ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗಿಲ್ಲ ಅಧ್ಯಕ್ಷ-ಉಪಾಧ್ಯಕ್ಷರು

Published 15 ಜನವರಿ 2024, 6:21 IST
Last Updated 15 ಜನವರಿ 2024, 6:21 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಘೋಷಣೆ ವಿಳಂಬದಿಂದ ಇಲ್ಲಿನ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 2 ವರ್ಷ ಕಳೆದರೂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಅಧಿಕಾರವಿಲ್ಲದೆ ಭ್ರಮನಿರಸನಗೊಂಡಿದ್ದಾರೆ.

ನಾಯಕನಹಟ್ಟಿ ಪಟ್ಟಣದಲ್ಲಿ 2011ರ ಜನಗಣತಿಯ ಪ್ರಕಾರ 15,000ಕ್ಕೂ ಹೆಚ್ಚು ಇದ್ದ ಕಾರಣ 2015 ಜ.9ರಂದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಪಟ್ಟಣ ಪಂಚಾಯಿತಿ ಪುನರ್‌ ರಚನೆಯಾಗಿ, 16 ವಾರ್ಡ್‍ಗಳನ್ನು ರಚಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿತ್ತು.

2016 ಜ. 22ರಂದು ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 2016 ಏ.24ರಂದು 16 ವಾರ್ಡ್‍ಗಳಿಗೆ ಮೊದಲ ಬಾರಿಗೆ ಚುನಾವಣೆ ನಡೆಸಲಾಗಿತ್ತು. ಹಾಗೇ 2021ರ ಮೇ 30ಕ್ಕೆ ಮೊದಲ ಅವಧಿ ಮುಕ್ತಾಯವಾಗಿತ್ತು. ನಂತರ ವಾರ್ಡ್‍ಗಳ ಮೀಸಲಾತಿ ಮರುವಿಂಗಡಣೆ ವಿಷಯವು ನ್ಯಾಯಾಲಯದ ಮೆಟ್ಟಿಲೇರಿ 6 ತಿಂಗಳು ವಿಳಂಬವಾಯಿತು. ಎಲ್ಲ ದಾವೆಗಳ ಇತ್ಯರ್ಥದೊಂದಿಗೆ ಅಂತಿಮವಾಗಿ 2ನೇ ಅವಧಿಗೆ ಚುನಾವಣೆ ನಡೆಸಲು ಚುನಾವಣೆ ಆಯೋಗ ಮತ್ತು ಸರ್ಕಾರ 2021ರ ನವೆಂಬರ್ 29ರಂದು ಅಧಿಸೂಚನೆ ಹೊರಡಿಸಿತು.

2021ರ ಡಿ.27ರಂದು 16 ವಾರ್ಡ್‍ಗಳಿಗೆ ಚುನಾವಣೆ ನಡೆದು 2021ರ ಡಿ.30ಕ್ಕೆ ಫಲಿತಾಂಶ ಪ್ರಕಟವಾಯಿತು. ಚುನಾವಣೆಯಲ್ಲಿ 11 ವಾರ್ಡ್‍ಗಳಲ್ಲಿ ಕಾಂಗ್ರೆಸ್, 2 ಬಿಜೆಪಿ, 3 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದರು. ನಂತರ ಎರಡನೆ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿಷಯದ ಪ್ರಕರಣವೊಂದು ನ್ಯಾಯಾಲಯದಲ್ಲಿರುವುದರಿಂದ ಸರ್ಕಾರ ಮತ್ತು ಚುನಾವಣೆ ಆಯೋಗವು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಗೊಳಿಸಿಲ್ಲ. ಇದರಿಂದ ಇಲ್ಲಿನ ಪಟ್ಟಣ ಪಂಚಾಯಿತಿಗೆ 2021ರ ಮೇ 30ರಿಂದ ಇಲ್ಲಿಯವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಚುನಾವಣೆಯಲ್ಲಿ ಗೆದ್ದ ಸದಸ್ಯರು ಸಹ ಅಧಿಕಾರವಿಲ್ಲದೆ ವಾರ್ಡ್‍ಗಳ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.

ಕುಸಿದ ಸ್ಥಳೀಯ ಆಡಳಿತ ಯಂತ್ರ: ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿಗೆ ಸಂಬಂಧಿಸಿದ ಗೊಂದಲ ಹಾಗೂ ಮೀಸಲಾತಿ ಘೋಷಣೆಯ ವಿಳಂಬದಿಂದ ಗೆದ್ದ ಸದಸ್ಯರಿಗೆ ಅಧಿಕಾರವಿಲ್ಲದಿರುವುದರಿಂದ ಪಟ್ಟಣ ಪಂಚಾಯಿತಿ ಆಡಳಿತ ಯಂತ್ರ ಕುಸಿದಿದೆ.

ಆಡಳಿತ ನೋಡಿಕೊಳ್ಳಲು ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್‌ ಅವರು ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಇಲ್ಲಿ ಮುಖ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಕಂದಾಯ ನಿರೀಕ್ಷಕರೇ ಪ್ರಭಾರ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರಿಲ್ಲದೇ ಇರುವುದರಿಂದ ಸರ್ಕಾರ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಿದೆ.

ಆಡಳಿತಾಧಿಕಾರಿಯಾದ ತಹಶೀಲ್ದಾರ್ ತಮ್ಮ ಕಾರ್ಯಭಾರದ ಒತ್ತಡಗಳಿಂದ ಇಲ್ಲಿನ ಪ.ಪಂ. ಕಚೇರಿಗೆ ನಿಯಮಿತವಾಗಿ ಸಕಾಲಕ್ಕೆ ಬರುತ್ತಿಲ್ಲ. ಬದಲಾಗಿ ಪ.ಪಂ. ಸಿಬ್ಬಂದಿಯೇ ತಹಶೀಲ್ದಾರ್ ಕಚೇರಿಗೆ ಕಡತಗಳನ್ನು ಹೊತ್ತೊಯ್ದು ಸಹಿ ಸೇರಿದಂತೆ ಆಡಳಿತಾತ್ಮಕ ಅನುಮೋದನೆಗಳನ್ನು ಪಡೆಯುತ್ತಿದ್ದಾರೆ. ಕೇಂದ್ರಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳನ್ನು, ಅಹವಾಲುಗಳನ್ನು ಆಲಿಸುವವರೇ ಇಲ್ಲದಂತಾಗಿದೆ.

ನಾಯಕನಹಟ್ಟಿ ಪಟ್ಟಣವು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ, ಆಡಳಿತಾತ್ಮಕವಾಗಿ ಚಳ್ಳಕೆರೆ ತಾಲ್ಲೂಕಿಗೆ ಸೇರಿದೆ. ಆದರೆ ಇಂದಿಗೂ ಪಟ್ಟಣದ ಅಭಿವೃದ್ಧಿಗಾಗಿ ನಾಯಕತ್ವದ ಕೊರತೆ ಮತ್ತು ಬದ್ಧತೆಯಿರುವ ಸಿಬ್ಬಂದಿ, ಅಧಿಕಾರಿಗಳ ಕೊರತೆ ಕಾಡುತ್ತಿದೆ.

ಕಳೆದ 3 ವರ್ಷಗಳಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಅಧಿಕಾರಿಗಳಿಲ್ಲ. ಕೂಡಲೇ ಪ.ಪಂ.ಗೆ ಶಾಶ್ವತ ಮುಖ್ಯಾಧಿಕಾರಿಯನ್ನು ಸರ್ಕಾರ ನೇಮಿಸಬೇಕು
ಜೆ.ಆರ್.ರವಿಕುಮಾರ್., 9ನೇ ವಾರ್ಡ್ ಸದಸ್ಯ
ಚುನಾವಣೆಯಲ್ಲಿ ಗೆದ್ದು 2ವರ್ಷ ತುಂಬಿದೆ. ವಾರ್ಡ್‍ಗಳ ಸಮಸ್ಯೆಗಳನ್ನು ಚರ್ಚಿಸಲು ಅಧಿಕೃತ ಸಭೆಗಳು ನಡೆಯುತ್ತಿಲ್ಲ. ಸರ್ಕಾರದ ಅನುದಾನಗಳು ವಾರ್ಡ್‍ವಾರು ವಿಂಗಡಣೆಯಾಗುತ್ತಿಲ್ಲ. ಇದರಿಂದ ವಾರ್ಡ್‍ಗಳ ಮೂಲಸೌಕರ್ಯಗಳ ಈಡೇರಿಕೆಗೆ ದೊಡ್ಡ ಸಮಸ್ಯೆಯಾಗಿದೆ
ಬಿ.ವಿನುತಾ, 13ನೇ ವಾರ್ಡ್ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT