ಚಿತ್ರದುರ್ಗ: ಜಿಲ್ಲೆಯಾದ್ಯಂತ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಆಟೊ, ಓಮಿನಿಗಳ ಸದ್ದು ಜೋರಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಈ ವಾಹನಗಳಲ್ಲಿನ ಪ್ರಯಾಣ ವಿದ್ಯಾರ್ಥಿಗಳ ಸುರಕ್ಷತೆಯನ್ನು ಪ್ರಶ್ನಿಸುವಂತಿದೆ.
ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ರಮೇಣ ಕ್ಷೀಣಿಸುತ್ತಿದೆ. ಹಾಗೆ ನಡೆದು ಹೋಗುವವರು ಬೆರಳೆಣಿಕೆ ಮಾತ್ರ. ಬಹುತೇಕರು ಆಟೊ, ಓಮಿನಿ ಹಾಗೂ ಖಾಸಗಿ ಶಾಲಾ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಕೆಲ ಪಾಲಕರು ಸ್ವಂತ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು, ಕರೆದೊಯ್ಯುತ್ತಿದ್ದಾರೆ.
ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸುವ ಆಟೊ, ಓಮಿನಿ, ಬಸ್‌ಗಳಲ್ಲಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಿಗೆ ಮಾರ್ಗಸೂಚಿಗಳನ್ನು ರೂಪಿಸಿದ್ದು, ಬಹುತೇಕ ಸಂಸ್ಥೆಗಳು ಪಾಲನೆ ಮಾಡುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.
ನಿತ್ಯ ಬೆಳಿಗ್ಗೆ 8ರಿಂದ 9 ಗಂಟೆವರೆಗೆ ನಗರದಲ್ಲಿ ಖಾಸಗಿ ಶಾಲಾ ಬಸ್‌ಗಳ ಜತೆ ಸ್ಪರ್ಧೆಗೆ ಬಿದ್ದಂತೆ ನೂರಾರು ಆಟೊ, ಓಮಿನಿಗಳು ಮಕ್ಕಳನ್ನು ತುಂಬಿಕೊಂಡು ಶಾಲಾ ಅಂಗಳ ತಲುಪಿಸಿ ಸಂಜೆ ಮತ್ತೆ ಮನೆಗೆ ಬಿಡುತ್ತಿವೆ. ಚಳ್ಳಕೆರೆ ಟೋಲ್‌ಗೇಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ರಸ್ತೆ, ಒನಕೆ ಓಬವ್ವ ವೃತ್ತ, ಗಾಯತ್ರಿ ಕಲ್ಯಾಣ ಮಂಟಪದ ರಸ್ತೆ, ಬಸವೇಶ್ವರ ಆಸ್ಪತ್ರೆ ಮುಂಭಾಗದ ರಸ್ತೆ, ತ್ಯಾಗರಾಜ ಮಾರುಕಟ್ಟೆ ರಸ್ತೆ, ಪಿಳ್ಳೇಕೆರೆನಹಳ್ಳಿ, ಹೊಳಲ್ಕೆರೆ ರಸ್ತೆ, ಚಳ್ಳಕೆರೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಚಳ್ಳಕೆರೆ ಗೇಟ್ ಚಿತ್ರದುರ್ಗದ ಪ್ರಮುಖ ಜಂಕ್ಷನ್ ಆಗಿದ್ದು ಚಳ್ಳಕೆರೆ, ಬಳ್ಳಾರಿ, ಬೆಂಗಳೂರು, ಹಿರಿಯೂರು ಮಾರ್ಗದ ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಈ ಜಂಕ್ಷನ್ ಸುತ್ತಲಿನ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿರುವ ಕಾರಣ ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆದರೆ, ಶಾಲೆ ಮುಂಭಾಗದಲ್ಲಿ ವಾಹನದಿಂದ ಮಕ್ಕಳನ್ನು ಇಳಿಸುವ ಹಾಗೂ ಹತ್ತಿಸಿಕೊಳ್ಳುವ ಸಂದರ್ಭದಲ್ಲಿ ಚಾಲಕರು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.
ರಸ್ತೆ ದಾಟುವ ವೇಳೆ, ವಾಹನ ಏರುವ ಹಾಗೂ ಇಳಿಯುವ ಸಂದರ್ಭದಲ್ಲಿ ಅನೇಕ ಮಕ್ಕಳು ಅಪಘಾತಕ್ಕೆ ತುತ್ತಾಗಿರುವ ನಿದರ್ಶನಗಳಿವೆ. ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವುದೂ ಮಾಮೂಲಿಯಾಗಿದೆ.
ಆಟೊಗಳಲ್ಲಿ ಚಾಲಕರ ಎಡ, ಬಲ ಹಾಗೂ ಹಿಂಬದಿ ಸೇರಿ 8ರಿಂದ 10 ಹಾಗೂ ಓಮಿನಿಗಳಲ್ಲಿ ಸೀಟು ಮಾರ್ಪಡಿಸಿ 15ರಿಂದ 20 ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿದೆ. ನಿಯಮ ಉಲ್ಲಂಘನೆ ಕಂಡು ಬಂದರೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಕಚೇರಿ ಸಿಬ್ಬಂದಿ ಹಾಗೂ ಪೊಲೀಸರು ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಇರುವುದು ಅಚ್ಚರಿ ಮೂಡಿಸಿದೆ.
ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಬಸ್‌ಗಳಿದ್ದು, ವಾರ್ಷಿಕ ₹ 12,000 ದಿಂದ 15,000ದವರೆಗೂ ಶುಲ್ಕ ನಿಗದಿಗೊಳಿಸಲಾಗಿದೆ. ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಗಮನಹರಿಸುತ್ತಿಲ್ಲ. ಶುಲ್ಕ ಪಾವತಿಸುವ ಸಾಮರ್ಥ್ಯ ಇಲ್ಲದ ಪಾಲಕರು ಅನಿವಾರ್ಯವಾಗಿ ಆಟೊ, ಓಮಿನಿ, ಇತರೆ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲೂ ಪ್ರತಿ ವಿದ್ಯಾರ್ಥಿಯಿಂದ ಮಾಸಿಕ ₹ 1,200ದಿಂದ ₹ 1,500 ರವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ ಮಾರ್ಗಸೂಚಿ ಪಾಲಿಸದವರ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಪಾಲಕರ ಅಸಹಾಯಕತೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.
ಎರಡು ವರ್ಷದ ಹಿಂದೆ ಚಳ್ಳಕೆರೆಯಿಂದ ರಂಗವ್ವನಹಳ್ಳಿಗೆ ಬಂದ ಸರ್ಕಾರಿ ಬಸ್ ಕೆಲ ತಿಂಗಳಿಗೆ ಸಂಚಾರ ಸ್ಥಗಿತಗೊಳಿಸಿತು. ಅನಿರ್ವಾಯವಾಗಿ ಆಟೊಗಳ ಮೇಲೆ ಕುಳಿತು ಜೀವ ಕೈಯಲ್ಲಿಡಿದು ಕಾಲೇಜಿಗೆ ಬರಬೇಕಾದ ಸ್ಥಿತಿಯಿದೆ.
- ವಿಜಯ ಕುಮಾರ್ ಪದವಿ ವಿದ್ಯಾರ್ಥಿ ರಂಗವ್ವನಹಳ್ಳಿ
ಆಟೊ– ಟೆಂಪೊ ಪ್ರಯಾಣ ಮಾಮೂಲಿಯಾಗಿದೆ. ನಿತ್ಯವೂ ಕಾಲೇಜಿಗೆ ತಡವಾಗಿ ಹೋಗುವುದರಿಂದ ಪಾಠಕ್ಕೆ ತೊಂದರೆಯಾಗುತ್ತಿದೆ. ನಗರ ಪ್ರದೇಶದಿಂದ ಸುತ್ತಲಿನ ಏಳೆಂಟು ಕಿ.ಮೀ ದೂರದ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು.
-ಹರೀಶ್ ವಿದ್ಯಾರ್ಥಿ ಬೆಲ್ದರಹಟ್ಟಿ
ಬಸ್ ಸೌಲಭ್ಯವಿಲ್ಲದ ಕಾರಣ ಕಾಲೇಜಿಗೆ ಸಮಯಕ್ಕೆ ಹೋಗಲು ಆಗುತ್ತಿಲ್ಲ. ಒಮ್ಮೆ ಆಟೊ ಹೋದರೆ ಮತ್ತೆ ಬಹಳ ಜನ ಬರುವವರೆಗೂ ಕಾಯಬೇಕು. ಅದಕ್ಕೆ ಕಂಬಿಯಲ್ಲಿ ನಿಂತುಕೊಂಡು ಹೋಗುವುದು ಅನಿವಾರ್ಯವಾಗಿದೆ.
-ಎಸ್.ಆರ್.ನಿತಿನ್ ಪದವಿ ವಿದ್ಯಾರ್ಥಿ ಹೊಸದುರ್ಗ
ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಮಕ್ಕಳ ಸುರಕ್ಷತೆ ಕುರಿತು ಸೂಚನೆ ನೀಡಲಾಗಿದೆ. ಆಟೊ ಓಮಿನಿಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವುದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲು ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಲಾಗಿದೆ.
- ಎಂ.ಆರ್.ಮಂಜುನಾಥ್ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ
ಶಾಲಾ ಮಕ್ಕಳನ್ನು ಕರೆತರುವ ಆಟೊದಲ್ಲಿ ಹೆಚ್ಚುವರಿ ಸೀಟು ಹಾಕುವ ಚಾಲಕರ ವಿರುದ್ಧ ಕ್ರಮ ವಹಿಸಲು ಪೊಲೀಸರ ಗಮನಕ್ಕೆ ತರಲಾಗಿದೆ. ಟಾಪ್ ಪ್ರಯಾಣ ಬೆಳೆಸುವ ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ.
-ಕೆ.ಎಸ್.ಸುರೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ಚಳ್ಳಕೆರೆ
ಶಾಲಾ ಮಕ್ಕಳ ‘ಟಾಪ್’ ಪ್ರಯಾಣ
ಶಿವಗಂಗಾ ಚಿತ್ತಯ್ಯ ಚಳ್ಳಕೆರೆ: ತಾಲ್ಲೂಕಿನ ವಿದ್ಯಾರ್ಥಿಗಳನ್ನು ಸಾರಿಗೆ ಸೌಲಭ್ಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಎಷ್ಟೇ ಸಮಸ್ಯೆ ಎದುರಾದರೂ ಶಿಕ್ಷಣ ಪೂರ್ಣಗೊಳಿಸಬೇಕು ಎಂಬ ಛಲದಲ್ಲಿ ಆಟೊ ಟೆಂಪೊ ಹಾಗೂ ಖಾಸಗಿ ಬಸ್‌ನ ‘ಟಾಪ್’ ಪ್ರಯಾಣಕ್ಕೆ ಹೊಂದಿಕೊಂಡಿದ್ದಾರೆ! ಸರ್ಕಾರಿ ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಕೆಂಚವೀರನಹಳ್ಳಿ ಸಿದ್ದಾಪುರ ಡಿ.ಉಪ್ಪಾರಹಟ್ಟಿ ನಗರಂಗೆರೆ ದಾಸನಾಯಕನಹಟ್ಟಿ ಸೋಮಗುದ್ದು ಗಂಜಿಗುಂಟೆ ಚಿಕ್ಕಮದುರೆ ಹೊಟ್ಟೆಪ್ಪನಹಳ್ಳಿ ಭರಮಸಾಗರ ಬೊಮ್ಮಸಮುದ್ರ ಕಸ್ತೂರಿತಿಮ್ಮನಹಳ್ಳಿ ಲಂಬಾಣಿಹಟ್ಟಿ ರಂಗವ್ವನಹಳ್ಳಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆತ್ತಮ್ಮನವರಹಟ್ಟಿ ಬೊಮ್ಮದೇವರಹಟ್ಟಿ ಗಡ್ಡದಾರಹಟ್ಟಿ ವರವಿನೋರಹಟ್ಟಿ ಬಂಗಾರದೇವರಹಟ್ಟಿ ಬಂಡೆಹಟ್ಟಿ ಕರೆಕಾಟ್ಲಹಟ್ಟಿ ಕುರಿನಿಂಗಯ್ಯನಹಟ್ಟಿ ಸೇರಿ ಕಸಬಾ ಹೋಬಳಿ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳು ಖಾಸಗಿ ಅಥವಾ ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತವಾಗಿವೆ.
ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರು ಆಟೊ ಹಾಗೂ ಸರಕು ಸಾಗಣೆ ಟೆಂಪೊ ಇತ್ಯಾದಿ ವಾಹನಗಳನ್ನು ಅವಲಂಬಿಸಿದ್ದಾರೆ. ಹೆಚ್ಚು ಹಣಗಳಿಸುವ ಉದ್ದೇಶದಿಂದ 4ರಿಂದ 5 ಜನ ಪ್ರಯಾಣಿಸುವ ಆಟೊದಲ್ಲಿ ಸಿಲಿಂಡರ್ 12ರಿಂದ 15 ಜನರ ಜತೆಗೆ ಕುರಿಗಳನ್ನು ತುಂಬಿರುತ್ತಾರೆ. ಅಲ್ಲದೇ 5ರಿಂದ 6 ಜನರನ್ನು ವಾಹನಗಳ ಮೇಲೆಯೂ ಕೂರಿಸುತ್ತಾರೆ. ಅಷ್ಟೇ ಅಲ್ಲದೆ 7ರಿಂದ 8 ಜನ ವಾಹನದ ಸುತ್ತಲೂ ಜೋತು ಬಿದ್ದಿರುತ್ತಾರೆ. ಈ ವಾಹನಗಳು ಗ್ರಾಮೀಣ ಭಾಗದಿಂದ ರಾಜಾರೋಷವಾಗಿ ನಗರ ಪ್ರವೇಶಿಸಿ ಸಂಚಾರ ನಡೆಸುತ್ತವೆ. ಸಂಚಾರ ನಿಯಮ ಉಲ್ಲಂಘನೆಯಾದರೂ ಯಾರೊಬ್ಬರೂ ಪ್ರಶ್ನಿಸದ ಸ್ಥಿತಿ ನಿರ್ಮಾಣವಾಗಿದೆ.
ಸುರಕ್ಷಿತವಿಲ್ಲದ ಬಸ್ ಸಂಚಾರ
-ವಿ.ವೀರಣ್ಣ
ಧರ್ಮಪುರ: ಖಾಸಗಿ ಶಾಲೆಗಳ ವ್ಯಾಮೋಹದಿಂದ ಪಾಲಕರು ತಮ್ಮ ಮಕ್ಕಳನ್ನು ತಿಳಿದೂ ತಿಳಿಯದಂತೆ ಸುರಕ್ಷಿತವಿಲ್ಲದ ಬಸ್ ಸಂಚಾರಕ್ಕೆ ದೂಡುತ್ತಿದ್ದಾರೆ. ಹಳ್ಳಿಗಳಿಂದ ದೂರದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದು ನಿತ್ಯ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳು ಬಹುತೇಕ ಹಳೆಯದಾಗಿವೆ. ಇದರಿಂದಾಗಿ ಸುರಕ್ಷಿತವಿಲ್ಲದೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಬಳಿ ಗಡಿ ಪ್ರದೇಶವಾಗಿದ್ದು ಸರಿಯಾದ ಸಮಯಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್‌ಗಳು ಇಲ್ಲದೇ ಇರುವುದರಿಂದ ಆಟೊಗಳನ್ನು ಅವಲಂಬಿಸಬೇಕಿದೆ. ಇಲ್ಲವೇ ಖಾಸಗಿ ಶಾಲೆಗಳ ಬಸ್‌ಗಳೇ ಅನಿವಾರ್ಯ ಎಂಬುವಂತಾಗಿದೆ. ಈಗಲೂ ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಮರೀಚಿಕೆಯಾಗಿದೆ. ಕಳೆದ ವರ್ಷ ಮದ್ದಿಹಳ್ಳಿ ಬಳಿ ಮಳೆ ಬಂದು ಮಣ್ಣಿನ ರಸ್ತೆ ಸಂಪೂರ್ಣವಾಗಿ ಹಾಳಾಗಿ ಆ ರಸ್ತೆ ಮೂಲಕ ಹೋಗುತ್ತಿದ್ದ ಖಾಸಗಿ ಶಾಲೆ ಬಸ್ ರಸ್ತೆ ಪಕ್ಕದ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದಿತ್ತು. ಆ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಬಸ್‌ನಲ್ಲಿದ್ದ 60 ಮಕ್ಕಳು ಅಪಾಯದಿಂದ ಪಾರಾಗಿದ್ದರು. ಧರ್ಮಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಎಕೆ ಕಾಲೊನಿ ಮತ್ತು ಕಾಡುಗೊಲ್ಲರ ಹಟ್ಟಿಗಳಿಗೆ ರಸ್ತೆಗಳಿಲ್ಲ. ಬಸ್ ಸೌಕರ್ಯವೂ ಇಲ್ಲ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಏಳೆಂಟು ಕಿ.ಮೀ ನಡೆದುಕೊಂಡು ಹೋಗಬೇಕು. ಆದಕಾರಣ ಹಳ್ಳಿಗಳಿಗೆ ಬಂದು ಕರೆದೊಯ್ಯುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದೇವೆ ಎಂದು ಬೆನಕನಹಳ್ಳಿಯ ರಾಧಾ ತಿಳಿಸಿದರು.
ವಿದ್ಯಾರ್ಥಿಗಳ ಸ್ಥಿತಿ ದೇವರಿಗೆ ಪ್ರೀತಿ
- ಜಿ.ಶ್ವೇತಾ
ಹೊಸದುರ್ಗ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಶಾಲಾ ಕಾಲೇಜಿಗೆ ತೆರಳಲು ತುಂಬಿದ ಆಟೊಗಳಲ್ಲಿ ಪ್ರಯಾಣ ಅನಿವಾರ್ಯವಾಗಿದೆ. ತಾಲ್ಲೂಕು ಕೇಂದ್ರದಿಂದ ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಲಭ್ಯ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪ್ರತಿ ಸೋಮವಾರ ಚಾಲಕ ಕಾಣದಷ್ಟು ಜನ ಆಟೊಗಳಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಲ್ಲಿ ಬೆಳಿಗ್ಗೆ ಸಂಜೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆಟೊದ ಹೊರಗಡೆ ಕಂಬಿ ಹಿಡಿದು ವಿದ್ಯಾರ್ಥಿಗಳು ನಿಂತಿರುತ್ತಾರೆ. ಸೋಮವಾರ ಸಂತೆ ಮತ್ತು ಬುಧವಾರ ಕುರಿ ಮಾರುಕಟ್ಟೆ ಇರುವುದರಿಂದ ಈ ಎರಡೂ ದಿನ ಜನಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಜೀವಭಯ ತೊರೆದು ಆಟೊಗಳಲ್ಲಿ ಪ್ರಯಾಣಿಸುತ್ತಾರೆ. ‘ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಶಾಲಾ ಬಸ್‌ಗಳ ಪರಿಶೀಲನೆ ನಡೆಸಲಾಗಿದೆ. ಇದುವರೆಗೂ ಯಾವುದೇ ಅವಘಡಗಳು ಸಂಭವಿಸಿಲ್’ ಎಂದು ಬಿಇಒ ಸೈಯದ್ ಮೋಸಿನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.