ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ರಾಷ್ಟ್ರಮಟ್ಟದ ವಾಲಿಬಾಲ್‌ ಟೂರ್ನಿಗೆ ಮಳೆಯ ಕಾರ್ಮೋಡ

ಕ್ರೀಡಾಂಗಣ ಪರಿಶೀಲನೆಗೆ ದೆಹಲಿ ತಂಡ ಇಂದು ಭೇಟಿ
Last Updated 6 ಅಕ್ಟೋಬರ್ 2021, 13:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್‌ ಟೂರ್ನಿಯ ಮೇಲೆ ವರುಣನ ಕಾರ್ಮೋಡ ಮುಸುಕಿದೆ. ಮಳೆ ಮುಂದುವರಿದರೆ ಟೂರ್ನಿ ನಡೆಯುವುದು ಅನುಮಾನವಾಗಿದೆ.

ಅ.8ರಿಂದ 12ರವರೆಗೆ ಐದು ದಿನ ನಡೆಯುವ ಟೂರ್ನಿಗೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮೈದಾನ ನಿರ್ಮಿಸಲಾಗಿದೆ. ವೀಕ್ಷಣೆಗೆ ಅನುಕೂಲವಾಗುವಂತೆ ಪ್ರೇಕ್ಷಕರ ಗ್ಯಾಲರಿ ಸಿದ್ಧವಾಗಿದೆ. ದೆಹಲಿಯಿಂದ ವೀಕ್ಷಕರ ತಂಡವೊಂದು ಮೈದಾನ ಪರಿಶೀಲನೆಗೆ ಗುರುವಾರ ನಗರಕ್ಕೆ ಬರಲಿದೆ. ತಂಡ ಒಪ್ಪಿದರೆ ಮಾತ್ರ ಟೂರ್ನಿ ನಡೆಯಲಿದೆ.

ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮೈದಾನ ಕೆಸರು ಗದ್ದೆಯಂತಾಗಿದೆ. ಅಲ್ಲಲ್ಲಿ ನೀರು ನಿಂತಿದೆ. ವಾಲಿಬಾಲ್‌ಗೆ ಸಿದ್ದಪಡಿಸಿದ ಮೈದಾನ ಸಂಪೂರ್ಣ ಒದ್ದೆಯಾಗಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಾಲ್ಗೊಳ್ಳಲಿರುವ ಟೂರ್ನಿಗೆ ಮೈದಾನ ಸುಸ್ಥಿತಿಯಲ್ಲಿದ್ದರೆ ಅನುಕೂಲ. ತಜ್ಞರ ತಂಡ ಒಪ್ಪದಿದ್ದರೆ ಟೂರ್ನಿ ಮುಂದೂಡುವ ಸಾಧ್ಯತೆ ಇದೆ.

‘ಪುರುಷರ ವಿಭಾಗದಲ್ಲಿ 6 ಹಾಗೂ ಮಹಿಳೆಯರ ವಿಭಾಗದಲ್ಲಿ 5 ತಂಡಗಳನ್ನು ಆಹ್ವಾನಿಸಲಾಗಿದೆ. ನಿತ್ಯ ಸಂಜೆ 4ರಿಂದ ರಾತ್ರಿ 11ರವರೆಗೆ ಟೂರ್ನಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡಾಪಟುಗಳು, ತೀರ್ಪುಗಾರರು, ವಾಲಿಬಾಲ್‌ ಸಂಸ್ಥೆಯ ಪ್ರತಿನಿಧಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್‌.ನವೀನ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮೈದಾನದ ಪರಿಶೀಲನೆಗೆ ದೆಹಲಿಯ ತಂಡವೊಂದು ಗುರುವಾರ ನಗರಕ್ಕೆ ಭೇಟಿ ನೀಡಲಿದೆ. ಅವರ ಅಭಿಪ್ರಾಯದ ಮೇರೆಗೆ ಟೂರ್ನಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಮಳೆಯ ಕಾರಣಕ್ಕೆ ಟೂರ್ನಿ ನಡೆಸಲು ಅಸಾಧ್ಯ ಎಂಬುದು ಖಚಿತವಾದರೆ ಜನವರಿಯಲ್ಲಿ ಆಯೋಜಿಸಲಾಗುವುದು’ ಎಂದು ಹೇಳಿದರು.

ವನ್ಯಜೀವಿ ಛಾಯಾಚಿತ್ರ ಪ್ರದರ್ಶನ

ವನ್ಯಜೀವಿ ಸಪ್ತಾಹದ ಸಂದರ್ಭವಾಗಿರುವ ಕಾರಣಕ್ಕೆ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಉದ್ಘಾಟನೆ ಮಾಡಲಿದ್ದು, ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ – ಸೇನಾನಿ ಹಾಗೂ ಉರಗಪ್ರೇಮಿ ಸ್ನೇಕ್‌ ಶ್ಯಾಂ ಪಾಲ್ಗೊಳ್ಳಲಿದ್ದಾರೆ ಎಂದು ನವೀನ್‌ ವಿವರಿಸಿದರು.

‘ಪ್ರಾಣಿ–ಮಾನವ ಸಂಘರ್ಷ, ಕಾಡಿನಲ್ಲಿ ಮನುಷ್ಯನ ವರ್ತನೆ, ಪಕ್ಷಿ ಗೂಡುಗಳ ಸಂರಕ್ಷಣೆ ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಅ.10ರಂದು ರಘು ದೀಕ್ಷಿತ್‌ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಸಿರು ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.

ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಮೋಹನ್‌, ಕೆಇಬಿ ಷಣ್ಮುಖಪ್ಪ, ಶಿವರಾಮ್‌, ಸೋಮಶೇಖರ್‌, ಮುಹಿಬುಲ್ಲಾ ಇದ್ದರು.

ವಾಲಿಬಾಲ್‌ ಆಟ ನಿಸರ್ಗದ ಕೈಯಲ್ಲಿದೆ. ಮಳೆ ಸುರಿಸುವ ಹಾಗೂ ನಿಯಂತ್ರಿಸುವ ಶಕ್ತಿ ಯಾರಲ್ಲೂ ಇಲ್ಲ. ಆಹಾರ ಮೇಳ ನಿರಾತಂಕವಾಗಿ ನಡೆಯಲಿದೆ.

- ಶಿವಮೂರ್ತಿ ಮುರುಘಾ ಶರಣರು,ಮುರುಘಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT