿದ್ದರು. ಇತರೆ ಕೈದಿಗಳಂತೆ ಸರತಿಯಲ್ಲಿ ನಿಂತು ಊಟ ಪಡೆದರು. ಅನ್ನ, ಸಾಂಬಾರ್‌ ಸೇವಿಸಿ, ಮಧ್ಯಾಹ್ನ ಕೆಲ ಹೊತ್ತು ನಿದ್ರೆ ಮಾಡಿದರು. ಪತ್ರಿಕೆ ಓದಿ ಇತರ ಕೈದಿಗಳೊಂದಿಗೆ ಮಾತನಾಡಿದರು’ ಎಂದು ಮೂಲಗಳು ಮಾಹಿತಿ ನೀಡಿವೆ.

ಸೆ.1ರಂದು ಬಂಧಿತರಾಗಿರುವ ಆರೋಪಿಯನ್ನು ತನಿಖಾ ತಂಡ ಸೆ.2ರಂದು ಪೊಲೀಸ್‌ ವಶಕ್ಕೆ ಪಡೆದಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಆರೋಪಿಯ ಪುರುಷತ್ವ ಪರೀಕ್ಷೆ ಹಾಗೂ ಮುರುಘಾ ಮಠದಲ್ಲಿ ತಂಗುತ್ತಿದ್ದ ಕೊಠಡಿಯ ಮಹಜರು ಪ್ರಕ್ರಿಯೆಯನ್ನು ತನಿಖಾ ತಂಡ ಕೈಗೊಂಡಿತ್ತು.

ಜಾಮೀನು: ತಕರಾರು ಸಲ್ಲಿಕೆಗೆ ಅವಕಾಶ

ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ತಕರಾರು ಸಲ್ಲಿಸಲು ಕೋರ್ಟ್‌ ಸಂತ್ರಸ್ತರು ಹಾಗೂ ದೂರುದಾರರಿಗೆ ಅವಕಾಶ ಕಲ್ಪಿಸಿದ್ದು, ಸೆ.7ರಂದು ಸಲ್ಲಿಸಬಹುದು ಎಂದು ತಿಳಿಸಿದೆ. 

ಪ್ರಕರಣದ ಮೂರನೇ ಆರೋಪಿ, 17 ವರ್ಷದ ಬಾಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ತಕರಾರು ಸಲ್ಲಿಸಲು ಸೆ.7ರವರೆಗೆ ಅವಧಿ ನೀಡಲಾಗಿದೆ.

ನಾಲ್ಕನೇ ಆರೋಪಿ ಪರಮಶಿವಯ್ಯ ಹಾಗೂ ಐದನೇ ಆರೋಪಿ ಗಂಗಾಧರಯ್ಯ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನೂ ಅಂದೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ವಾರ್ಡನ್‌ ವಶಕ್ಕೆ ಕೋರಿ ಅರ್ಜಿ

ಪ್ರಕರಣದ ಎರಡನೇ ಆರೋಪಿ, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಅನ್ನು ಪೊಲೀಸ್ ವಶಕ್ಕೆ ನೀಡುವಂತೆ ಕೋರಿ ತನಿಖಾ ತಂಡ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು, ಆರೋಪಿಯನ್ನು ಖುದ್ದು ಹಾಜರುಪಡಿಸಲು ಸೂಚಿಸಿದರು.

ಭದ್ರತೆ ದೃಷ್ಟಿಯಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ವಾರ್ಡನ್‌ ವಶಕ್ಕೆ ಕೋರಿ ಅರ್ಜಿ

ಪ್ರಕರಣದ ಎರಡನೇ ಆರೋಪಿ, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಅನ್ನು ಪೊಲೀಸ್ ವಶಕ್ಕೆ ನೀಡುವಂತೆ ಕೋರಿ ತನಿಖಾ ತಂಡ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು, ಆರೋಪಿಯನ್ನು ಖುದ್ದು ಹಾಜರುಪಡಿಸಲು ಸೂಚಿಸಿದರು. ಭದ್ರತೆ ದೃಷ್ಟಿಯಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ದಾಂಪತ್ಯಕ್ಕೆ ಆರು ಜೋಡಿ

ಮುರುಘಾ ಮಠದಲ್ಲಿ ಸೋಮವಾರ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ  ಮಾಸಿಕ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

‘ಏಳು ಜೋಡಿ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಕೊನೆಗಳಿಗೆಯಲ್ಲಿ ಒಂದು ಜೋಡಿ ಬರಲಿಲ್ಲ’ ಎಂದು ಮಠದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

***

ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿನಿಯರಿಗೆ ಅನ್ಯಾಯವಾಗುವುದಿಲ್ಲ. ತನಿಖೆ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಲಿದೆ

- ಎ. ನಾರಾಯಣಸ್ವಾಮಿ, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು